ಕೊಡಗಿನಲ್ಲಿ ಹಿಂದೆಂದೂ ಕಾಣದ ಮಳೆ, ಗಾಳಿಯ ಅಬ್ಬರಕ್ಕೆ ಮನೆಗಳು ಕುಸಿದಿವೆ, ಬೆಟ್ಟಗಳು ಉರುಳಿವೆ, ಜೀವಗಳು ಬಲಿಯಾಗಿವೆ, ಜನತೆ ನೆಲೆ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಮುಂದಿನ ದಾರಿ ಕಾಣದೆ ನರಳುತ್ತಿದ್ದಾರೆ, ಎಲ್ಲಿದ್ದೆವು, ಎಲ್ಲಿಗೆ ಬಂದಿದ್ದೇವೆ, ನಮ್ಮ ಭವಿಷ್ಯವೇನು, ಕುಟುಂಬ ನಿರ್ವಹಣೆ ಎಂತು, ಕೃಷಿ ಭೂಮಿ ಏನಾಯಿತು, ವ್ಯಾಪಾರÀ ನಡೆಸುವದು ಹೇಗೆ, 20 ವರ್ಷಗಳ ಹಿಂದಕ್ಕೆ ತಳ್ಳಲ್ಪಟ್ಟ ನಾವು ಪ್ರಾರಂಭದಿಂದಲೇ ತಳಪಾಯ ಹಾಕಿ ಬದುಕು ಸಾಗಿಸಲು ಸಾಧ್ಯವೇ, ಮಕ್ಕಳನ್ನು ಸಾಕುವದೆಂತು, ಪರಿಹಾರ ಕೇಂದ್ರದಲ್ಲಿ ಎಷ್ಟರವರೆಗೆ ಇರಬೇಕು, ನಮ್ಮ ಊರಿಗೆ ಮರಳಲು ಸಾಧ್ಯವೇ, ನಮ್ಮ ಜಾಗ ನಮಗೆ ಸಿಗುತ್ತದೆಯೇ, ವಾಸದ ಮನೆಗೆ ಏನು ಮಾಡುವದು, ಯಾವಾಗ ಯಾರು ಕಟ್ಟಿಕೊಡುತ್ತಾರೆ, ನಾವು, ಗಳಿಕೆಗಾಗಿ ದುಡಿಯತ್ತಿದ್ದ ಕೆಲಸ ಸಿಗುತ್ತದೆಯೇ, ನಾವು ಕೃಷಿ ಮಾಡುತ್ತಿದ್ದ ಭೂಮಿ ದೊರಕುತ್ತದೆಯೇ? ನಾವು ಮಾಡುತ್ತಿದ್ದ ವ್ಯಾಪಾರ ಮುಂದುವರಿಸಲು ಸಾಧ್ಯವೇ, ನಾಶಗೊಂಡ ಕೈಗಾರಿಕೆಗಳನ್ನು ಮರು ಸ್ಥಾಪಿಸಲು ಅವಕಾಶವಿದೆಯೇ- ಹೀಗೆ ಹತ್ತು ಹಲವು ನಿತ್ಯ ಪ್ರಶ್ನೆಗಳ ಮಧ್ಯೆ ಉತ್ತರ ದೊರಕದೆ ನರಳುತ್ತಿದ್ದಾರೆ.ತಮ್ಮ ಮನೆಗಳು ಬೀಳಬಹುದೆನ್ನುವ ಭಯದಿಂದ ಊರನ್ನೇ ಬಿಟ್ಟು ದೂರದ ನೆಂಟರಿಷ್ಟರು, ಆಪ್ತರ ಮನೆಗೆ ದೌಡಾಯಿಸುತ್ತಿರುವ ಕುಟುಂಬಗಳು, ಪರಿಹಾರ ಕೇಂದ್ರದಲ್ಲಿ ತÀಮ್ಮ ಗತ ಜೀವನದ ನೆನಪಿನ ಮೆಲುಕಿನಲ್ಲಿ ಇದೀಗ ಎಲ್ಲ ಕಳೆದುಕೊಂಡು ಗಾಡಾಂಧಕಾರದ ವಿಹ್ವಲತೆಯಿಂದ ಕಾಲ ಕಳೆಯುತ್ತಿರುವ ಮಂದಿ, ಛೆ! ಏಕೆ ಹೀಗಾಯಿತು, ಪ್ರಕ್ರೃತಿ ಮಾತೆ ನಿಷ್ಕರುಣಿಯೇ?, ಕಾವೇರಿ ನಾಡು ಸುರಕ್ಷಿತವಲ್ಲವೇ? ವರುಣ- ವಾಯು ಅನುಕಂಪ ರಹಿತರೆ? ದೈವತ್ವದ ಕಲ್ಪನೆ ಕೇವಲ ಭ್ರಮೆಯೇ, ಯಾರನ್ನು ದೂಷಿಸುವದು, ಯಾರನ್ನು ಆಶ್ರಯಿಸುವದು, ಬಹುತೇಕರು ದುಷ್ಪರಿಣಾಮಕ್ಕೆ ಒಳಗಾಗಿದ್ದು ಅವರವರ ಸಂಕಷ್ಟಗಳನ್ನು ಪರಸ್ಪರ ಹೇಳಿಕೊಂಡು ಸ್ವಲ್ಪ ಸಮಾಧಾನ ಪಡಬೇಕಾದೀತೇ ಹೊರತು ಯಾರೂ ಮತ್ತೊಬ್ಬರ ಈ ವಿನಾಶಕಾರೀ ಅವನತಿಯಿಂದ ಅವರನ್ನು ಪೂರ್ವಸ್ಥಿತಿಗೆ ತಲುಪಿಸುವಂತಹ ಭರವಸೆ ನೀಡುವದಾಗಲೀ, ನಿರೀಕ್ಷೆಯಾಗಲಿ ಸಂತ್ರಸ್ತರಿಗೆ ಖಂಡಿತ ಉಳಿದಿಲ್ಲ. ಇತಿಹಾಸ ಕಾಲದಲ್ಲಿ ಸಾಮ್ರಾಜ್ಯಗಳೇ ಪತನವಾದಂತಹ ಸ್ಥಿತಿ ಕೊಡಗಿನ ಮಹಾಜನತೆಗೆ ಒದಗಿ ಬಂದಿರುವದು ತೀರಾ ದುರದೃಷ್ಟಕರ, ಅತೀವ ದು:ಖಕರ.

ಅಬ್ಬಾ! ಭಯಾನÀಕ ಆ ಕ್ಷಣಗಳು, ನೋಡ ನೋಡುತ್ತಿದ್ದಂತೆಯೇ ಬರೆಗಳು ಕುಸಿದಾಗ, ಮನೆಗಳು ನೆಲಕಚ್ಚಿದಾಗ, ರಸ್ತೆಗಳು ಇಬ್ಭಾಗವಾದಾಗ, ವಾಣಿಜ್ಯ ಕಟ್ಟಡಗಳು ಕೆಳಗುರುಳಿದಾಗ, ಕೃಷಿ ಭೂಮಿಗಳು ಕೊಚ್ಚಿ ಹೋದಾಗ, ಇಡೀ ಬೆಟ್ಟಗಳೇ ಕುಸಿಯತ್ತ ಬಿದ್ದಾಗ, ಭೀಕರ ಜಲ ಪ್ರವಾಹ ನುಗ್ಗಿ ಬಂದು ಕ್ಷಣಾರ್ಧದಲ್ಲಿ ಆವರಿಸಿದಾಗ “ನಾವು ಎಲ್ಲಿದ್ದೇವೆ, ನಮಗೆ ಏನಾಗುತ್ತಿದೆ, ನಮ್ಮನ್ನು ಕಾಪಾಡುವವರ್ಯಾರು, ನಮ್ಮ ನಾಡಿಗೆ ಏನಾಗಿಬಿಟ್ಟ್ಟಿತು,ಇದು ಕನಸೋ, ನಿಜವೋ, ಭ್ರಮೆಯೋ” ಎನ್ನುವಂತಹ ಅತಿ ಮಾರಣಾಂತಿಕ ಸ್ಥಿತಿ ಜನರಲ್ಲಿ ಭಯ ಭೀತಿ ಮೂಡಿಸಿದೆ. ಅನೇಕರು “ಜೀವವಿದ್ದರೆ ಏನಾದರೂ ಮಾಡಬಹುದು ಎಂದು ಬೇರೆ ಊರುಗಳಿಗೆ ತೆರಳಿದ್ದಾರೆ. ಮನೆಗಳು, ಕಟ್ಟಡಗಳಲ್ಲಿದ್ದ, ಅಮೂಲ್ಯ ವಸ್ತುಗಳು, ಗೃಹ, ವ್ಯವಹಾರೀ ಸಾಮಗ್ರಿಗಳು, ವಸ್ತ್ರಗಳು, ದಾಖಲಾತಿಗಳು, ಪೀಠೋಪಕರಣಗಳು, ಬದುಕಲು ಬೇಕಾದ ಇನ್ನಿತರ ಎಲ್ಲ ಅಗತ್ಯ ಸಾಮಗ್ರಿಗಳು ನೀರು ಪಾಲಾಗಿವೆ. ಕೆಲವೆಡೆ ಮನೆ, ಕಟ್ಟಡಗಳಲ್ಲಿ ಉಳಿದಿದ್ದ ಅನೇಕ ಸಾಮಗ್ರ್ರಿಗಳು ದುಸ್ಥಿತಿಯ ದುರ್ಲಾಭಿಗಳಾದ ಕಳ್ಳರ ಪಾಲಾಗುತ್ತಿವೆ. ಈಗ ಏನಿದ್ದರೂ ಸಂತ್ರಸ್ತರಿಗೆ ಉಳಿದಿರುವದು ಬರಿಗೈ ಮಾತ್ರ. ಎಲ್ಲವನ್ನೂ ‘ಅ’ ಅಕ್ಷರದಿಂದ ಪ್ರಾರಂಭಿಸಬೇಕು.

ಹಾಗೆಂದು, ಇಂತಹ ಸಂದರ್ಭ “ಶಕ್ತಿ” ಯ ಪ್ರಾರ್ಥನೆ ಇಷ್ಟೆ, ಖಂಡಿತ ಸಂತ್ರಸ್ತರು ನಿರಾಶರಾಗಬಾರದು. ಧೈರ್ಯಸ್ಥೈರ್ಯದಿಂದ ಬದುಕನ್ನು ಕಟ್ಟ್ಟಿಕೊಳ್ಳಲು ಶಕ್ತಿ ಮೀರಿ ಶ್ರಮಿಸಿ ಮುನ್ನಡೆಯಿಂದ ಮುನ್ನಡಿಯಿಟ್ಟು ಸಾಧಿಸುತ್ತೇವೆ ಎನ್ನುವ ಮನೋಸ್ಥೈರ್ಯವನ್ನು ಹೊಂದಬೇಕು. ಏಕೆಂದರೆ ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ಸಹಾಯದ ಅಭಯ ಹಸ್ತದೊಂದಿಗೆ ಪ್ರಾಯೋಗಿಕವಾಗಿ ಅಗತ್ಯ ವಸ್ತುಗಳು ಬರುತ್ತಿವೆ. ಸರಕಾರ, ಹಾಗೂ ಆಡಳಿತ ಸಾಧ್ಯವಾದಷ್ಟು ಪ್ರಮಾಣದಲ್ಲಿ ಸ್ಪಂದಿಸುತ್ತಿವೆ. ಸಾಮಾಜಿಕ ಕಳಕಳಿಯ ಸಂಘ ಸಂಸ್ಥೆಗಳು ನೆರವು ನೀಡುತ್ತಿವೆ. ಹಾಗಿದ್ದರೆ ಈಗ ಮುಖ್ಯವಾಗಿ ಆಗಬೇಕಾದುದೇನು, ಬರುತ್ತಿರುವ ವಸ್ತುಗಳನ್ನು ಅಧಿಕೃತ ಲೆಕ್ಕಾಚಾರದೊಂದಿಗೆ ಉದ್ದೇಶಿತ ಕಾರ್ಯಕ್ಕಾಗಿ ಸಮರ್ಪÀಕವಾಗಿ ಬಳಸಿಕೊಳ್ಳಲು ಆಯಾ ಪರಿಹಾರ ಕೇಂದ್ರಗಳಲ್ಲಿ ವ್ಯವಸ್ಥೆ.

ಇವೆಲ್ಲಕ್ಕಿಂತ ಮಿಗಿಲಾಗಿ ತುರ್ತಾಗಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಈ ಕಾರ್ಯವನ್ನು ಕೇವಲ ಸರಕಾರವೇ ಕೈಗೊಳ್ಳಲು ಅಸಾಧ್ಯ. ಜಿಲ್ಲಾಡಳಿತದ ನೇತೃತ್ವದಲ್ಲಿ ಪ್ರಮುಖ ಸಂಘ ಸಂಸ್ಥೆಗಳು, ಮಾಧ್ಯಮ ಸಂಘಟನೆಗಳೂ ಸೇರಿದಂತೆ ಜನಪ್ರತಿನಿಧಿಗಳನ್ನೊಳಗೊಂಡ ಅಧಿಕೃತ ನಿರ್ವಹಣಾ ಸಮಿತಿ (ಒoಟಿiಣoಡಿiಟಿg ಛಿommiಣಣee) ಒಂದನ್ನು ಸರಕಾರ ಕೂಡಲೇ ರಚಿಸಬೇಕು. ಹೆಚ್ಚಿನ ಸಾಮಗ್ರ್ರಿಗಳು ಬರುವಂತಿದ್ದರೆ ಅದನ್ನು ಸ್ಥಗಿತಗೊಳಿಸಿ ಬದಲಿಗೆ ಇಂತಹ ದಾನಿಗಳಿಂದ ನಗದು ರೂಪದಲ್ಲಿ ಹಣ ಸಂಗ್ರಹಿಸಿ ಪ್ರತ್ಯೇಕ ನಿಧಿ ಸ್ಥಾಪಿಸಬೇಕು. ಪುನರ್ವಸತಿಗಾಗಿ ಸರಕಾರ ನೀಡುವ ಅನುದಾನದೊಂದಿಗೆ ಈ ನಿಧಿಯನ್ನು ಉಪಯೋಗಿಸಿ ನೂತನ ಮನೆಯೊಂದಿಗೆ ಅಗತ್ಯ ಪೀಠೋಪಕರಣ, ಅಡುಗೆ ಅನಿಲ, ಸ್ಟವ್ ಇತ್ಯಾದಿ ಒದಗಿಸಬೇಕು.

ಇದಕ್ಕೆಲ್ಲ ಒಂದು ಕುಟುಂಬಕ್ಕೆ ಪಕ್ಷಪಾತವಿಲ್ಲದಂತೆ ಅನುದಾನದ ಪರಿಮಿತಿ ನಿಗದಿಗೊಳಿಸಿ ಪ್ರ್ರತಿಯೊಬ್ಬ ಸಂತ್ರಸ್ತರಿಗೂ ಪುನರ್ವಸತಿ ಕಲ್ಪಿಸಬೇಕು. ಇದಕ್ಕೂ ಮುನ್ನ ನೈಜ ಸಂತ್ರಸ್ತರ ಪಟ್ಟಿ ತಯಾರಿಸಬೇಕು. ಮರು ವಸತಿ ಕಲ್ಪಿಸಬೇಕಾದ ಗ್ರಾಮ, ಪಟ್ಟಣಗಳಲ್ಲಿ ನಿವೇಶನಗಳ ಗುರುತಿಸುವಿಕೆ, ಮನೆಗಳನ್ನು ನಿರ್ಮಿಸುವಾಗ ಅತಿ ವೃಷ್ಟಿ ಪ್ರದೇಶಕ್ಕೆ ಪೂರಕವಾದ ಆಧುನಿಕ

ಮಳೆ ಗಾಳಿ ಅಬ್ಬರ; ಜನ ಜೀವನ ದುರ್ಭರ

(ಮೊದಲ ಪುಟದಿಂದ) ತಂತ್ರಜ್ಞಾನದ ನೆರವಿನಿಂದ ಪರಿಣಿತರ ಮಾರ್ಗದರ್ಶನ ಪಡೆದು ಮನೆಗಳನ್ನು ನಿರ್ಮಿಸಬೇಕು. ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳನ್ನು ಕಳೆದುಕೊಂಡವರಿಗೆ ಅವರು ತಮ್ಮ ಬದುಕು ನಿರ್ವಹಣೆಗೆ ತಮ್ಮ ಕೃಷಿ ,ಹಾಗೂ ವ್ಯವಹಾರ ಪ್ರಾರಂಭಿಸಲು ಅಗತ್ಯವಾದ ಅನುದಾನ ಅಥವ ನಿವೇಶನ ಅಥವ ಭೂಮಿಯನ್ನು ಒದಗಿಸಬೇಕು. ಏಕೆಂದರೆ ಅರ್ಧಕ್ಕರ್ಧ ಜಿಲ್ಲೆಯೇ ಮುಳುಗಿಹೋಗಿರುವದರಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಕೈ ಜೋಡಣೆಯೊಂದಿಗೆ ರಚಿಸಲ್ಪಡುವ ನಿರ್ವಹಣಾ ಸಮಿತಿ ಮೂಲಕ ಸಾರ್ವಜನಿಕ ವಂತಿಕೆಯನ್ನೂ ಬಳಸಿಕೊಂಡು ಆದಷ್ಟು ಶೀಘ್ರ ಈ ಅಮೂಲ್ಯ, ಮಾನವೀಯ ಕಾರ್ಯವನ್ನು ನಿರ್ವಹಿಸುವಂತಾಗಬೇಕು. ಆಯಾ ಕುಟುಂಬಗಳಲ್ಲಿ ನಿರುದ್ಯೋಗಿ ವಿದ್ಯಾವಂತ ಯುವಕರಿದ್ದರೆ ಕನಿಷ್ಟ ಅವರಿಗೆ ಸರಕಾರಿ ಅಥವಾ ಖಾಸಗಿ ಉದ್ಯೋಗ ದೊರಕಿಸಿಕೊಟ್ಟರೆ ತಕ್ಷಣ ಅಂತಹ ಕುಟುಂಬ ಮರುಜೀವ ಪಡೆಯಲು ಸಾಧ್ಯವಾಗುತ್ತದೆ.

ಬದಲೀ ವ್ಯವಸ್ಥೆಯೆಂದರೆ, ಕೃಷಿ ಮಾಡಲು ಸಾಧ್ಯವಿಲ್ಲದವರಿಗೆ, ಚಿಕ್ಕ ಮಕ್ಕಳಿದ್ದು, ಆಸರೆಯಿಲ್ಲದವರಿಗೆ ಅವರು ಬಯಸಿದರೆ ನಗದು ರೂಪದಲ್ಲಿ ಪರಿಹಾರ ನೀಡಿದರೆ ಅವರ ಬದುಕನ್ನು ಅವರೇ ರೂಪಿಸಿಕೊಳ್ಳಲು ಸಾಧ್ಯವಾಗಬಹುದು.

ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕ ಆಸರೆ ಪಡೆದವರು ಮಾತ್ರವಲ್ಲದೆ, ತಮ್ಮ ಊರನ್ನು ಬಿಡಲಾರದೆ, ಸಾವು - ಬದುಕಿನ ನಡುವೆ ವಾಸಿಸುತ್ತಿರುವ ಕುಟುಂಬಗಳೂ ದುಷ್ಪರಿಣಾಮಕ್ಕೀಡಾದ ಗ್ರಾಮಗಳಲ್ಲಿ ನೆಲೆಸಿದ್ದಾರೆ. ನಿರ್ವಹಣಾ ಸಮಿತಿಯು ಅಂತಹವರನ್ನು ಕೂಡ ಗುರುತಿಸಿ ಅವರ ಭವಿಷ್ಯದ ಬದುಕಿಗೆ ನೆರವು ನೀಡುವದನ್ನು ಮರೆಯಬಾರದು. ಇದನ್ನು ಸಾಧಿಸಬೇಕಾದರೆ ಪ್ರತ್ಯೇಕ ಅಧ್ಯಯನ ತಂಡವನ್ನು ರಚಿಸಿ ಆಯಾ ಗ್ರಾಮ, ಪಟ್ಟಣಗಳಿಗೆ ತೆರಳಿ ಅಲ್ಲಿಯೇ ನೆಲೆಸಿರುವ ಸಂತ್ರಸ್ಥರನ್ನು ಗುರುತಿಸಿ ಪಟ್ಟಿ ಮಾಡಬೇಕಾಗಿದೆ. ಬಳಿಕ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ.

ಈ ಬಗ್ಗೆ ಸರಕಾರ, ಜಿಲ್ಲಾಡಳಿತ ಶೀಘ್ರ ವಿಶೇಷ ಸಭೆ ನಡೆಸಿ ಜನಪ್ರತಿನಿಧಿಗಳು ಸಂಘ, ಸಂಸ್ಥೆಗಳೊಂದಿಗೆ (ಮಾಧ್ಯಮಗಳ ಸಂಘಟನೆ ಪ್ರತಿನಿಧಿಗಳನ್ನೂ ಸೇರಿದಂತೆ) ಚರ್ಚಿಸಿ ನಿರ್ಧಾರ ಕೈಗೊಳ್ಳಲಿ. ಕೇವಲ ಕಾನೂನಾತ್ಮಕ ಅಂಶಗಳನ್ನಿಟ್ಟುಕೊಂಡು, ಎಲ್ಲ ಪ್ರಕ್ರ್ರಿಯೆಗಳನ್ನೂ ಸರಕಾರೀ ಕೆಲಸದಂತೆ ವಿಳಂಬ ಮಾಡುತ್ತ ಹೋಗದೆ. ಮಾನವೀಯತೆ ದೃಷ್ಟಿಯಿಂದ ಅತಿ ಶೀಘ್ರ ಗತಿಯಲ್ಲಿ ಈ ಕೆಲಸವನ್ನು ಪೂರೈಸಬೇಕಾಗಿದೆ. ಜನರ ಭವಿಷ್ಯ ಜೀವನವನ್ನು ರೂಪಿಸಬೇಕಾಗಿದೆ.

-ಜಿ. ರಾಜೇಂದ್ರ, ಪ್ರಧಾನ ಸಂಪಾದಕ.