ಮಡಿಕೇರಿ, ಆ. 21: ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ದೊಂದಿಗೆ, ಅತಿವೃಷ್ಟಿಯಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದು ಕೊಂಡಿರುವ ಸಂತ್ರಸ್ತರಿಗೆ ಸಾರ್ವನಿಕವಾಗಿ ಹರಿದು ಬರುತ್ತಿರುವ ನೆರವನ್ನು ನೊಂದ ಕುಟುಂಬಗಳಿಗೆ ತಲಪಿಸಲು ಜಿಲ್ಲಾಡಳಿ ತದೊಂದಿಗೆ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಜನತೆಗೆ ಕರೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು ಎಲ್ಲರೂ ಸಹಕರಿಸುವಂತೆ ಅವರು ಸಲಹೆ ಮಾಡಿದ್ದಾರೆ.ಕೊಡಗಿನಲ್ಲಿ ವಿಪತ್ತು ನಿರ್ವಹಣೆಯಲ್ಲಿ ದುರುಪಯೋಗ ತಡೆಗಟ್ಟಲು ಜಿಲ್ಲಾ ಆಡಳಿತ ನಿಗಾವಹಿಸಿದ್ದು, ಸಾರ್ವಜನಿಕ ಸಂಘ-ಸಂಸ್ಥೆಗಳು ಸಂತ್ರಸ್ತ ಕುಟುಂಬಗಳಿಗೆ ಕಲ್ಪಿಸುವ ಎಲ್ಲಾ ರೀತಿಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ತಲಪಿಸಬೇಕೆಂದು ಕರೆ ನೀಡಿರುವ ಅವರು; ಎಲ್ಲಾ ನೆರವನ್ನು ಸಂತ್ರಸ್ತರಿಗೆ ಆಯಾ ಸಂತ್ರಸ್ತರಿಗೆ ಸಂಬಂಧಿಸಿದ ಪರಿಹಾರ ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿಗಳ ಮೂಲಕ ವಿತರಣೆಗೆ ಅಗತ್ಯ ಕ್ರಮ ತೆಗೆದುಕೊಂಡಿರುವದಾಗಿ ಸ್ಪಷ್ಟಪಡಿಸಿದರು.

ಆಹಾರ ಬೇಡ: ಕೊಡಗಿಗೆ ನೆರವು ಒದಗಿಸುತ್ತಿರುವ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಿತ ಉದ್ಯಮಗಳು ಸಿದ್ಧಪಡಿಸಿದ ಆಹಾರಗಳನ್ನು ಈಗಿನ ಪರಿಸ್ಥಿತಿಯಲ್ಲಿ ತಲಪಿಸದಂತೆ ಸಲಹೆ ಮಾಡಿರುವ ಶ್ರೀವಿದ್ಯಾ ದಿನಸಿ ಪದಾರ್ಥಗ ಳೊಂದಿಗೆ ಬೆಚ್ಚನೆಯ ಉಡುಪು, ಹೊದಿಕೆ ಇತ್ಯಾದಿಗಳೊಂದಿಗೆ ದಿನಸಿ ಉತ್ಪನ್ನಗಳನ್ನು ವಿತರಿಸುವಂತೆ ಕೋರಿದ್ದಾರೆ. ಸಿದ್ಧ ಚಪಾತಿ ಇತ್ಯಾದಿ ಭಾರೀ ಪ್ರಮಾಣದಲ್ಲಿ ಬರುತ್ತಿದ್ದು, ಹಾಳಾಗುವ ಸಿದ್ಧಪಡಿಸಿದ ಆಹಾರ ಅಗತ್ಯವಿಲ್ಲ ಎಂದು ಸೂಚಿಸಿದ್ದಾರೆ.

ಅಧಿಕಾರಿಗಳ ತಂಡ ರಚನೆ: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಧಿಕಾರಿಗಳ ಹಂತದಲ್ಲಿ ತಂಡ ರಚಿಸಿದ್ದು, ಹಿಂದಿನ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯಾಗಿದ್ದ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಎಂ. ಸತೀಶ್‍ಕುಮಾರ್ ಸೇರಿದಂತೆ ಸಾಕಷ್ಟು ಅನುಭವಿ ಅಧಿಕಾರಿಗಳನ್ನು ಇಲ್ಲಿ ಸರಕಾರ ನಿಯೋಜಿಸಿರುವದಾಗಿ ಅವರು ಮಾಹಿತಿ ನೀಡಿದರು.

ಪೊಲೀಸ್ ಕಣ್ಗಾವಲು: ಬೇರೆ ಬೇರೆ ಕಡೆಗಳಿಂದ ಕೊಡಗಿಗೆ ಬೃಹತ್ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೆರವು ದುರುಪಯೋಗ ತಡೆಗೆ ಗಡಿಗಳ ಸಹಿತ ಅಗತ್ಯ ಇರುವೆಡೆಗಳಲ್ಲಿ ಪೊಲೀಸ್ ಕಣ್ಗಾವಲು ಸಹಿತ ಚೆಕ್ ಪೋಸ್ಟ್‍ಗಳನ್ನು

(ಮೊದಲ ಪುಟದಿಂದ) ರೂಪಿಸಿದ್ದು, ಸಾರ್ವಜನಿಕ ನೆರವು ದುರ್ಬಳಕೆಯಾಗಲಿದ್ದ ಮೂರು ಟ್ರಕ್ ಉತ್ಪನ್ನಗಳು ಪೊಲೀಸ್ ಇಲಾಖೆ ವಶಕ್ಕೆ ಪಡೆದಿರುವ ಸುಳಿವು ಲಭಿಸಿದೆ ಎಂದು ‘ಶಕ್ತಿ’ ಗಮನ ಸೆಳೆದಾಗ, ಈ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುವದು ಎಂದರು.

ತಾತ್ಕಾಲಿಕ ಆಸರೆ: ಜಿಲ್ಲೆಯಲ್ಲಿ ಅಪಾಯದಲ್ಲಿ ಸಿಲುಕಿರುವ ಕುಟುಂಬಗಳಿಗೆ ಆದಷ್ಟು ಬೇಗ ಸೂಕ್ತ ಜಾಗ ಹುಡುಕಿ ತಾತ್ಕಾಲಿಕ ಆಸರೆಗೆ ಗಮನ ಹರಿಸಲಾಗುವದು ಎಂದು ಪ್ರತಿಕ್ರಿಯಿಸಿರುವ ಅವರು; ಅತಿವೃಷ್ಟಿಯಲ್ಲಿ ನೊಂದವರ ಕಣ್ಣೀರು ಒರೆಸಲು ಜಿಲ್ಲಾಡಳಿತ ಪ್ರಥಮ ಆದ್ಯತೆ ನೀಡುವದಾಗಿ ಭರವಸೆಯ ನುಡಿಯಾಡಿದರು.

ಯುವಕರ ತಂಡ: ರಾಜ್ಯದ ವಿವಿಧ ಇಲಾಖೆಗಳಿಂದ ಯುವಕರ ತಂಡದೊಂದಿಗೆ ಸಾರ್ವಜನಿಕ ವಲಯದ ಸಹಕಾರವನ್ನು ಪಡೆಯಲಾಗಿದ್ದು, ಕೊಡಗಿನ ಹಲವೆಡೆ ಅಪಾಯದಲ್ಲಿ ಸಿಲುಕಿರುವವರನ್ನು ಸೇನಾ ನೆರವು ಸಹಿತ ಪರಿಹಾರ ಕೇಂದ್ರಗಳಿಗೆ ತರಲಾಗಿದೆ ಎಂದು ಅವರು ತಿಳಿಸಿದರು. ಇನ್ನು ಕೆಲವರು ಗ್ರಾಮಗಳನ್ನು ತೊರೆಯಲು ನಿರಾಕರಿಸಿರುವ ಕಾರಣ; ಅಂಥವರು ಇರುವೆಡೆಗೆ ಗ್ರಾ.ಪಂ. ಹಂತದಲ್ಲಿ ಆಹಾರ ಸಾಮಗ್ರಿ ಸಹಿತ ಅಗತ್ಯ ವಸ್ತುಗಳನ್ನು ದಾಸ್ತಾನುಗೊಳಿಸಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ರೀವಿದ್ಯಾ ಸ್ಪಷ್ಟಪಡಿಸಿದರು.

ಮಾನವೀಯ ನೆರವು: ಈಗಾಗಲೇ ತೋಟ ಕಾರ್ಮಿಕರಾಗಿರುವ ಸುಮಾರು 70 ಅಸ್ಸಾಂ ಮಂದಿ ಕೂಡ ಸುಂಟಿಕೊಪ್ಪದ ಪರಿಹಾರ ಕೇಂದ್ರದಲ್ಲಿದ್ದು, ಅಂತಹವರನ್ನು ಮರಳಿ ಊರಿಗೆ ಕಳುಹಿಸುವ ತನಕ ಮಾನವೀಯ ನೆಲೆಯಲ್ಲಿ ನೆರವು ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.