ಮಡಿಕೇರಿ, ಆ. 21: ಮೇಘ ಸ್ಫೋಟ ಹಾಗೂ ಜಲಸ್ಫೋಟದಿಂದ ಕೊಡಗು ಜಿಲ್ಲೆ ತತ್ತರಿಸಿದ್ದು, ಹಲವು ಸಮಸ್ಯೆಗಳ ನಡುವೆಯೇ ಮುಂದುವರಿಯುತ್ತಿದ್ದ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಮೇಲೆ ಇದು ಮತ್ತಷ್ಟು ತೀವ್ರ ಪ್ರಹಾರವಾದಂತಾಗಿದೆ. ಶೈಕ್ಷಣಿಕವಾಗಿ ರಾಜ್ಯ ವ್ಯಾಪಿಯಾಗಿ ಶಿಕ್ಷಣ ಇಲಾಖೆಯ ಮೂಲಕ ಯೋಜನೆಗಳು-ನಿಬಂಧನೆಗಳು ಪೂರ್ವಯೋಜಿತವಾಗಿರುತ್ತವೆ. ಮಹಾಮಳೆಗೆ ನಲುಗಿರುವ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಡಿಪಾಟಲು ಪಡುವಂತಾಗಿದ್ದು, ಮುಂದಿನ ಭವಿಷ್ಯವೇನು.. ಎಂಬ ಆತಂಕ ಸೃಷ್ಟಿಯಾಗಿದೆ.

ಜೂನ್ ತಿಂಗಳಿನಲ್ಲಿ ಶಾಲೆ-ಕಾಲೇಜುಗಳು ಪ್ರಾರಂಭಗೊಂಡಿವೆ. ಆದರೆ ಈ ಬಾರಿ ಜೂನ್ ಎರಡನೆಯ ವಾರದಿಂದಲೇ ಕೊಡಗಿನಲ್ಲಿ ವಾಯು-ವರುಣನ ಅಬ್ಬರ ಕಂಡುಬಂದಿದ್ದು, ಶಾಲಾ-ಕಾಲೇಜುಗಳಿಗೆ ಅನಿವಾರ್ಯವಾಗಿ ಪದೇ ಪದೇ ರಜೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲೆಗಳು ಪ್ರಾರಂಭಗೊಂಡು ಕೇವಲ ಎರಡೂವರೆ ತಿಂಗಳಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಈ ತನಕ ಸುಮಾರು 20 ದಿನಗಳಷ್ಟು ರಜೆಯನ್ನು ನೀಡಲಾಗಿದೆ.

ಸರಕಾರದ ಯೋಜನೆಯಂತೆ ಈಗಾಗಲೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು, ಸಮವಸ್ತ್ರಗಳು, ಶೂ, ಸಾಕ್ಸ್‍ನಂತಹ ಪರಿಕರಗಳನ್ನು ವಿತರಿಸಿಯಾಗಿತ್ತು. ನಿಗದಿತವಾಗಿ ಪಠ್ಯ ಕ್ರಮಗಳೂ ಆಯಾ ಸಮಯದಲ್ಲೇ ಪೂರ್ಣಗೊಳ್ಳಬೇಕು. ಮಾತ್ರವಲ್ಲ ಶಾಲಾ ಕ್ರೀಡಾಕೂಟಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಬೇಕು. ಮಹಾಮಳೆಯ ನಡುವೆಯೂ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರು ಅದು ಹೇಗೋ ಪರಿಸ್ಥಿತಿಯನ್ನು ನಿಬಾಯಿಸಿಕೊಂಡು ಮುಂದುವರಿ ಯುತ್ತಿದ್ದರು. ಆದರೆ, ಪ್ರಸ್ತುತದ ಪ್ರಾಕೃತಿಕ ವಿಕೋಪ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಮತ್ತೊಂದು ಗದಾ ಪ್ರಹಾರ ನೀಡಿದಂತಾಗಿದೆ.

ವಾಯು-ವರುಣನ ಆರ್ಭಟ ಬೆಟ್ಟ ಕುಸಿತ, ಭೂಕುಸಿತ, ರಸ್ತೆ ಸಂಪರ್ಕ ಕಡಿತದಂತಹ ಪರಿಸ್ಥಿತಿ ಈ ಸಾಲಿನಲ್ಲಿ ವಿದ್ಯಾರ್ಥಿಯ ಓದಿನ ಮೇಲೆ ದುಷ್ಪರಿಣಾಮ ಬೀರಿದೆ. ಪ್ರಸ್ತುತದ ಸನ್ನಿವೇಶದಿಂದ ಮಡಿಕೇರಿ ತಾಲೂಕಿನ ಕೆಲವಾರು ಪ್ರದೇಶಗಳು ಹಾಗೂ ಸೋಮವಾರಪೇಟೆ ತಾಲೂಕಿನ ಹಲವು ಗ್ರಾಮಗಳು ನಾಮಾವಶೇಷವಾದಂತಾಗಿದ್ದು, ಗ್ರಾಮಗಳೇ ಕಣ್ಮರೆಯಾಗಿವೆ. ಜನತೆ ಪ್ರಾಣ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಬೀದಿಗೆ ಬರುವಂತಾಗಿದೆ. ಊರಿಗೆ ಊರೇ ಇಲ್ಲವಾಗಿದ್ದು, ಹಲವಾರು ಮನೆಗಳು ಧರಾಶಾಹಿ ಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪೋಷಕರೊಂದಿಗೆ ವಿದ್ಯಾರ್ಥಿಗಳು ಕೂಡ ತಮ್ಮ ಪಠ್ಯ ಪುಸ್ತಕ, ನೋಟ್ ಬುಕ್ ಸಹಿತ ಇನ್ನಿತರ ಸೌಲಭ್ಯಗಳನ್ನು ಕಳೆದು ಕೊಂಡಿದ್ದಾರೆ. ಈತನಕ ಕಲಿತಿದ್ದ ಪಾಠ ಪ್ರವಚನಗಳು ಮರೆಯುವಂತಾದರೆ ಮುಂದಿನ ದಿನಗಳಲ್ಲಿ ಮತ್ತೆ ಶಾಲೆಗೆ ತೆರಳುವದು ಎಲ್ಲಿ... ಹೇಗೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಭಾರೀ ಸಂಕಷ್ಟಕ್ಕೆ ಒಳಗಾಗಿರುವ ಗ್ರಾಮಗಳಲ್ಲಿ ಜನವಾಸವೇ ಇಲ್ಲದಂತಾಗಿದ್ದು, ಇಂತಹ ವ್ಯಾಪ್ತಿಯ ಸುತ್ತ ಮುತ್ತಲಿನ ಶಾಲೆಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಶಾಲಾ ದಾಖಲಾತಿ ಯಿಂದ ಹಿಡಿದು ಸಂಪೂರ್ಣವಾಗಿ ಮರು ವ್ಯವಸ್ಥೆಯೇ ಕಲ್ಪಿತವಾಗಬೇಕಾಗಿದೆ. ಮೊದಲೇ ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಶಿಕ್ಷಕರು ಕೂಡ ಇತರೆಡೆಗಳಿಂದಲೇ ತೆರಳುತ್ತಿದ್ದರು. ಇದೀಗ ಮಳೆ ಕಡಿಮೆ ಯಾಗಿ ಶಾಲೆಗಳು ತೆರೆಯುವಂತಾ ದರೂ, ಈತನಕ ಹೋಗುತ್ತಿದ್ದ ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರಿಗೂ ದುಸ್ಸಾಹಸ ವಾಗಲಿದೆ. ಹಲವಾರು ಕಡೆಗಳಿಗೆ ರಸ್ತೆ ಸಂಪರ್ಕಗಳೇ ಇಲ್ಲವಾಗಿದೆ. ಇದು ತೀವ್ರತರವಾದ ಸಂಕಷ್ಟಕ್ಕೆ ಈಡಾಗಿರುವ ಸ್ಥಳಗಳಲ್ಲಿನ ಸಮಸ್ಯೆಯಾದರೆ ಇನ್ನು ಇಡೀ ಜಿಲ್ಲೆಯಾದ್ಯಂತವೂ ಶಾಲೆಗಳಿಗೆ ದಿನಗಟ್ಟಲೆ ರಜೆ ನೀಡಬೇಕಾದ ಪರಿಸ್ಥಿತಿಯಿಂದ ಕೊಡಗಿನ ವಿದ್ಯಾರ್ಥಿ ಗಳು ಇತರೆಡೆಗಳಿಗಿಂತ ಒಂದೆರಡು ತಿಂಗಳು ಹಿಂದೆ ಬೀಳುವಂತಾಗಿದೆ.

ಬಹುತೇಕ ಶಾಲೆಗಳು... ಪರಿಹಾರ ಕೇಂದ್ರಗಳು

ಪ್ರವಾಹ ಪರಿಸ್ಥಿತಿಯಿಂದಾಗಿ ಸಂತ್ರಸ್ತರಾಗಿರುವವರಿಗೆ ಆಶ್ರಯ ಕಲ್ಪಿಸಲು ಕೊಡಗಿನಲ್ಲಿ ಇತರೆಡೆಗಳಂತೆ ಸೂಕ್ತ ಜಾಗಗಳಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹಲವಾರು ಶಾಲೆಗಳು ಪರಿಹಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇಲ್ಲಿ ಆಶ್ರಯ ನೀಡಿರುವ ಜನರಿಗೆ ಪುನರ್ ವ್ಯವಸ್ಥೆಯಾಗುವ ತನಕ ಈ ಶಾಲೆಗಳು ಬಹುಶಃ ಪರಿಹಾರ ಕೇಂದ್ರಗಳಾಗಿಯೇ ಉಳಿಯಬಹುದು. ಸರಕಾರ ಪುಸ್ತಕ, ನೋಟ್ ಬುಕ್ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಬಹುದಾದರೂ ನಿರ್ದಿಷ್ಟ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಯಾವ ರೀತಿಯ ಸೌಲಭ್ಯ ಒದಗಿಸಲು ಸಾಧ್ಯ ಎಂಬದು ಈಗಿನ ಪ್ರಶ್ನೆಯಾಗಿದೆ.

ಈಗಾಗಲೇ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳು ಕಳೆದುಕೊಂಡಿರುವ ಸವಲತ್ತುಗಳನ್ನು ಮತ್ತೆ ಒದಗಿಸುವದಾಗಿ ಹಾಗೂ ವಿಶೇಷ ತರಗತಿಗಳನ್ನು ನಡೆಸುವದಾಗಿ ಪ್ರಕಟಿಸಿದ್ದಾರೆ. ಸೌಲಭ್ಯಗಳನ್ನು ಮತ್ತೆ ನೀಡಬಹುದು. ವಿಶೇಷ ತರಗತಿಗಳನ್ನು ಶಿಕ್ಷಕರಿಂದ ಮಾಡಿಸಬಹುದು. ಆದರೆ, ಎಲ್ಲಿ ಯಾವ ರೀತಿ ಎಂಬದು ಗಂಭೀರ ವಿಚಾರವಾಗಿದೆ.

ಸಂತ್ರಸ್ತ ಪೀಡಿತ ಪ್ರದೇಶದ ವ್ಯಾಪ್ತಿಯ ಮಕ್ಕಳಿಗೆ ಶಾಲಾ ದಾಖಲಾತಿಯಿಂದ ಹಿಡಿದು ಸಂಪೂರ್ಣವಾಗಿ ಮರು ವ್ಯವಸ್ಥೆಯೇ ಕಲ್ಪಿತವಾಗಬೇಕಾದ ಅನಿವಾರ್ಯತೆ ಇದೆ. ಈ ವಿಚಾರ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿದ್ದು, ಜಿಲ್ಲೆಯ ಮಟ್ಟಿಗೆ ಸರಕಾರ ಪ್ರಸಕ್ತ ವರ್ಷ ಶೈಕ್ಷಣಿಕವಾಗಿ ಹೊಸ ನೀತಿಯನ್ನು ಅನುಸರಿಸಬೇಕಾಗಿದೆ ಎಂಬ ವಿಚಾರದ ಕುರಿತು ಇದೀಗ ಶಿಕ್ಷಣ ಪ್ರೇಮಿಗಳು ಚರ್ಚೆ ನಡೆಸುವಂತಾಗಿದೆ.

ಕೃಪಾಂಕ ನೀಡಿಕೆಯ ಅಗತ್ಯತೆ

ವಿದ್ಯಾರ್ಥಿಗಳ ಪೋಷಕರು ಆಸ್ತಿ-ಪಾಸ್ತಿ, ಮನೆ ಮಠಗಳನ್ನು ಕಳೆದುಕೊಂಡು ಅತಂತ್ರರಾಗಿದ್ದರೆ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ. ವಿದ್ಯಾರ್ಥಿ ಗಳ ಬದುಕಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಅತ್ಯಂತ ಪ್ರಮುಖವಾಗಿದ್ದು, ಈ ಬಾರಿಯ ಪ್ರಾಕೃತಿಕ ವಿಕೋಪ ಇವರ ವ್ಯಾಸಂಗದ ಮೇಲೆ ಅಡಚಣೆ ಯಾಗಿದೆ. ಈ ನಿಟ್ಟಿನಲ್ಲಿ ನೆರೆಪೀಡಿತ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ಸರಕಾರ ಮುಂದಾಗಬೇಕು ಎಂಬ ಬೇಡಿಕೆ-ಚರ್ಚೆಗಳೂ ಕೇಳಿಬರುತ್ತಿವೆ.

ಸ್ಥೈರ್ಯ ತುಂಬುವಂತಾಗಬೇಕು

ಜಿಲ್ಲೆಯಲ್ಲಿ ಪ್ರಸ್ತುತ 40ಕ್ಕೂ ಅಧಿಕ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಮಾತ್ರವಲ್ಲದೆ ಬಂಧು-ಬಳಗದವರ ಮನೆಗಳಲ್ಲಿಯೂ ಹಲವರು ಆಶ್ರಯ ಪಡೆದಿದ್ದು, ಪೋಷಕರ ಆತಂಕದ ವದನದ ನಡುವೆ ಉದ್ಭವಿಸಿದ ಪರಿಸ್ಥಿತಿಯನ್ನು ಅವಲೋಕಿಸಿರುವ ವಿದ್ಯಾರ್ಥಿಗಳೂ ಭಯ-ವಹ್ವಲರಾಗಿ ಪಿಳಿ ಪಿಳಿ ಕಣ್ಣು ಬಿಡುವಂತಾಗಿದೆ. ಈ ನಿಟ್ಟಿನಲ್ಲಿ ಆಯಾ ಪರಿಹಾರ ಕೇಂದ್ರಗಳಲ್ಲಿರುವ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಪಾಠ ಪ್ರವಚನಗಳನ್ನು ಬೋಧಿಸುವ ದರೊಂದಿಗೆ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಪ್ರಯತ್ನ ನಡೆಸಲೂ ಸಂಬಂಧಿಸಿದ ವರು ಮುಂದಾಗಬೇಕು ಎಂಬ ಕುರಿತು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-ಶಶಿ ಸೋಮಯ್ಯ