16ರ ಗುರುವಾರ ಸಂಜೆ 5.15ರ ಸಮಯ. ಸಂಪಾದಕೀಯ ವಿಭಾಗ ಸುದ್ದಿ ಸಂಗ್ರಹಣೆಗೆ ಹೊರ ಹೋಗಿತ್ತು. 5 ಗಂಟೆಗೆ ಕೆಲಸ ಮುಗಿಸಿದ ಮಂದಿ ಮನೆಯತ್ತ ಹೊರಟಿದ್ದರು. ಉಳಿದವರು ಅವರವರ ಕೆಲಸ ಮುಂದುವರಿಸಿದ್ದರು.ಕಲ್ಪನೆಗೂ ಮೀರಿದ ನೀರಿನ ಪ್ರವಾಹ ಒಮ್ಮೆಗೇ ಕಚೇರಿ ನುಗ್ಗಿತು. ಏನಾಗುತ್ತಿದೆ ಎಂದು ನೋಡುವಷ್ಟÀರಲ್ಲಿ ಕಚೇರಿಯೊಳಗೆ ಸುಮಾರು 3 ಅಡಿ ನೀರು ತುಂಬಿ ಕುರ್ಚಿಗಳೆಲ್ಲಾ ತೇಲಾಡತೊಡಗಿದವು. ನೆಲದಲ್ಲಿದ್ದ ವಿದ್ಯುತ್ ಉಪಕರಣಗಳು ನಾಶವಾದವು.

ನಮ್ಮ ಕಚೇರಿ ಎದುರಿನ ರಸ್ತೆಯ ಆಚೆ ಬದಿ ಮಡಿಕೇರಿಯ ಕಾಲುವೆ ಹರಿಯುತ್ತದೆ. ಹರಿಯುತ್ತಿದ್ದ ನೀರಿನ ಮೇಲೆ ಬೆಟ್ಟದ ಬರೆ ಮರ ಸಹಿತ ಕುಸಿದ ಪರಿಣಾಮ ನೀರು ಮಾರ್ಗವನ್ನು ಬದಲಿಸಿತು. ಮೊದಲು ಸಿಕ್ಕಿದ್ದೇ ನಮ್ಮ ಕಚೇರಿ...! ಕಚೇರಿಯೊಳಗೆಲ್ಲಾ ತುಂಬಿ ಮತ್ತೆ ಮುಂದಕ್ಕೆ ಹೋಗಲಾರದ ಪ್ರವಾಹ ಸುತ್ತಮುತ್ತಲ ಅಂಗಡಿ ಸೀಳಿಕೊಂಡು ಅದಕ್ಕೆ ಒಪ್ಪಿಗೆಯಾದ ಕೈಗಾರಿಕಾ ಬಡಾವಣೆ ರಸ್ತೆಯನ್ನು ನದಿಯಂತೆ ಪರಿವರ್ತಿಸಿ, ಮುಂದಕ್ಕೆ ಚಲಿಸಲಾರಂಭಿಸಿತು.

ನೀರಿನಲ್ಲ್ಲಿ ತೊಯ್ದು ನಿಂತಿದ್ದ ಕಚೇರಿ ಸಿಬ್ಬಂದಿ ಹಾಗೂ ಅಕ್ಕಪಕ್ಕದವರು ಆತಂಕದಲ್ಲಿದ್ದರು. ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಯತ್ನದಿಂದ ಇತ್ತ ಬಂದ ರಕ್ಷಣಾ ದಳ ಹಗ್ಗ ನೀಡಿ ಎಲ್ಲರನ್ನೂ ರಕ್ಷಿಸಿತು.

ಮಾರನೇ ದಿನದಿಂದ ರಿಪೇರಿ ಕೆಲಸ. ಮಿತ್ರ ಜಗದೀಶ್ ರೈ ನೀಡಿದ ಜೆಸಿಬಿ, ಸುಂಟಿಕೊಪ್ಪದ ರತೀಶ್ ಅವರ ಕ್ರೇನ್, ಜೀವಭಯ ತೊರೆದು ನೀರಲ್ಲೇ ಕೆಲಸ ಮಾಡಿದ ಕೆಲಸಗಾರರು ಕಾಲುವೆಯನ್ನು ಸುಗಮಗೊಳಿಸಿದರು. ಮಧ್ಯಾಹ್ನ 2.30ಕ್ಕೆ ನೀರು ಇಳಿದಿತ್ತು. ಕಚೇರಿಯೊಳಗೆಲ್ಲಾ ಉಳಿದದ್ದು 4-5 ಇಂಚು ದಪ್ಪದ ಕೆಸರು.

ಮಲ್ಲಿಕಾರ್ಜುನ ನಗರದ ಸ್ನೇಹಿತರು ತಂಡೋಪತಂಡವಾಗಿ ಬಂದು 2 ದಿನ ಕೆಲಸ ಮಾಡಿದರು. ಕಚೇರಿ ಸಿಬ್ಬಂದಿ ಕಣ್ಣೀರಿಡುತ್ತಾ ಕಾರ್ಯೋನ್ಮುಖರಾದರು. ಮಿತ್ರ ಅರುಣ್ ಶೆಟ್ಟಿ ಫಲಾಪೇಕ್ಷೆಯಿಲ್ಲದೆ ಕೆಲಸ ನಿರ್ವಹಿಸಿದರು. ಹಳೇ ಸಿಬ್ಬಂದಿ ಓಡೋಡಿ ಬಂದು ನೆರವಾದರು. ಪರಮೇಶ್, ಇಬ್ರಾಹಿಂ ಹೆಗಲಿಗೆ ಹೆಗಲು ಕೊಟ್ಟರು. ಸ್ಕಂದ ಸೌಂಡ್ಸ್‍ನ ಮಿತ್ರ ಅನಿಲ್, ಬಳಗದೊಂದಿಗೆ ಬಂದು ಜನರೇಟರ್ ಸರಿಮಾಡಿಕೊಟ್ಟರೆ, ವಿದ್ಯುತ್ ಇಲಾಖೆಯ ಶ್ರೀನಿವಾಸ್ ಬಳಗ ರಾತ್ರಿಯೇ ಬೆಳಕನ್ನು ಕಲ್ಪಿಸಿತು.

ನಂತರದ ನಮ್ಮ ಪರಿಶ್ರಮದಲ್ಲಿ ಫಲ ಸಿಕ್ಕಿದ್ದು ಮಿತ್ರ ಮನೋಜ್ ಅವರ ಶ್ರಮದಿಂದ ಕಂಪ್ಯೂಟರ್‍ಗಳ ಪುನರ್ ಜೋಡಣೆಯಷ್ಟೆ.

ಲಕ್ಷ-ಲಕ್ಷ ಮೌಲ್ಯದ ಯಂತ್ರೋಪಕರಣಗಳ ಮೋಟಾರ್‍ಗಳು, ವಿದ್ಯುತ್ ಉಪಕರಣಗಳು ಕೆಟ್ಟು ನಿಂತವು. ಎಲ್ಲದಕ್ಕೂ ಬೆಂಗಳೂರು, ದೆಹಲಿಯಂತಹ ದೂರದ ಪ್ರದೇಶಗಳಿಂದ ಪರಿಣಿತರ ಅವಲಂಬನೆಯಾಗಿದೆ. 50 ಲಕ್ಷ ಮೌಲ್ಯದ ಯಂತ್ರವನ್ನು ಬಿಚ್ಚಿರುವ ಇಂಜಿನಿಯರ್, ಒಂದೊಂದು ಪಟ್ಟಿ ಮಾಡುತ್ತ, 6 ಲಕ್ಷ- 9 ಲಕ್ಷ ಹೀಗೆ....ಖರ್ಚು ವಿವರಿಸುತ್ತಿದ್ದಾರೆ. 10 ಲಕ್ಷ ಮೌಲ್ಯದ ಮುದ್ರಣ ಕಾಗದವನ್ನು ಮುದ್ದೆಯಂತೆ ತುಂಬಿ ತೋಟದ ಗೊಬ್ಬರಕ್ಕೆ ಟ್ರ್ಯಾಕ್ಟರ್‍ನಲ್ಲಿ ಸಾಗಿಸುತ್ತಿದ್ದೇವೆÀ.

ಒಟ್ಟಾರೆ ಎಲ್ಲವೂ ಅಯೋಮಯ. ಕಚೇರಿ ಸರಿಪಡಿಸುವಷ್ಟರಲ್ಲೇ 4 ದಿನಗಳು ಕಳೆದುಹೋಗಿವೆ. 4 ದಿನಗಳಿಂದ ಪತ್ರಿಕೆ ಬಾರದ ಅಸಹಾಯಕತೆಗೆ ನಮ್ಮ ಜಿಲ್ಲೆಯ ಶಕ್ತಿ ಓದುಗರು ಸ್ಪಂದಿಸಿದ್ದಾರೆ. ನಮ್ಮ ನೋವಿಗೆ ಸಹಸ್ರ ಸಹಸ್ರ ಮಂದಿ ಪ್ರತ್ಯಕ್ಷವಾಗಿ- ಪರೋಕ್ಷವಾಗಿ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಆರ್ಥಿಕ ನೆರವು ನೀಡಲೂ ಮುಂದೆ ಬಂದಿದ್ದು, ಪ್ರೀತಿಯಿಂದಲೇ ಬೇಡವೆಂದು ಕೃತಜ್ಞತೆ ಸಲ್ಲಿಸಿದ್ದೇವೆ. ಜನತೆ ‘ಶಕ್ತಿ’ಯ ಮೇಲಿಟ್ಟಿರುವ ಪ್ರೀತಿ-ಅಭಿಮಾನ- ಅದರ ಅಗತ್ಯತೆ ಬಗ್ಗೆ ತೋರಿರುವ ಒಲವು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರಜಾಸತ್ಯ ಪತ್ರಿಕೆಯ ಮಾಲೀಕ ಹಾಗೂ ಸಂಪಾದಕ ಡಾ. ನವೀನ್ ಕುಮಾರ್ ‘ಇದು ನಿಮ್ಮ ಮುದ್ರಣಾಲಯ ಬನ್ನಿ’ ಎಂಬ ಸಹೃದಯತೆಯ ಮಾತು ಮತ್ತು ಅವರ ನೆರವು ಇಂದು ಶಕ್ತಿ ಪತ್ರಿಕೆ ನಿಮ್ಮ ಕೈ ಸೇರುವಂತಾಗಿದೆ.

ಕೊಡಗಿನ ಸಹಸ್ರಾರು ಕುಟುಂಬಗಳ ದೈನ್ಯತೆಯ ಪರಿಸ್ಥಿತಿಯ ಎದುರು ನಮ್ಮದು ಸುಧಾರಿಸಬಹುದಾದ ಸಮಸ್ಯೆ ಎಂಬ ಸಮಾಧಾನವಿದೆ. ಬದುಕನ್ನೇ ಕಟ್ಟಿಕೊಳ್ಳಬೇಕಾದವರ ಬವಣೆ ನಮ್ಮ ಕಣ್ಣಿಗೆ ಗೋಚರಿಸಿದಾಗ ಅವರೊಂದಿಗೆ ನಾವು ಪಾಲ್ಗೊಳ್ಳಲಾಗದ ನೋವು ಕಾಡುತ್ತಿದೆ. ಜಿಲ್ಲೆಯ ಜನ ಕೊಟ್ಟ ಧೈರ್ಯ ನಮಗೆ ಭರವಸೆಯ ಬೆಳಕಾಗಿ ಕಾಣುತ್ತಿದೆ.

‘ಶಕ್ತಿ’ ಕುಟುಂಬಕ್ಕೆ ಬಂದ ಸಾಂತ್ವನದ ಸಂದೇಶಗಳಿಗೆ, ದೂರವಾಣಿ ಕರೆಗಳಿಗೆ ಸರಿಯಾಗಿ ಸ್ಪಂದಿಸಲಾಗಲಿಲ್ಲ; ಭೇಟಿ ಮಾಡಲು ಬಂದ ಹಿತೈಷಿಗಳೊಂದಿಗೂ ಸರಿಯಾಗಿ ಬೆರೆಯಲಾಗಲಿಲ್ಲ. ಆದರೆ, ‘ಶಕ್ತಿ’ಯ ಅನಿವಾರ್ಯತೆಯನ್ನು ನಮಗೆ ತಿಳಿಹೇಳಿದ ಜನತೆ ನಮ್ಮ ಹೃದಯದಲ್ಲಿ ಸದಾ ನೆಲೆಸುವಂತವರಾಗಿದ್ದಾರೆ. 4 ದಿನಗಳ ಕಾಲ ನಮ್ಮ ಸ್ಥಿತಿಯನ್ನು ಅರಿತ ಓದುಗರು, ಚಂದಾದಾರರು, ಏಜೆಂಟರು, ಜಾಹೀರಾತುದಾರರು ಹಾಗೂ ವರದಿಗಾರರು ಮಾನಸಿಕವಾಗಿ ಧೈರ್ಯ ತುಂಬಿದ್ದಾರೆ.

ಜಿಲ್ಲೆಯ ಜನತೆಯ ಧ್ವನಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಎಲ್ಲರ ಹಾರೈಕೆಗೆ ಶಕ್ತಿ ಕುಟುಂಬದ ಅಂತರಾಳದ ಕೃತಜ್ಞತೆಗಳು.

ನಮ್ಮ ಕೊಡಗು ಬೇಗ ಚೇತರಿಸುವಂತಾಗಲಿ. ನೊಂದ ಮಂದಿಯ ಕಣ್ಣುಗಳಲ್ಲಿ ಭರವಸೆಯ ಬೆಳಕೂ ಕಾಣುವಂತಾಗಲಿ. ಜಾತಿ- ಮತ- ಧರ್ಮಗಳನ್ನು ಮೀರಿ ಒಗ್ಗಟ್ಟಾಗಿ ಕೊಡಗಿನ ನೆರವಿಗೆ ಧಾವಿಸಿರುವ ಹೃದಯಗಳು ಮುಂದೆಯೂ ಒಡೆದು ಹೋಗದಿರಲಿ. ಸಂತ್ರಸ್ಥರ ನೆರವಿಗೆ ಬಂದಿರುವ ಜನತೆ, ಸಂಘ-ಸಂಸ್ಥೆಗಳು, ಸರಕಾರ, ಜಿಲ್ಲಾಡಳಿತ, ಸೇನಾಪಡೆ, ರಕ್ಷಣಾ ಪಡೆ, ಪೊಲೀಸ್, ವಿದ್ಯುತ್ ಇಲಾಖೆ ಎಲ್ಲರಿಗೂ ನಾವು ಕೃತಜ್ಞರಾಗಿರೋಣ.

ಇದೇ ಒಗ್ಗಟ್ಟಿನಲ್ಲಿ ಕೊಡಗನ್ನು ಪುನರ್ ನಿರ್ಮಿಸುವ ಪಣ ತೊಡೋಣ.