ಸೋಮವಾರಪೇಟೆ, ಆ. 20: ನಷ್ಟದಲ್ಲಿರುವ ರೈತರ ಕೈ ಹಿಡಿಯುವ ಮೂಲಕ ಕಷ್ಟಕಾಲಕ್ಕೆ ನೆರವಿಗೆ ಬರುತ್ತಿದ್ದ, ಕಪ್ಪುಬಂಗಾರ ಎಂದೇ ಹೆಸರುವಾಸಿಯಾದ ಕರಿಮೆಣಸು ಈ ಬಾರಿ ಬೆಳೆಗಾರರ ಕೈ ಜಾರುತ್ತಿದೆ.

ಸೋಮವಾರಪೇಟೆ ತಾಲೂಕಿನ ಬಹುತೇಕ ಎಲ್ಲಾ ಕಾಫಿ ತೋಟಗಳಲ್ಲೂ ಬೆಳೆಯಲಾಗಿರುವ ಕರಿಮೆಣಸು ಈ ಸಾಲಿನ ಮಳೆಗೆ ಕೊಳೆಯುತ್ತಿದ್ದು, ಕಾಳುಕಟ್ಟಿದ್ದ ಗೆರೆಗಳು ಕೊಳೆರೋಗಕ್ಕೆ ತುತ್ತಾಗಿ ನೆಲಕ್ಕಚ್ಚುತ್ತಿವೆ.

ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಂತೂ ಕರಿಮೆಣಸು ಹೇಳ ಹೆಸರಿಲ್ಲದಂತಾಗುವ ಮುನ್ಸೂಚನೆ ಕಂಡುಬರುತ್ತಿದ್ದು, ಮೆಣಸಿನೊಂದಿಗೆ ಕಾಫಿಯೂ ಉದುರುತ್ತಿರುವದರಿಂದ ಬೆಳೆಗಾರರ ಪಾಡು ಬೆಂಕಿಯಿಂದ ಬಾಣಲೆಗೆ ಎಂಬಂತಾಗಿದೆ.

ಅಧಿಕ ಕೂಲಿ, ಕಾರ್ಮಿಕರ ಕೊರತೆ, ಯಂತ್ರೋಪಕರಣಗಳ ಬೆಲೆ ಅಧಿಕ, ಕ್ರಿಮಿನಾಶಕ, ಗೊಬ್ಬರದ ಬೆಲೆ ಯಿಂದಾಗಿ ತೋಟ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಪ್ರಸ್ತುತದ ಪರಿಸ್ಥಿತಿಯಲ್ಲಿ ಉಂಟಾಗಿರುವ ಅತೀವೃಷ್ಟಿಯಿಂದ ಬೆಳೆಗಾರರ ಬದುಕು ಇನ್ನಷ್ಟು ದುಸ್ತರಗೊಳ್ಳಲಿದೆ.

ಕಾಫಿ ತೋಟಗಳಲ್ಲಿ ನೆರಳಿಗಾಗಿ ಬೆಳೆಸಿದ್ದ ಮರಗಳಿಗೆ ಕರಿಮೆಣಸು ಬಳ್ಳಿಗಳನ್ನು ಹಬ್ಬಿಸಿ, ಕಾಲಕಾಲಕ್ಕೆ ಗೊಬ್ಬರ, ಕ್ರಿಮಿನಾಶಕ, ಬೇಸಿಗೆಯಲ್ಲಿ ನೀರಿನ ವ್ಯವಸ್ಥೆಯನ್ನೂ ಮಾಡಿ ಕಾಳಜಿಯಿಂದ ಬೆಳೆಸಿದ್ದ ಕರಿಮೆಣಸು ಬಳ್ಳಿಗಳಲ್ಲಿ ಉತ್ತಮವಾಗಿ ಚಿಗುರು ಬಂದು, ಫಸಲಿನ ಗೆರೆಗಳೂ ಮೂಡಿದಾಗ ಸಂತಸಗೊಂಡಿದ್ದ ಬೆಳೆಗಾರರು, ಇದೀಗ ಮನದೊಳಗೆ ರೋಧಿಸತೊಡಗಿದ್ದಾರೆ.

ಬಳ್ಳಿಗಳಲ್ಲಿ ಮೂಡಿದ್ದ ಗೆರೆಗಳು ಅತಿ ಶೀತದಿಂದ ಇದೀಗ ನೆಲಕ್ಕಚ್ಚುತ್ತಿದ್ದು, ಶೇ. 20ರಷ್ಟು ಗೆರೆಗಳು ಈಗಾಗಲೇ ಕೆಳ ಬೀಳುತ್ತಿವೆ. ಇದರೊಂದಿಗೆ ಕಾಳುಮೆಣಸಿನ ಎಲೆಗಳೂ ಸಹ ಕೊಳೆಯುತ್ತಿದ್ದು, ಮಳೆ ಹೀಗೆಯೇ ಮುಂದುವರೆದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ ಎಂದು ನಗರಳ್ಳಿ ಗ್ರಾಮದ ಬೆಳೆಗಾರ ಗಣಪತಿ ಅವರು ಅಭಿಪ್ರಾಯಿಸಿದ್ದಾರೆ.

ಪ್ರಸಕ್ತ ವರ್ಷ ಉತ್ತಮ ಫಲಸು ನಿರೀಕ್ಷಿಸಲಾಗಿತ್ತು. ಬೇಸಿಗೆಯಲ್ಲಿ ಬಳ್ಳಿಗಳಿಗೆ ನೀರು ಹಾಯಿಸಿ ಮುತುವರ್ತಿಯಿಂದ ಕಾಪಾಡಿ ಕೊಂಡು ಬರಲಾಗಿತ್ತು. ಬೆಲೆ ಕಡಿಮೆಯಿದ್ದರೂ ಅಧಿಕ ಫಸಲು ಬಂದರೆ ಹೇಗೋ ಸರಿದೂಗಿಸಿ ಕೊಂಡು ಹೋಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗಿನ ಪರಿಸ್ಥಿತಿಯನ್ನು ಮೂಕ ಪ್ರೇಕ್ಷಕರಂತೆ ನೋಡಬೇಕಾಗಿದೆ. ಬಳ್ಳಿಯಲ್ಲಿರುವ ಎಲೆಗಳೂ ಸಹ ಕೊಳೆಯುತ್ತಿವೆ ಎಂದು ಮಸಗೋಡು ಗ್ರಾಮದ ಕೃಷಿಕ ಭುವನ್ ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಶಾಂತಳ್ಳಿ ಹೋಬಳಿಗೆ 200 ಇಂಚಿಗೂ ಅಧಿಕ ಮಳೆಯಾಗಿದ್ದರೆ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸರಾಸರಿ ಮಳೆಯ ಪ್ರಮಾಣ ಅಧಿಕಗೊಂಡಿದೆ. ಈ ಭಾಗದಲ್ಲಿ ಕಳೆದ ಸಾಲಿನಲ್ಲಿ ಇಲ್ಲಿಯವರೆಗೆ 45 ಇಂಚು ಮಳೆಯಾಗಿದ್ದರೆ, ಪ್ರಸಕ್ತ ವರ್ಷ 100ರ ಗಡಿ ದಾಟಿದೆ. ಮುಂದೆಯೂ ಮಳೆ ನಿರಂತರವಾದರೆ ಕೃಷಿಯಿಂದ ಲಾಭವಿರಲಿ;ಅಸಲನ್ನೂ ನಿರೀಕ್ಷಿಸಲು ಸಾಧ್ಯವಾಗದು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.