ಸೋಮವಾರಪೇಟೆ, ಆ. 20: ಪ್ರಸಕ್ತ ವರ್ಷದ ಅತಿವೃಷ್ಟಿಗೆ ತಾಲೂಕು ಕಂಗೆಟ್ಟುಹೋಗಿದೆ. ರೈತಾಪಿ ವರ್ಗದವರು ಸೇರಿದಂತೆ ಎಲ್ಲರ ಜೀವನದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ನೂರಾರು ಕೋಟಿ ನಷ್ಟ ಸಂಭವಿಸಿದ್ದು, ತಕ್ಷಣ ಜಿಲ್ಲೆಗೆ 1 ಸಾವಿರ ಕೋಟಿ ವಿಶೇಷ ಅನುದಾನ ಒದಗಿಸಬೇಕು. ಸೋಮವಾರ ಪೇಟೆಯನ್ನು ನೆರೆ ಪೀಡಿತ ತಾಲೂಕು ಎಂದು ಘೋಷಿಸಿ 250 ಕೋಟಿ ಒದಗಿಸಬೇಕೆಂಬ ನಿರ್ಣಯ ದೊಂದಿಗೆ ಮುಖ್ಯಮಂತ್ರಿ ಯನ್ನು ಭೇಟಿ ಮಾಡಲು ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಕೊಡಗಿನಲ್ಲಿ ಭಾರೀ ಮಳೆಯಾಗಿ ಬೇರೆ ಜಿಲ್ಲೆ ಹಾಗೂ ರಾಜ್ಯಗಳ ನೀರಿನ ಸಮಸ್ಯೆ ತಣಿಸಿದೆ.
ತಾಲೂಕಿನ ಪುಷ್ಪಗಿರಿ ಶ್ರೇಣಿ ಪ್ರದೇಶದಲ್ಲಿ 300 ಇಂಚಿಗೂ ಅಧಿಕ ಮಳೆಯಾಗಿದೆ. ಕೃಷಿ ಫಸಲು ಹೇಳ ಹೆಸರಿಲ್ಲದಂತಾಗಿದೆ. ಇದರೊಂದಿಗೆ ತಾಲೂಕಿನಾದ್ಯಂತ ಮಳೆಯ ಆರ್ಭಟಕ್ಕೆ ಹೆಚ್ಚಿನ ಹಾನಿ ಸಂಭವಿಸಿದೆ. ಈ ಹಿನ್ನೆಲೆ ಸೋಮವಾರಪೇಟೆಯನ್ನು ನೆರೆ ಪೀಡಿತ ತಾಲೂಕೆಂದು ಘೋಷಿಸಿ, 250 ಕೋಟಿ ವಿಶೇಷ ಅನುದಾನ ಒದಗಿಸುವಂತಾಗಬೇಕು ಎಂದರು.
ಈ ಬಗ್ಗೆ ತಾಲೂಕು ಪಂಚಾಯಿತಿಯಿಂದ ನಿಯೋಗ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳ ಸಮ್ಮುಖದೊಂದಿಗೆ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಬೇಕು. ಅನುದಾನ ನೀಡಲು ವಿಳಂಬವಾದರೆ ಚಳುವಳಿ ನಡೆಸ ಬೇಕು ಎಂದ ಅಭಿಮನ್ಯುಕುಮಾರ್, ಜಿಲ್ಲೆಯ ಇತರ 2 ತಾಲೂಕು ಪಂಚಾಯಿತಿಗಳೂ ಸಹ ತಕ್ಷಣ ವಿಶೇಷ ಸಭೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗ ಬೇಕು ಎಂದು ಅಭಿಪ್ರಾಯಿಸಿದರು.
ಅತಿವೃಷ್ಟಿಯಿಂದ ಕಾಫಿ, ಕಾಳುಮೆಣಸು,ಶುಂಠಿ, ಭತ್ತ, ಜೋಳ, ಕಿತ್ತಳೆ, ಏಲಕ್ಕಿ ಸೇರಿದಂತೆ ಎಲ್ಲಾ ರೀತಿಯ ಬೆಳೆಗಳು ನಾಶಗೊಂಡಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಗರಿಷ್ಠ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಒಂದು ಏಕರೆ ಗದ್ದೆ ನಷ್ಟವಾದರೆ ಕನಿಷ್ಟ 50 ಸಾವಿರ, 1 ಎಕರೆ ಕಾಫಿ ತೋಟ ನಷ್ಟವಾದರೆ ಕನಿಷ್ಟ 1 ಲಕ್ಷ ಪರಿಹಾರ ಒದಗಿಸಿ ಕೊಡಲು ಅಧಿಕಾರಿಗಳು ಮುಂದಾಗ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಾ.ಪಂ. ಉಪಾಧ್ಯಕ್ಷರು, ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನ ಸೂರ್ಲಬ್ಬಿ, ಗರ್ವಾಲೆ, ಹಮ್ಮಿಯಾಲ, ಮುಟ್ಲು, ಮೂವತ್ತೊಕ್ಲು ಭಾಗಗಳಲ್ಲಿ ಕಳೆದ 3 ತಿಂಗಳಿನಿಂದ ಸಮರ್ಪಕ ವಾಗಿ ವಿದ್ಯುತ್ ಲಭಿಸುತ್ತಿಲ್ಲ.
ಭಾರೀ ಮಳೆಗೆ ರಸ್ತೆಗಳೂ ಕೊಚ್ಚಿಹೋಗಿದ್ದು, ಅಲ್ಲಲ್ಲಿ ಮರಗಳು ಉರುಳಿ ಭಾರೀ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಹೆಚ್ಚಿನ ಅನಾನುಕೂಲ ವಾಗಿದೆ ಎಂದು ಅಭಿಮನ್ಯುಕುಮಾರ್ ಆರೋಪಿಸಿದರು.
1 ವಾರ ಕಡ್ಡಾಯ ರಜೆ: ತಾಲೂಕಿನ ಪುಷ್ಪಗಿರಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೊಳೆಗಳು ತುಂಬಿ ಹರಿಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಕೃಷಿ ಹಾನಿಯಾಗಿದೆ. ಮಕ್ಕಳು ಮನೆಯಿಂದ ಹೊರ ಬಾರಲೂ ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದು, ಆ ಭಾಗದ ಶಾಲೆಗಳಿಗೆ 1 ವಾರಗಳ ಕಾಲ ಕಡ್ಡಾಯ ರಜೆ ನೀಡಬೇಕು ಎಂದು ತಾ.ಪಂ. ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ಸೂಚಿಸಲಾಯಿತು.
ಮನೆ ಪರಿಹಾರ ರೂ. 2 ಲಕ್ಷಕ್ಕೆ ಬೇಡಿಕೆ: ಗಾಳಿ-ಮಳೆಯಿಂದ ವಾಸದ ಮನೆಗಳಿಗೆ ಹಾನಿಯಾದರೆ ಗರಿಷ್ಠ ರೂ. 95 ಸಾವಿರ ಪರಿಹಾರ ನೀಡಲಾ ಗುತ್ತಿದೆ. ಇದು ಯಾವದಕ್ಕೂ ಸಾಲುವದಿಲ್ಲ. ಈ ಹಿನ್ನೆಲೆ ಮನೆಗಳಿಗೆ ಹಾನಿಯಾದರೆ ಗರಿಷ್ಠ ರೂ. 2 ಲಕ್ಷಗಳವರೆಗೆ ಪರಿಹಾರ ನೀಡಬೇಕು ಎಂದು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.
ಮನೆ ಸಂಪೂರ್ಣ ಹಾನಿಗೀಡಾದರೆ ಸರ್ಕಾರದಿಂದ ರೂ. 95 ಸಾವಿರ ಪರಿಹಾರ ನೀಡಲಾ ಗುತ್ತದೆ. ಈ ಹಣದಲ್ಲಿ ಏನೂ ಸಾಧ್ಯವಾಗುವದಿಲ್ಲ ಎಂದು ಸದಸ್ಯೆ ಕುಸುಮ ಹೇಳಿದರು.
ಕೂಡಿಗೆ ಮತ್ತು ಕೂಡು ಮಂಗಳೂರು ವ್ಯಾಪ್ತಿಯನ್ನೂ ಕೃಷಿ ಕಾರ್ಯ ಕೈಗೊಳ್ಳಲು ಅಸಾಧ್ಯವಾಗಿದೆ. ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಸದಸ್ಯ ಗಣೇಶ್ ಮನವಿ ಮಾಡಿದರು.
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸಬೇಕು. ತೋಟದೊಳಗೆ ಹಾದುಹೋಗಿರುವ ವಿದ್ಯುತ್ ಮಾರ್ಗಗಳನ್ನು ರಸ್ತೆ ಬದಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ವಿಜು ಚಂಗಪ್ಪ ಹೇಳಿದರು.
ಪರಿಹಾರ ಅರ್ಜಿಗಳನ್ನು ಸ್ವೀಕರಿಸಲು ಕೊಡ್ಲಿಪೇಟೆ ಮತ್ತು ಶಾಂತಳ್ಳಿ ನಾಡಕಚೇರಿಯಲ್ಲಿ ಯಾವೊಬ್ಬ ಅಧಿಕಾರಿಯೂ ಇರುವದಿಲ್ಲ. ಎಂದು ಸದಸ್ಯರಾದ ಕುಶಾಲಪ್ಪ ಮತ್ತು ಧರ್ಮಪ್ಪ ಆರೋಪಿಸಿದರು.
ಇದಕ್ಕೆ ದನಿಗೂಡಿದ ಉಪಾಧ್ಯಕ್ಷರು, ಸೂರ್ಲಬ್ಬಿ ಭಾಗದಲ್ಲಿ ಕಳೆದ 3 ತಿಂಗಳಿನಿಂದ ವಿದ್ಯುತ್ ಇಲ್ಲ, ಆಹಾರ ಇಲಾಖೆಯಿಂದ ಸೀಮೆಎಣ್ಣೆ ಯನ್ನೂ ವಿತರಿಸುತ್ತಿಲ್ಲ. ಅಲ್ಲಿನವರು ಬದುಕುವದಾದರೂ ಹೇಗೆ? ಎಂದು ಪ್ರಶ್ನಿಸಿದರಲ್ಲದೇ, ಸಭೆಗೆ ಹಾಜರಾಗದ ಆಹಾರ ಇಲಾಖೆಯ ಅಧಿಕಾರಿ ಯನ್ನು ಅಮಾನತು ಮಾಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಆಗ್ರಹಿಸಿದರು.
ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದರೊಂದಿಗೆ ಶಾಂತಳ್ಳಿ ಹೋಬಳಿಗೆ ಸಂಬಂಧಿಸಿ ದಂತೆ ತಾ.ಪಂ.ನಿಂದಲೇ ವಿಶೇಷ ಅಧಿಕಾರಿಯನ್ನು ನಿಯೋಜಿಸಿ ಪ್ರತಿನಿತ್ಯದ ವರದಿ ತರಿಸಿಕೊಳ್ಳಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರಿಗೆ ಸೂಚಿಸ ಲಾಯಿತು. ಹಾನಗಲ್ಲು, ಹಾನಗಲ್ಲು ಬಾಣೆ, ಗಾಂಧಿನಗರ, ಚೌಡ್ಲು ವ್ಯಾಪ್ತಿಯಲ್ಲಿ ಹಲವಷ್ಟು ಮನೆಗಳು ಅಪಾಯದ ಅಂಚಿನಲ್ಲಿವೆ.
ರಸ್ತೆಗಳೂ ದುಸ್ಥಿತಿಗೆ ತಲಪಿವೆ. ತಕ್ಷಣ ಪರಿಹಾರ ಕಾರ್ಯ ಕೈಗೊಳ್ಳುವಂತಾಗಬೇಕೆಂದು ಸದಸ್ಯೆ ತಂಗಮ್ಮ ಸಭೆಯ ಗಮನ ಸೆಳೆದರು.
ಎಲ್ಲಾ ಇಲಾಖೆಗಳಲ್ಲಿಯೂ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗುವಂತೆ ರ್ಯಾಪಿಡ್ ಆಕ್ಷನ್ ಫೋರ್ಸ್ ರಚಿಸ ಬೇಕು. ಆ ಮೂಲಕ ಜನಸಾಮಾನ್ಯರಿಗೆ ತಕ್ಷಣ ಸ್ಪಂದಿಸುವಂತಾಗಬೇಕೆಂದು ಸದಸ್ಯ ಅನಂತ್‍ಕುಮಾರ್ ಸಲಹೆಯಿತ್ತರು. ಮಳೆಗಾಲ ಮುಗಿಯುವವರೆಗೂ ಅಧಿಕಾರಿಗಳು ಕರ್ತವ್ಯದ ಸ್ಥಳದಲ್ಲೇ ತಂಗುವಂತಾ ಗಬೇಕು ಎಂದು ಧರ್ಮಪ್ಪ ಹೇಳಿದರು. ಕೊಡ್ಲಿಪೇಟೆ ಶಾಲೆ ಬಳಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಅಧ್ಯಕ್ಷೆ ಪುಷ್ಪಾ ಸೂಚಿಸಿದರು.
ಕೋವರ್‍ಕೊಲ್ಲಿ-ಐಗೂರು ರಾಜ್ಯ ಹೆದ್ದಾರಿಯ ಬದಿಯಲ್ಲಿ ಹತ್ತಾರು ಅಪಾಯಕಾರಿ ಮರಗಳಿದ್ದು, ತಕ್ಷಣ ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಸದಸ್ಯರು ಗಳಾದ ಕುಸುಮ, ಎನ್.ಎಸ್. ಜಯಣ್ಣ, ಲೀಲಾವತಿ, ಆರ್. ಪುಷ್ಪ, ಡಿ.ಎಸ್. ಗಣೇಶ್, ವಿಮಲಾವತಿ, ಸುಹಾದ ಅಶ್ರಫ್, ಮಣಿ, ಸವಿತ ಸೇರಿದಂತೆ ವಿವಿಧ ಇಲಾಖಾಧಿ ಕಾರಿಗಳು ಭಾಗವಹಿಸಿದ್ದರು.