ಕೂಡಿಗೆ, ಆ. 21: ಹಾರಂಗಿ ಅಣೆಕಟ್ಟೆಯಿಂದ ಹೆಚ್ಚು ನೀರು ನದಿಗೆ ಹರಿಸಿದ ಪರಿಣಾಮ ನದಿ ದಡದ ಸಮೀಪದಲ್ಲಿನ ಕೂಡುಮಂಗಳೂರು ಸಹಕಾರ ಸಂಘದ ಗೋದಾಮಿಗೆ ನೀರು ನುಗ್ಗಿ ಲಾರಿ ಗೊಬ್ಬರ ನೀರು ಪಾಲಾಗಿದೆ.

ನದಿಯ ನೀರು ಗೋದಾಮಿಗೆ ನುಗ್ಗುವಷ್ಟರಲ್ಲಿ ಸಾರ್ವಜನಿಕರ ಮತ್ತು ಅಗ್ನಿಶಾಮಕ ದಳದ ಸಹಕಾರದಿಂದ 7 ಲಾರಿಯಷ್ಟು ಗೊಬ್ಬರವನ್ನು ಸ್ಥಳಾಂತರಿಸಲಾಯಿತು. ಇದರ ಜೊತೆಯಲ್ಲಿ ಆಹಾರ ಇಲಾಖೆಯ ವತಿಯಿಂದ ಪಡಿತರದಾರರಿಗೆ ವಿತರಿಸಲು ಸಂಗ್ರಹಿಸಿದ್ದ 100 ಚೀಲ ಅಕ್ಕಿಯಲ್ಲಿ 20 ಚೀಲ ಅಕ್ಕಿ ಮುಳುಗಿ ನಷ್ಟ ಉಂಟಾಗಿದೆ.

ಮುರಿದ ತೂಗುಸೇತುವೆ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ 20 ಗ್ರಾಮಗಳಿಗೆ ಸಂಪರ್ಕಕ್ಕೆ ಅನುಕೂಲವಾಗುವಂತೆ ಕೂಡಿಗೆ ಸಮೀಪ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ 6 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ತೂಗುಸೇತುವೆ ಹಾನಿಗೊಂಡಿದೆ. ಸೇತುವೆಯು ಒಂದು ಭಾಗದಲ್ಲಿ ತುಂಡಾಗಿ ಇನ್ನುಳಿದ ತೂಗುಸೇತುವೆ ಮುರಿದ ಕಬ್ಬಿಣದ ಸಲಾಕೆಯಂತಾಗಿದೆ.

ನಾಲ್ಕು ಮನೆಗಳು ನೆಲಸಮ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಬಡಾವಣೆಯಲ್ಲಿ ಎರಡು ಮನೆಗಳು ನೀರಿನಿಂದ ಜಲಾವೃತಗೊಂಡ ಪರಿಣಾಮ ನೆಲಸಮಗೊಂಡಿವೆ. ಅದೇ ರೀತಿ ಸೀಗೆಹೊಸೂರು ಮತ್ತು ಸೀತಾಕಾಲೋನಿಯ ಎರಡು ಮನೆಗಳೂ ನೆಲಸಮಗೊಂಡಿವೆ.

ಪರಿಹಾರ ಕೇಂದ್ರ ಆರಂಭ: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಪರಿಹಾರ ಕೇಂದ್ರಗಳು ಆರಂಭಗೊಂಡಿದ್ದು, ಕೂಡಿಗೆ, ಮದಲಾಪುರ, ಹುಲುಗುಂದ, ಮುಳ್ಳುಸೋಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನೂರಾರು ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ. ಇವರಿಗೆ ಸ್ಥಳೀಯ ಆಡಳಿತ ಮಂಡಳಿ ಮತ್ತು ವಿವಿಧ ಸೇವಾ ಸಂಸ್ಥೆಗಳು ನೆರವು ನೀಡುತ್ತಿವೆ.

ನದಿ ನೀರಿನಿಂದ ಜಲಾವೃತಗೊಂಡಿದ್ದ ಸ್ಥಳಗಳು ಇದೀಗ ನೀರು ಕಡಿಮೆಯಾಗಿದ್ದು, ಮನೆಗಳಲ್ಲಿಯೂ ನೀರು ಇಂಗಿದೆ. ಮನೆಯ ಮಾಲೀಕರು ತಮ್ಮ ಮನೆಗಳಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಸ್ವಚ್ಛತೆಗೆ ಜಿಲ್ಲಾಡಳಿತದ ಆದೇಶದಂತೆ ಬ್ಲೀಚಿಂಗ್ ಪುಡಿ ಮತ್ತು ಪೆನಾಯಿಲ್‍ಗಳನ್ನು ವಿತರಿಸಿದ್ದು, ಸಂತ್ರಸ್ತರು ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ. ಕೂಡಿಗೆಯಿಂದ ಕೊಡಗಿನ ಗಡಿಭಾಗ ಶಿರಂಗಾಲದವರೆಗೆ ಕಾವೇರಿ ನದಿ ತಟದ ಹಲವು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.

ಸಂಪರ್ಕ ಸೇತುವೆ ಕುಸಿತ: ಮೈಸೂರು ಜಿಲ್ಲೆಯ ಕಣಗಾಲು ಹೋಬಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾವೇರಿ ನದಿಗೆ ಹೆಬ್ಬಾಲೆ- ಹನುಮಂತಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಇಕ್ಕೆಲ ಕುಸಿದಿದೆ. ಭಾರೀ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.