ಸುಂಟಿಕೊಪ್ಪ,ಆ.21: ಜಲ ಪ್ರಳಯದಿಂದ ಮನೆ ಅಸ್ತಿ ಕಳಕೊಂಡು ಸುಂಟಿಕೊಪ್ಪದ ಪುರ್ನವಸತಿ ಕೇಂದ್ರದಲ್ಲಿ ನೆಲೆಸಿದ್ದ ಸಂತ್ರಸ್ಥರನ್ನು ರಾಜ್ಯ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.
ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಳೆ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಖತೀಜ ಉಮ್ಮ ಮದರಸದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ಥರಿಗೆ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಸಚಿವರು ಆಶ್ವಾಸನೆ ನೀಡಿದರು.
ಇಲ್ಲಿನ ನೆಲೆಸಿರುವ ಸಂತ್ರಸ್ಥರಿಗೆ ಸ್ನಾನ ಮಾಡಲು ವ್ಯವಸ್ಥೆ ಇಲ್ಲದೆ ತೊಂದರೆಯಾಗಿದೆ ಎಂಬುದಾಗಿ ತನ್ನ ಗಮನಕ್ಕೆ ಬಂದಿದೆ ಅವರಿಗೆ ಸಿಲಿಂಡರ್ ಗ್ಯಾಸ್ ವ್ಯವಸ್ಥೆ ಎಷ್ಟು ಬೇಕೋ ಅಷ್ಟು ಕಲ್ಪಿಸಿಕೊಡಲಾಗುವುದು. ಅಲ್ಲದೆ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಶಾಲೆಗಳಲ್ಲಿ ಹೆಚ್ಚಿನ ದಿನ ನಿರಾಶ್ರಿತರಿಗೆ ವಸತಿ ಕಲ್ಪಿಸಲು ಕಷ್ಟವಾಗಲಿದೆ ಅವರಿಗೆ ಕಲ್ಯಾಣ ಮಂಟಪದಲ್ಲಿ ಸರಕಾರ ಬಾಡಿಗೆಗೆ ಪಡೆದು ವಸತಿ ಆಹಾರ ಪೂರೈಕೆ ನೀಡಲಾಗುವುದು ಎಂದರು.
ಸಾರ್ವಜನಿಕರ ಬೇಡಿಕೆ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೂಡಲೇ ಎಂಬಿಬಿಎಸ್ ವೈಧ್ಯರ ನೇಮಕವಾಗ ಬೇಕೆಂದು ಸುಂಟಿಕೊಪ್ಪ ನಿವಾಸಿಗಳಾದ ಎಸ್.ಜಿ.ಶ್ರೀನಿವಾಸ್, ಗ್ರಾ.ಪಂ. ಉಪಾಧ್ಯಕ್ಷರಾದ ಪಿ.ಆರ್.ಸುಕುಮಾರ್ ಆಗ್ರಹಿಸಿದ ಮೇರೆಗೆ ಸಚಿವರು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಅವರಿಗೆ ಮುಂದಿನ ದಿನಗಳಲ್ಲಿ ವೈಧ್ಯರ ನೇಮಕಾತಿ (ಕೌನ್ಸಿಲಿಂಗ್)ನಲ್ಲಿ ಪ್ರಥಮ ಆದ್ಯತೆಯಲ್ಲಿ ವೈದ್ಯರನ್ನು ನೇಮಿಸಬೇಕೆಂದು ಆದೇಶಿಸಿದರು.