ಕುಶಾಲನಗರ, ಆ 21: ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ವಿತರಿಸಲು ರಾಜ್ಯದ ವಿವಿಧ ಭಾಗಗಳಿಂದ ವಾಹನಗಳಲ್ಲಿ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳ ಮೇಲೆ ಜಿಲ್ಲಾಡಳಿತ ಕಣ್ಗಾವಲಿರಿಸಿದೆ. ಅರ್ಹ ಫಲಾನುಭವಿಗಳಿಗೆ ದೊರಕಬೇಕಾದ ದಾನಿಗಳ ನೆರವು ಕೆಲವು ಭಾಗಗಳಲ್ಲಿ ದುರುಪಯೋಗ ವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಕೊಡಗು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಕುಶಾಲನಗರ-ಕೊಪ್ಪ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ಆಹಾರ ಪದಾರ್ಥಗಳನ್ನು ಹೊತ್ತು ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್ ನೇತೃತ್ವದಲ್ಲಿ ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದು ದಾನಿಗಳ ಮಾಹಿತಿ, ಕೊಂಡೊಯ್ಯುತ್ತಿ ರುವ ಪದಾರ್ಥಗಳು ಬಗ್ಗೆ ವಿವರ ಪಡೆದುಕೊಳ್ಳಲಾಗುತ್ತಿದೆ.

ಜಿಲ್ಲೆಗೆ ಆಗಮಿಸುವ ಪದಾರ್ಥಗಳನ್ನು ಸ್ಥಳೀಯ ಎಪಿಎಂಸಿ ಗೋದಾಮಿನಲ್ಲಿ ದಾಸ್ತಾನಿರಿಸ ಲಾಗುವದು. ಸಾಮಗ್ರಿ ಗಳನ್ನು ವಿಂಗಡಿಸಿ ಅಗತ್ಯವಿರುವ ಕಡೆಗಳಿಗೆ ವಿತರಿಸಲು ಯೋಜನೆ ಹಮ್ಮಿಕೊಳ್ಳ ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.