ವೀರಾಜಪೇಟೆ, ಆ.21: ಕೊಡಗಿನಲ್ಲಿ ಪ್ರಕೃತಿ ವಿಕೋಪದ ಮಹಾ ದುರಂತದಿಂದ ಸಾವು- ನೋವುಗಳು ಸಂಭವಿಸಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವದೇ ತಾರತಮ್ಯವಿಲ್ಲದೆ ತುರ್ತಾಗಿ ಐನೂರು ಕೋಟಿ ರೂ. ಬಿಡುಗಡೆ ಮಾಡುವಂತೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೊಡಗಿನಲ್ಲಿ ಮಹಾ ಮಳೆಯ ದುರಂತದಿಂದ ಸಾವಿರಾರು ಕೋಟಿ ಆಸ್ತಿ ಪಾಸ್ತಿಗಳು, ಸರಕಾರದ ಕಾಮಗಾರಿಗಳು ಹಾನಿಗೊಳಗಾಗಿವೆ. ಈಗ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಪರಿಹಾರ ಹಣ ಕಿಂಚಿತ್ತು ಸಾಲದು. ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟಗೊಂಡಿರುವದನ್ನು ಪರಿಶೀಲಿಸಿ ಅಂದಾಜು ಪಟ್ಟಿ ತಯಾರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಕೊಡಗಿನ ಎಲ್ಲ ಕೊಡವ ಸಮಾಜಗಳು ಸಂಘ ಸಂಸ್ಥೆಗಳು ಈ ಬಾರಿಯ ಕೈಲ್ ಮಹೂರ್ತವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸುವಂತಾಗಬೇಕು.

ಸಾರ್ವಜನಿಕವಾಗಿ ಕೈಲ್ ಮುಹೂರ್ತ ಹಾಗೂ ಸಂತೋಷಕೂಟವನ್ನು ಆಚರಿಸದೆ ಇದರ ವೆಚ್ಚವನ್ನು ಸಂತ್ರಸ್ತರ ಪರಿಹಾರ ನಿಧಿಗೆ ತಲಪಿಸುವಂತೆ ವಿನಂತಿಸಿಕೊಂಡರಲ್ಲದೆ ಕೊಡಗಿನಲ್ಲಿ ಆದ ದುರಂತವನ್ನು ಕೆಲವರು ದುರುಪಯೋಗ ಪಡಿಸಿಕೊಂಡು ನಕಲಿ ಖಾತೆ ತೆರೆದು ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುವದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸಿದರು.

ಅಪ್ಪಚ್ಚಕವಿ ಜನ್ಮ ದಿನೋತ್ಸವದ ಪ್ರಧಾನ ಸಂಚಾಲಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿ ಅಪ್ಪಚ್ಚ ಕವಿ ಜನ್ಮೋತ್ಸವವನ್ನು ಈ ಹಿಂದ ಸೆಪ್ಟೆಂಬರ್ 21ರಂದು ನಡೆಸುವಂತೆ ನಿರ್ಧರಿಸಲಾಗಿತ್ತು. ಆದರೆ ಕೊಡಗು ಪ್ರಕೃತಿ ವಿಕೋಪದ ದುರಂತವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅಪ್ಪಚ್ಚ ಕವಿಯ ಸಮಾರಂಭ ಹಾಗೂ ಶಾಲಾ ಕಾಲೇಜುಗಳಲ್ಲಿ ಈ ಪ್ರಯುಕ್ತ ನಡೆಯಲಿದ್ದ ಸ್ಪರ್ಧೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಮಾಜದ ಕಾರ್ಯಾಧ್ಯಕ್ಷ ಪ್ರೊ. ಇಟ್ಟಿರ ಬಿದ್ದಪ್ಪ, ಉಪಾಧ್ಯಕ್ಷ ಅಜ್ಜಿಕುಟ್ಟೀರ ಎನ್.ಮಾದಯ್ಯ ಸುಬ್ರಮಣಿ, ಗೌ:ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ, ಕಾಳಿಮಾಡ ಮೋಟಯ್ಯ ಉಪಸ್ಥಿತರಿದ್ದರು.