ಸಿದ್ದಾಪುರ, ಆ. 21: ಕಳೆದ ಕೆಲವು ದಿನಗಳಿಂದ ಸುರಿದ ಮಹಾ ಮಳೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳಿಗೆ ಹಾನಿಯಾಗಿದೆ. ಕರಡಿಗೋಡುವಿನಲ್ಲಿ ಪ್ರವಾಹದ ನೀರು ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿತ್ತು.

ಪ್ರವಾಹದ ನೀರು ಕರಡಿಗೋಡು ಗ್ರಾಮಕ್ಕೆ ಸುತ್ತುವರಿದುದರಿಂದ ನದಿ ದಡದ 126 ಮನೆಗಳು ಜಲಾವೃತಗೊಂಡಿದ್ದವು. ನಾಲ್ಕು ದಿನಗಳ ಕಾಲ ಪ್ರವಾಹದ ನೀರು ಅಪಾಯದ ಮಟ್ಟದಲ್ಲಿ ಹರಿದಿತ್ತು. ನದಿ ದಡದ ಅನೇಕ ಮನೆಗಳು ಕುಸಿದಿವೆ. ಹಲವಾರು ಮನೆಗಳು ಬಿರುಕು ಬಿಟ್ಟಿವೆ.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು, ಗ್ರಾಮ ಲೆಕ್ಕಿಗರಾದ ಅನಿಲ್‍ಕುಮಾರ್, ಮಂಜುನಾಥ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಪೊಲೀಸರ ಸಹಕಾರದಿಂದ ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

ಕಂದಾಯ ಇಲಾಖಾಧಿಕಾರಿಗಳು ಹಗಲು-ರಾತ್ರಿ ಎಡಬಿಡದೇ ಕರಡಿಗೋಡು, ಗುಹ್ಯ ಗ್ರಾಮಗಳಲ್ಲಿ ಹಾಗೂ ಕೊಂಡಂಗೇರಿಯಲ್ಲಿ ಮೊಕ್ಕಾಂ ಹೂಡಿ ಯಾವದೇ ಪ್ರಾಣಹಾನಿ ಆಗದಂತೆ ಶ್ರಮವಹಿಸಿದರು. ಸಂತ್ರಸ್ತರಿಗೆ ಅಗತ್ಯವಾದ ಆಹಾರ ಹಾಗೂ ಕಂಬಳಿ ಹೊದಿಕೆಗಳನ್ನು ವಿತರಣೆ ಮಾಡಿದರು.

ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಕಂದಾಯ ಇಲಾಖೆಯ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ ಎಂದು ಕಂದಾಯ ಪರಿವೀಕ್ಷಕ ವಿನು ‘ಶಕ್ತಿ’ಗೆ ತಿಳಿಸಿದರು. ಕರಡಿಗೋಡು ಗ್ರಾಮದಲ್ಲಿ ಹಲವಾರು ಕಾಫಿ ತೋಟಗಳು ನೀರಿನಲ್ಲಿ ಮುಳುಗಿದ್ದವು. ಗದ್ದೆಗಳಲ್ಲಿ ನಿಂತ ನೀರು ಭತ್ತದ ಸಸಿಗಳಿಗೆ ಹಾನಿಯಾಗಿದೆ.

ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳ ಸಂಪರ್ಕ ರಸ್ತೆಗಳು ಜಲಾವೃತಗೊಂಡು ನಿವಾಸಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಗುಹ್ಯ ಗ್ರಾಮದಲ್ಲಿ ಕೂಡ ಪ್ರವಾಹದ ನೀರಿಗೆ ಸಿಲುಕಿ ಅನೇಕ ಮನೆಗಳು ಕುಸಿದು ಬಿದ್ದಿದೆ.

ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದ ಕಾಡುವಿನಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದ್ದು, ಅಪಾಯದಲ್ಲಿದ್ದ ಮನೆಯ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಬರಡಿಯ ಕುಂಬಾರ ಗುಂಡಿಯಲ್ಲಿ ಹಲವು ಮನೆಗಳ ಒಳಗೆ ಪ್ರವಾಹದ ನೀರು ನುಗ್ಗಿ ಆತಂಕ ಸೃಷ್ಟಿಯಾಗಿತ್ತು. ನದಿ ದಡದ ಹಲವು ನಿವಾಸಿಗಳು ಶೇಖರಿಸಿಟ್ಟಿದ್ದ ಸೌದೆ, ಸಾಕಿದ ಕೋಳಿಗಳು ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗಿವೆ. ಕೊಂಡಂಗೇರಿಯಲ್ಲಿ ಈ ಬಾರಿ ಪ್ರವಾಹದ ನೀರು 50ಕ್ಕೂ ಅಧಿಕ ಮನೆಗಳಿಗೆ ನುಗ್ಗಿ 10ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಸಂತ್ರಸ್ತರಿಗೆ ಹಲವಾರು ಸಂಘ-ಸಂಸ್ಥೆಗಳು ವಿವಿಧ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಕೊಂಡಂಗೇರಿಯಲ್ಲಿ ಪ್ರವಾಹದ ನೀರಿನಲ್ಲಿ ಜಾನುವಾರುಗಳು ಮೃತಪಟ್ಟಿವೆ. ನೆಲ್ಲಿಹುದಿಕೇರಿಯಲ್ಲಿ ಗ್ರಾಮ ಲೆಕ್ಕಿಗರಾದ ಅನುಷ, ಪಿ.ಡಿ.ಓ. ನಂಜುಂಡಸ್ವಾಮಿ ಸ್ಥಳದಲ್ಲೇ ಹಾಜರಿದ್ದರು.

ಸಿದ್ದಾಪುರದಿಂದ ಮಡಿಕೇರಿಗೆ ತೆರಳುವ ಎರಡು ರಸ್ತೆಗಳಲ್ಲಿ ಬೆಟ್ಟದಿಂದ ಬರೆಗಳ ಮಣ್ಣು ಕುಸಿದಿದ್ದು, ಯಾವದೇ ಬಸ್‍ಗಳ ಸಂಚಾರವಿಲ್ಲದೆ ಜನರು ಮಡಿಕೇರಿಗೆ ತೆರಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಡಗದಾಳು ಹಾಗೂ ಮೇಕೇರಿ ರಸ್ತೆಯು ಇಕ್ಕಾಟ್ಟಾಗಿದ್ದು, ಮಣ್ಣು ಕುಸಿದಿದ್ದು, ವಾಹನಗಳು ಅಪಾಯದಿಂದಲೇ ಸಂಚರಿಸುತ್ತಿವೆ. ಗಾಳಿ-ಮಳೆಯಿಂದಾಗಿ ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಚೆಟ್ಟಳ್ಳಿ-ಕಾನ್‍ಂಗಾಡು ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸವಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಬೋಟ್ ಹಾಗೂ ತೆಪ್ಪಗಳನ್ನು ಬಳಸಿಕೊಳ್ಳ ಲಾಯಿತು. - ವಾಸು