ಗೋಣಿಕೊಪ್ಪ ವರದಿ, ಆ. 20: ವೀರಾಜಪೇಟೆ ತಾಲೂಕಿನಲ್ಲಿ ಸರ್ಕಾರದಿಂದ ಅನುಷ್ಠಾನ ಗೊಂಡಿರುವ ಕಾಮಗಾರಿಗಳ ಉಳಿಕೆ ಹಣವಾದ 17 ಕೋಟಿ ಹಣವನ್ನು ಕೂಡಲೇ ಜಮೆ ಮಾಡದಿದ್ದಲ್ಲಿ ಗುತ್ತಿಗೆ ಪಡೆದು ಕೊಳ್ಳುವದನ್ನು ಕೈಬಿಡ ಲಾಗವದು ಎಂದು ವೀರಾಜಪೇಟೆ ತಾಲೂಕು ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಕಳೆದ ವರ್ಷ ತಾಲೂಕಿನಲ್ಲಿ ನಡೆಸಿರುವ ಕಾಮಗಾರಿಗಳ ಹಣ ಇನ್ನೂ ಗುತ್ತಿಗೆದಾರರ ಕೈಸೇರಿಲ್ಲ. 17 ಕೋಟಿ ಹಣವನ್ನು ಪಿಡಬ್ಲ್ಯೂಡಿ ಹಾಗೂ ಪಿಆರ್‍ಇಡಿ ಇಲಾಖೆಗೆ ನೀಡದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ತಾಲೂಕು ಅಧ್ಯಕ್ಷ ವಾಸು ಉತ್ತಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹಣ ಕೈಸೇರದ ಕಾರಣ ಗುತ್ತಿಗೆದಾರರು ಆರ್ಥಿಕ ದುಸ್ಥಿತಿಗೆ ಬಂದಿದ್ದಾರೆ. ಅಭಿವೃದ್ಧಿಯ ಉದ್ದೇಶದಿಂದ ಕಾಮಗಾರಿಗಳನ್ನು ಪೂರ್ಣ ಗೊಳಿಸಿದ್ದರೂ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದಾಗಿ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದರು.

ಪೆರುಂಬಾಡಿ ರಸ್ತೆ ಸಂಪೂರ್ಣ ವಾಗಿ ಕುಸಿದಿದ್ದ ಸಂದರ್ಭ 12 ದಿನಗಳಲ್ಲಿ ವಾಹನ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು. 19 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದರೂ ಸರ್ಕಾರದ ಆಕ್ಷನ್ ಪ್ಲಾನ್‍ಗೆ ಈ ಯೋಜನೆ ಸೇರಿಲ್ಲ. ಇದರಿಂದಾಗಿ 13 ತಿಂಗಳು ಕಳೆದರೂ ಹಣ ಮಂಜೂರು ಆಗದೆ ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು. ಗುತ್ತಿಗೆದಾರರು ಸಾಲ ಪಡೆದು ನಡೆಸಿದ ಕಾಮಗಾರಿಗಳ ಹಣ ಬಾರದ ಕಾರಣ ಬ್ಯಾಂಕ್ ಬಡ್ಡಿ ಕಟ್ಟಲು ಹಣವಿಲ್ಲ ದಂತಾಗಿದೆ. ಬಡ್ಡಿ ಕಟ್ಟಲಾಗದೆ ಆರ್ಥಿಕವಾಗಿ ಗುತ್ತಿಗೆದಾರರು ತೊಂದರೆಯಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ಶೀಘ್ರದಲ್ಲಿಯೇ ಪಿಡಬ್ಲ್ಯೂಡಿ ಹಾಗೂ ಪಿಆರ್‍ಇಡಿ ಇಲಾಖೆಗೆ ಮಂಜೂರು ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು. ತಪ್ಪಿದಲ್ಲಿ ಎಲ್ಲಾ ಕಾಮಗಾರಿಗಳನ್ನು ಕೈಬಿಡುವ ಮೂಲಕ ಗುತ್ತಿಗೆದಾರರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೆಂಟ್ರಲ್ ರೋಡ್ ಫಂಡ್‍ನಿಂದ ಅಭಿವೃದ್ಧಿ ಯಾಗಿರುವ ಗೋಣಿಕೊಪ್ಪ ಮುಖ್ಯರಸ್ತೆ ಅನುದಾನ 2.5 ಕೋಟಿ ಹಣ ಕೂಡ ಗುತ್ತಿಗೆದಾರರಿಗೆ ದೊರೆತಿಲ್ಲ. ಹೀಗಾದರೆ ಕಾಮಗಾರಿ ಗಳನ್ನು ನಡೆಸುವದು ಕಷ್ಟಕರ ವಾಗಲಿದೆ. ಗುತ್ತಿಗೆದಾರ ದಿವಾಳಿತನ ಎದುರಿಸುವ ಆತಂಕವಿದೆ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಬೋಪಣ್ಣ, ಖಜಾಂಚಿ ಎ.ಎ. ಉತ್ತಪ್ಪ, ಆಡಳಿತ ಮಂಡಳಿ ಸದಸ್ಯರುಗಳಾದ ವಿಶ್ವನಾಥ್ ಹಾಗೂ ಮಧು ಬೋಪಣ್ಣ ಉಪಸ್ಥಿತರಿದ್ದರು.