ಗೋಣಿಕೊಪ್ಪಲು. ಆ. 21: ಕೊಡಗಿನಲ್ಲಿ ಅತಿವೃಷ್ಟಿ ಕಾರಣ ಜಲಪ್ರಳಯ ಉಂಟಾಗಿದ್ದು ಸಾವಿರಾರು ಮಂದಿ ಸೂರು ಕಳೆದು ಕೊಂಡು ಪರಿಹಾರ ಕೇಂದ್ರ ಸೇರುವ ಪರಿಸ್ಥಿತಿ ಉಂಟಾಗಿದೆ. ಭೂಕುಸಿತದಿಂದ ಮನೆ, ಹಲವಾರು ಏಕರೆಗಳಷ್ಟು ತೋಟ ಗದ್ದೆಗಳು ಕಳೆದುಕೊಂಡು ಕಾಫಿ ಬೆಳೆಗಾರರು, ಕಾರ್ಮಿಕ ವರ್ಗ ಕಂಗಾಲಾಗಿದ್ದಾರೆ. ಸರಕಾರ, ಜಿಲ್ಲಾಡಳಿತ ಹಲವಾರು ಸಂಘ-ಸಂಸ್ಥೆಗಳು ಜಿಲ್ಲೆಯ ಜನತೆಯ ರಕ್ಷಣೆಗೆ ಟೊಂಕ ಕಟ್ಟಿ ನಿಂತಿವೆ.

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾದದಾಶ್ರಮ ರಾಷ್ಟ್ರಾದ್ಯಂತ ಇರುವ ತನ್ನ ಭಕ್ತವೃಂದ ಮತ್ತು ಅಭಿಮಾನಿಗಳಿಗೆ ಕೊಡಗಿನ ಸಮಸ್ಯೆಗೆ ಸಹಕಾರ ಕೋರಿದ ಹಿನ್ನೆಲೆ ಅಕ್ಕಿ, ಬ್ರೆಡ್, ಬಿಸ್ಕೆಟ್, ದಿನವಹಿ ಉಪಯೋಗದ ವಸ್ತುಗಳು, ಹೊಸ ಬಟ್ಟೆಬರೆ, ಕಂಬಳಿ, ಬೆಡ್‍ಶೀಟ್, ಟವೆಲ್ ಇತ್ಯಾದಿಗಳು ಹರಿದು ಬಂದಿವೆ.

ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜಿ ಮಹರಾಜ್ ಅವರು ಹಿರಿಯ ಸ್ವಾಮಿ ಜಗದಾತ್ಮಾನಂದಜೀ ಮಹರಾಜ್‍ರವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಡೆ ಸಂಚರಿಸಿ ವಸ್ತುಗಳನ್ನು ಹಂಚುತಿದ್ದಾರೆ. ಅತಿವೃಷ್ಟಿಗೀಡಾಗಿ ನಲುಗುತಿರುವ ಕುಶಾಲನಗರ, ಐಗೂರು, ಮಾದಾಪುರ, ಕಿರಗಂದೂರು, ಸುಂಟಿಕೊಪ್ಪ, ಕರಡಿಗೋಡು, ಮಡಿಕೇರಿ ಹಳ್ಳಿಗಟ್ಟು ಕುಂದಾ ಗ್ರಾಮಗಳಲ್ಲಿ ಸಂಚರಿಸಿ ನಿರಾಶ್ರಿತರಿಗೆ ಸಾಂತ್ವಾನ ಹೇಳಿ ಹಲವಾರು ವಸ್ತುಗಳನ್ನು ಹಂಚಿದರು.

ಕುಶಾಲನಗರದ ಬಸವ ಬಡಾವಣೆ, ದಂಡಿನಪೇಟೆ, ಇಂದಿರಾ ಬಡಾವಣೆಗಳಗೆ ಭೇಟಿ ನೀಡಿ ಪ್ರವಾಹ ಪೀಡಿತರನ್ನು ಸಂತೈಸಿ ದಿನೋಪಯೋಗಿ ವಸ್ತುಗಳನ್ನು, ಸಾವಿರಾರು ಚಪಾತಿ ನೂರಾರು ಕಂಬಳಿ, ಅಕ್ಕಿ, ಇತರ ವಸ್ತುಗಳನ್ನು ವಿತರಿಸಿದರು. ಈ ಸಂದರ್ಭ ಅವರೊಂದಿಗೆ ಆಶ್ರಮ ಯತಿಗಳಾದ ಸ್ವಾಮಿ ಧರ್ಮಾತ್ಮಾ ಮಹರಾಜ್, ಸ್ವಾಮಿ ಗೀತಸಾರಾನಂದಜೀ ಮಹರಾಜ್, ಕೇಶವ ಕಾಮತ್, ಶಂಕರ್, ಶರತ್, ಚಂದನ್ ಕಾಮತ್, ನಾಗೇಂದ್ರ ಪ್ರಸಾದ್ ಪಾಲ್ಗೊಂಡಿದ್ದರು.