ಮಡಿಕೇರಿ, ಆ. 20: ನಗರದ ಖಾಸಗಿ ಬಸ್ ನಿಲ್ದಾಣ ಹಿಂಭಾಗದ ಬರೆಕುಸಿತದಿಂದ, ಅಲ್ಲಿನ ಹತ್ತಾರು ಅಂಗಡಿಗಳು ನೆಲಕಚ್ಚುವದರೊಂದಿಗೆ; ಮೇಲಿನ ಬೆಟ್ಟದಿಂದ ವಿದ್ಯುತ್ ಕಂಬಗಳು ಬಿದ್ದು ಸಾಕಷ್ಟು ಹಾನಿಯಾಗಿದೆ. ಪರಿಣಾಮ ಖಾಸಗಿ ಬಸ್‍ಗಳ ಸಹಿತ ಕಾರು ನಿಲ್ದಾಣಕ್ಕೂ ಸಮಸ್ಯೆ ಉಂಟಾಗಿದೆ. ಇದೀಗ ಖಾಸಗಿ ಬಸ್‍ಗಳನ್ನು ನೂತನ ನಿಲ್ದಾಣಕ್ಕೆ ಬದಲಾಯಿಸಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಬಸ್‍ಗಳನ್ನು ಅನಿವಾರ್ಯವಾಗಿ ವೆಬ್ಸ್ ಬಳಿ ನಗರಸಭೆಯ ನೂತನ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸಲಾಗುತ್ತಿದೆ. ಸಂಬಂಧಪಟ್ಟವರು ನೂತನ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್‍ಗಳು ಆಗಮಿಸಲು ಮತ್ತು ಹಿಂತೆರಳಲು ಸೂಕ್ತ ಮಾರ್ಗ ವ್ಯವಸ್ಥೆ ಕಲ್ಪಿಸಬೇಕೆಂದು ಬಸ್ ಕಾರ್ಮಿಕರ ಸಂಘದ ಉಪಾಧ್ಯಕ್ಷ ಸಲೀಂ ಒತ್ತಾಯಿಸಿದ್ದಾರೆ.

ಹೊಸ ನಿಲ್ದಾಣದಲ್ಲಿ ಕೆಲವು ಮೂಲಭೂತ ಸೌಕರ್ಯಗಳೊಂದಿಗೆ; ಸರಿಯಾದ ಮಾರ್ಗ ವ್ಯವಸ್ಥೆಯಾದರೆ ತಮ್ಮ ಯಾವದೇ ಆಕ್ಷೇಪಣೆ ಇಲ್ಲವೆಂದು ಅವರು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಹಳೆಯ ನಿಲ್ದಾಣದಲ್ಲಿ ಬಸ್‍ಗಳ ನಿಲುಗಡೆ ಅಸಾಧ್ಯವಿದ್ದು, ಅಪಾಯಕಾರಿ ಸನ್ನಿವೇಶವಿರುವದಾಗಿ ಅವರು ಬೊಟ್ಟು ಮಾಡಿದ್ದಾರೆ.