ಮಡಿಕೇರಿ, ಆ. 21: ಭಾರತದ ಗಡಿ ಕಾಯುವಲ್ಲಿ ತಮ್ಮದೇ ಕೊಡುಗೆಯೊಂದಿಗೆ ಬಹಳಷ್ಟು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಕಾವೇರಿಯನ್ನು ತಮಿಳುನಾಡು ಸಹಿತ ರಾಜ್ಯದ ಜನತೆಗೆ ಕಲ್ಪಿಸಿರುವ ಕೊಡಗಿನ ಜನತೆ ಪ್ರಾಕೃತಿಕ ವಿಕೋಪದಿಂದ ಧೃತಿಗೆಡದಂತೆ ಮಾಜೀ ಉಪಮುಖ್ಯಮಂತ್ರಿ ಆರ್. ಅಶೋಕ್ ಕರೆ ನೀಡಿದ್ದಾರೆ.

ಇಂದು ಕೊಡಗಿನಲ್ಲಿ ಎದುರಾಗಿರುವ ಸಂಕಷ್ಟ ನಿವಾರಣೆಯೊಂದಿಗೆ ನೊಂದವರ ಕಣ್ಣೀರು ಒರೆಸಲು ಬಿಜೆಪಿ ಹಾಗೂ ಬೆಂಗಳೂರು ಸಹಿತ ರಾಜ್ಯದ ಜನತೆ ತಮ್ಮೊಂದಿಗೆ ಇದ್ದು, ಮನೆಗಳ ಸಹಿತ ಆಸ್ತಿ-ಪಾಸ್ತಿ ನಷ್ಟಕ್ಕೆ ಒಳಗಾದವರು ಮರಳಿ ಬದುಕು ಕಂಡುಕೊಳ್ಳಲು ಎಲ್ಲಾ ರೀತಿ ಸಹಕಾರ ನೀಡಲಾಗುವದು ಎಂದು ಅವರು ಆಶ್ವಾಸನೆ ನೀಡಿದರು. ಈ ರಾತ್ರಿ ಸಂತ್ರಸ್ತರಿಗೆ ಆಹಾರ, ವಸ್ತ್ರ, ನಿತ್ಯೋಪಯೋಗಿ ವಸ್ತುಗಳನ್ನು ಪ್ರತಿ ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ಸುಮಾರು 15 ಲಾರಿಗಳಲ್ಲಿ ತರುವದರೊಂದಿಗೆ ಇಲ್ಲಿನ ಗೌಡ ಸಮಾಜದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಕೊಡಗಿನಲ್ಲಿ ಅನಾಹುತದಿಂದ ಸಂತ್ರಸ್ತರಿಗೆ ಪುನರ್ವಸತಿಯೊಂದಿಗೆ ಬದುಕು ಕಲ್ಪಿಸಲು ಎಲ್ಲಾ ನೆರವು ಒದಗಿಸಲಾಗುವದು ಎಂದು ಅಶೋಕ್ ಪುನರುಚ್ಚರಿಸಿದರು. ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಗೌಡ ಸಮಾಜ ಪದಾಧಿಕಾರಿಗಳ ಸಹಿತ ಇತರ ಪ್ರಮುಖರು ಹಾಜರಿದ್ದರು.