ಭಾಗಮಂಡಲ, ಆ. 20: ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರಗಳಾದ ತಲಕಾವೇರಿ ಹಾಗೂ ಭಾಗಮಂಡಲ ಸುತ್ತ ಮಳೆಯ ಪ್ರಭಾವ ಕಡಿಮೆಯಾಗತೊಡಗಿದೆ. ಸಂಗಮದಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದು, ಭಾಗಮಂಡಲದಿಂದ ಮಡಿಕೇರಿ ಹಾಗೂ ನಾಪೋಕ್ಲು ರಸ್ತೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿವೆ. ಭಾಗಮಂಡಲದಿಂದ ನಾಪೋಕ್ಲು ಮಾರ್ಗವಾಗಿ ಒಂದೆರಡು ಸರ್ಕಾರಿ ಬಸ್‍ಗಳು ಸಂಚಾರ ಪ್ರಾರಂಭಿಸಿವೆ.
ಗುಡ್ಡದಿಂದ ಕೇಳಿಬಂದ ಭಾರೀ ಸದ್ದು!
ಚೇರಂಬಾಣೆ ಸಮೀಪದ ಕುಂದಚೇರಿಯ ‘‘ಪೂವನಮಾನಿ’’ ಬೆಟ್ಟದಲ್ಲಿ ತಾ. 18ರ ಮಧ್ಯಾಹ್ನ ಭಾರೀ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಆ ಪರಿಸರದಲ್ಲಿ ನೆಲೆಸಿದ್ದ ಸುಮಾರು 80 ಮಂದಿ ಹೆದರಿದ್ದು, ಇಲ್ಲಿನ ನಿವಾಸಿಗಳಿಗೆ ಚೆಟ್ಟಿಮಾನಿ ಸರ್ಕಾರಿ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ಸ್ಥಾಪಿಸಲಾಗಿದೆ. 6 ವರ್ಷಗಳ ಹಿಂದೆ ಇದೇ ರೀತಿಯ ಸದ್ದು ಕೇಳಿಬಂದಿದ್ದು, ಆ ವಿಭಾಗದಲ್ಲಿ ಹಿಂದೆ ಬರೆ ಕುಸಿತದ ಕಾರಣ ಜನರು ಭೀತಿಗೊಳಗಾಗಲು ಕಾರಣವೆನ್ನಲಾಗಿದೆ.
ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜಿನಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಒಟ್ಟು 637 ಮಂದಿ ಆಶ್ರಯ ಪಡೆದಿದ್ದು, ಈ ಪೈಕಿ 221 ಮಂದಿ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದು, 416 ಮಂದಿ ಕೇಂದ್ರದಲ್ಲಿ ನೆಲೆಸಿದ್ದಾರೆ.
ತಲಕಾವೇರಿ- ಭಗಂಡೇಶ್ವರ ದೇಗುಲಗಳಲ್ಲಿ ಪೂಜೆ
ಅತಿವೃಷ್ಠಿಯಿಂದ ಕೊಡಗು ಜಿಲ್ಲೆಯನ್ನು ಪಾರುಮಾಡುವಂತೆ ನಿನ್ನೆ ಪುಣ್ಯಕ್ಷೇತ್ರಗಳಾದ ತಲಕಾವೇರಿ ಹಾಗೂ ಭಾಗಮಂಡಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಮೀಪದ ಗ್ರಾಮಗಳ ತಕ್ಕಮುಖ್ಯಸ್ಥರು, ಬಳ್ಳಡ್ಕ ಅಪ್ಪಾಜಿ, ಹೊಸೂರು ಸತೀಶ್ ಕುಮಾರ್ ದೇವಾಲಯ ಆಡಳಿತ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ಹಾಜರಿದ್ದರು.
-ಕೆ.ಡಿ.ಸುನಿಲ್.