ಕುಶಾಲನಗರ, ಆ. 21: ಕುಶಾಲನಗರದ ನೆರೆ ಪೀಡಿತ ಬಡಾವಣೆಗಳ ಮನೆಗಳು ಹಾಗೂ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರ ತಂಡಗಳು ಸಂತ್ರಸ್ತರಿಗೆ ಸಹಾಯಹಸ್ತ ನೀಡುವಲ್ಲಿ ನಿರತರಾಗಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ, ರಾಮನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕ, ಕುಶಾಲನಗರ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಸ್ಟುಡೆಂಟ್ ಪೊಲೀಸ್ ಕೆಡೆಟ್ ತಂಡ ಮತ್ತು ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು ಜತೆಗೂಡಿ ಕಳೆದೆರಡು ದಿನಗಳಿಂದ ಸ್ವಚ್ಛತಾ ಕಾರ್ಯ ಕೈಗೊಂಡಿರುವ ದೃಶ್ಯ ಕಂಡುಬಂದಿದೆ.

ಕುಶಾಲನಗರ ಪ.ಪಂ. ವ್ಯಾಪ್ತಿಯ ಬಸಪ್ಪ, ಕುವೆಂಪು ಬಡಾವಣೆಯಲ್ಲಿ ನೆರೆ ಹಾವಳಿಯಿಂದ ಹಾನಿಯಾಗಿದ್ದ ಮನೆ ಮನೆಗೆ ತೆರಳಿ ಶುಚಿಗೊಳಿಸುವ ಕಾರ್ಯ ಕೈಗೊಂಡಿದ್ದಾರೆ. ಮನೆಯಲ್ಲಿ ತುಂಬಿ ನಿಂತಿದ್ದ ಕೆಸರು ಮಣ್ಣು ತೆರವುಗೊಳಿಸಿ ಬ್ಲೀಚಿಂಗ್ ಪೌಡರ್ ಅಳವಡಿಸಿ ತೊಳೆಯಲಾಗುತ್ತಿದೆ. ಹಾನಿಗೀಡಾದ ಪೀಠೋಪಕರಣ ಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಈ ತಂಡ ತೊಡಗಿಸಿಕೊಂಡಿದೆ. ಎರಡು ದಿನಗಳಲ್ಲಿ 40 ಕ್ಕೂ ಅಧಿಕ ಮನೆಗಳನ್ನು ಈ ತಂಡ ಶುಚಿಗೊಳಿಸಿದೆ. ಈ ನಡುವೆ ಬೆಂಗಳೂರು ಬಿಬಿಎಂಪಿ ಪೌರಕಾರ್ಮಿಕರ 200 ಕ್ಕೂ ಅಧಿಕ ಸಿಬ್ಬಂದಿಗಳು ಪಟ್ಟಣದಾದ್ಯಂತ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಭರದಿಂದ ಸಾಗುತ್ತಿರುವ ಸ್ವಚ್ಛತಾ ಕಾರ್ಯ ನಡುವೆ ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ವಿವಿಧೆಡೆಗಳಿಂದ ಸಂತ್ರಸ್ತರಿಗೆ ಸಹಾಯಹಸ್ತ ದೊರಕುತ್ತಿದ್ದು ಕುಶಾಲನಗರದಲ್ಲಿ ಕೆಲವೆಡೆ ದುರುಪಯೋಗವಾಗುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬೆಂಗಳೂರಿನಿಂದ ಕೊಡವ ಸಮಾಜದಿಂದ ಟ್ರಕ್‍ಗಳ ಮೂಲಕ ಜಿಲ್ಲೆಯ ವಿವಿಧ ಭಾಗಗಳಿಗೆ ಆಹಾರ, ದಿನಸಿ ಸಾಮಗ್ರಿಗಳು, ದಿನಪಯೋಗಿ ವಸ್ತುಗಳನ್ನು ಈಗಾಗಲೇ ಸರಬರಾಜು ಮಾಡಿ ಸಾವಿರಾರು ಸಂಖ್ಯೆಯ ಸಂತ್ರಸ್ತರಿಗೆ ಸರಬರಾಜು ಮಾಡಲಾಗಿದೆ. ಶ್ರೀರಂಗಪಟ್ಟಣದ ಅಭಿನವ ಭಾರತ್ ಸಂಘಟನೆ, ಹಾಸನ, ಮೈಸೂರು ಮತ್ತಿತರ ಭಾಗಗಳಿಂದ ಹತ್ತಾರು ಟ್ರಕ್‍ಗಳಲ್ಲಿ ಕುಶಾಲನಗರ ಮತ್ತು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಹಾಯಹಸ್ತ ನೀಡಲಾಗುತ್ತಿದೆ.

ರಾಜ್ಯ ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟಿಲ್ ಕುಶಾಲನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.