ಮಡಿಕೇರಿ, ಆ. 21: ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕಾರಣ, ತಕ್ಷಣವೇ ಸರಕಾರವು ಅತಿವೃಷ್ಟಿ ಜಿಲ್ಲೆಯೆಂದು ಘೋಷಿಸಲು ಆಗ್ರಹಪಡಿಸಿರುವ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಡಳಿತವು ನೊಂದವರಿಗೆ ಬರುತ್ತಿರುವ ಪರಿಹಾರವನ್ನು ದುರುಪಯೋಗ ಆಗದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ನೈಜ ಫಲಾನುಭವಿಗಳಿಗೆ ಸಹಾಯ ನೀಡುವಂತೆ ಕರೆ ನೀಡಿದ್ದಾರೆ.ಇಂದು ವಿವಿಧ ಪರಿಹಾರ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿದ ಬಳಿಕ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಹಾಗೂ ಹೊರಜಿಲ್ಲೆಯ ಸಂಘ - ಸಂಸ್ಥೆಗಳಿಂದ ವ್ಯಾಪಕವಾಗಿ ಹರಿದು ಬರುತ್ತಿರುವ ನೆರವು ಸದ್ಬಳಕೆಯಾಗದೆ ಭಾರೀ ದುರುಪಯೋಗ ಆಗುತ್ತಿದೆ ಎಂಬ ದೂರುಗಳು ಲಭಿಸಿದ್ದಾಗಿ ಬೇಸರ ವ್ಯಕ್ತಪಡಿಸಿದರು.ಬೆಂಗಳೂರು, ಮೈಸೂರಿನಂತಹ ಮಹಾನಗರಗಳು ಸೇರಿದಂತೆ ಎಲ್ಲೆಡೆಯಿಂದ ಹರಿದು ಬರುತ್ತಿರುವ ಸಹಾಯವನ್ನು, ಅಲ್ಲಲ್ಲಿ ತಡೆಯುತ್ತಿರುವ ಅವಕಾಶವಾದಿಗಳು ಸಂತ್ರಸ್ತರ ಪರಿಹಾರ ಕೇಂದ್ರ ಹಾಗೂ ಜಿಲ್ಲಾಡಳಿತದ ಅರಿವಿಗೆ ಬಾರದಂತೆ ಲಪಟಾಯಿಸುತ್ತಿರುವ ಬಗ್ಗೆ ಜಿಲ್ಲೆಯ ಅನೇಕ ಸಾರ್ವಜನಿಕರು ಹಾಗೂ ಸಂತ್ರಸ್ತರು ದೂರುತ್ತಿದ್ದು, ದುರು ಪಯೋಗ

(ಮೊದಲ ಪುಟದಿಂದ) ತಡೆಯುವದರೊಂದಿಗೆ, ಕೆಲವು ವಾಹನಗಳಿಗೆ ಸಂತ್ರಸ್ತರ ನೆರವಿನ ಹೆಸರಿನಲ್ಲಿ ಬ್ಯಾನರ್, ಭಿತ್ತಿಪತ್ರ ಅಳವಡಿಸಿಕೊಂಡು ವ್ಯವಸ್ಥಿತವಾಗಿ ಆಹಾರ ವಸ್ತುಗಳು, ವಸ್ತ್ರ ಸಹಿತ ಎಲ್ಲಾ ಸಾಮಾಗ್ರಿಗಳನ್ನು ದೋಚುತ್ತಿರುವ ಕುರಿತು ಮಾಹಿತಿ ಲಭಿಸಿದೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿರುವದಾಗಿ ವಿವರಿಸಿದ ಶಾಸಕರು, ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಗ್ರಾಮೀಣ ಜನತೆಗೆ ಇನ್ನು ನೆರವು ಲಭಿಸಿಲ್ಲವೆಂದು ಬೊಟ್ಟು ಮಾಡಿದರು.

ಒಗ್ಗೂಡಿ ಕಣ್ಣೀರು ಒರೆಸೋಣ : ಮಡಿಕೇರಿ ತಾಲೂಕು ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವರು ಗ್ರಾಮಸ್ಥರು ತೀವ್ರ ತೊಂದರೆಗೆ ಸಿಲುಕಿ ಕಣ್ಣೀರಿನ ಬದುಕು ನಡೆಸುತ್ತಿದ್ದರೂ, ಸ್ವಾಭಿಮಾನದಿಂದ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೂ ಬಾರದೆ ಬಂಧುವರ್ಗದ ಆಸರೆಯಲ್ಲಿದ್ದು, ಅಂತಹವರ ಮನೆ ಬಾಗಿಲಿಗೆ ನೆರವು ಒದಗಿಸಬೇಕೆಂದು ಅವರು ಸಲಹೆ ನೀಡಿದರು.

ನಾಡಿನ ಜನತೆ ನೊಂದವರ ಕಣ್ಣೀರು ಒರೆಸುವಲ್ಲಿ ಏಕತಾ ಭಾವದಿಂದ ಸಮರೋಪಾದಿ ಯಲ್ಲಿ ಕಾರ್ಯದಲ್ಲಿ ತೊಡಗುವಂತೆಯೂ ಅವರು ಕರೆ ನೀಡಿದರು.

ಸರಕಾರ ವರದಿ ನೀಡಲಿ : ಜಿಲ್ಲೆಯಲ್ಲಿ ಮನೆ, ಆಸ್ತಿ, ಜಮೀನು ಸಹಿತ ಒಡವೆ ವಸ್ತುಗಳನ್ನು ಕಳೆದುಕೊಂಡು ದುರಂತಕ್ಕೆ ಒಳಗಾಗಿರುವ ಕುಟುಂಬಗಳ ಸಮಗ್ರ ಮಾಹಿತಿ ಕಲೆ ಹಾಕಿ ಶೀಘ್ರವೇ ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದ ಬೋಪಯ್ಯ, ರಾಜ್ಯದಿಂದ ಕೇಂದ್ರಕ್ಕೂ ಸಮರ್ಪಕ ವರದಿ ಸಲ್ಲಿಸಿ ಆ ಮೂಲಕ ನೆರವಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಆಗ್ರಹಪಡಿಸಿದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಸಹಿತ ಶಾಸಕರು ಮೇಕೇರಿ, ಚೇರಂಬಾಣೆ, ಚೆಟ್ಟಿಮಾನಿ ಮುಂತಾದೆಡೆ ಸಂತ್ರಸ್ತರ ಕೇಂದ್ರಗಳಿಗೆ ಖುದ್ದು ತೆರಳಿ ನೋವನ್ನು ಆಲಿಸಿದರು. ಬಳಿಕ ಕರ್ಣಂಗೇರಿಯ ಮೊಳಕಾಲ್ಮುರಿ ಸಂತ್ರಸ್ತರ ಕೇಂದ್ರ ಹಾಗೂ ಉದಯಗಿರಿ ಬೆಟ್ಟ ಕುಸಿದು 23 ಮನೆಗಳು ಧ್ವಂಸಗೊಂಡಿರುವ ಭಯಾನಕ ದೃಶ್ಯ ವೀಕ್ಷಿಸಿದರು.

ನೊಂದವರ ಬೇಡಿಕೆಗಳನ್ನು ಆಲಿಸಿದ ಜನಪ್ರತಿನಿಧಿಗಳು, ತಕ್ಷಣಕ್ಕೆ ಅನ್ನ, ವಸ್ತ್ರ, ಆರೋಗ್ಯ ಸೇವೆಗಳೊಂದಿಗೆ ಮಳೆ ಇಳಿಮುಖಗೊಂಡ ಬಳಿಕ ತುರ್ತು ಆಸರೆಗೆ ಅಗತ್ಯ ಕ್ರಮದ ಆಶ್ವಾಸನೆ ನೀಡಿದರು.