ಕುಶಾಲನಗರ, ಆ. 20: ಸರಕಾರದ ನಿರ್ದೇಶನದಂತೆ ಕುಶಾಲನಗರದಲ್ಲಿ ನದಿ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಅಧಿಕಾರಿಗಳ ತಂಡ ಕಾರ್ಯೋನ್ಮುಖ ವಾಗಿದೆ ಎಂದು ರಾಜ್ಯ ಕೆಎಸ್‍ಆರ್‍ಪಿ ಸಹಾಯಕ ನಿರ್ದೇಶಕರಾದ ಭಾಸ್ಕರ್ ರಾವ್ ಹೇಳಿದರು.
ಕುಶಾಲನಗರ ಕನ್ನಿಕಾ ಸಭಾಂಗಣದಲ್ಲಿ ನಡೆದ ನೆರೆ ಸಂತ್ರಸ್ತರ ಕುಂದುಕೊರತೆಗಳು ಹಾಗೂ ನೆರೆ ಪೀಡಿತ ಮನೆ, ಪ್ರದೇಶಗಳ ಸ್ವಚ್ಛತೆ ಸಂಬಂಧ ಹಮ್ಮಿಕೊಂಡ ಸಭೆಯಲ್ಲಿ ಚರ್ಚೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾಸ್ಕರ್ ರಾವ್, ನೆರೆ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರವಾಹ ಇಳಿಮುಖಗೊಂಡಿದ್ದು ಮನೆಮನೆಗಳ ಸ್ವಚ್ಛತೆ, ಶುದ್ಧ ಕುಡಿವ ನೀರಿನ ಪೂರೈಕೆ, ಆರೋಗ್ಯ ಸಂರಕ್ಷಣೆ ಕುರಿತಾಗಿ ಅಧಿಕಾರಿಗಳ ತಂಡ ಕಾರ್ಯೋನ್ಮುಖರಾಗಿದ್ದಾರೆ. ಪ್ರವಾಹದಿಂದ ಆಸ್ತಿಪಾಸ್ತಿ ಕಳೆದುಕೊಂಡ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಕೋರಿದರು.
ಸಂತ್ರಸ್ತರನ್ನು ಹೊರತುಪಡಿಸಿ ಇತರರು ಕೂಡ ಪರಿಹಾರ ಸಾಮಗ್ರಿಗಳಿಗೆ ಮುಗಿಬೀಳುತ್ತಿರುವ ಬಗ್ಗೆ ಸಭೆಯಲ್ಲಿ ಆರೋಪಗಳು ಕೇಳಿಬಂದವು. ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆಗಳಿಗೆ ಪರಿಹಾರ ಸಾಮಗ್ರಿ ವಿತರಣೆಯಾಗಬೇಕು, ಆರೋಗ್ಯ ರಕ್ಷಣೆಗಾಗಿ ವೈದ್ಯರುಗಳ ತಂಡ ರಚಿಸಿ ನಿಯೋಜನೆ ಮಾಡಬೇಕಿದೆ ಎಂದು ಸಂತ್ರಸ್ತರಿಂದ ಆಗ್ರಹಗಳು ಕೇಳಿಬಂದವು. ಇಸ್ಕಾನ್ ಸಂಸ್ಥೆಯಿಂದ ಸಂತ್ರಸ್ತರಿಗೆ ಪ್ರತಿ ದಿನ ಊಟದ ವ್ಯವಸ್ಥೆ ಏರ್ಪಡಿಸಲಾಗಿರುವ ಕಾರಣ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿ ಆಹಾರ ಒದಗಿಸಬೇಕೆಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಅಮೃತ್‍ರಾಜ್ ಕೋರಿದರು.
ಪ್ರಬಾರ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಭೂದಾಖಲೆಗಳ ನಿರ್ದೇಶಕರಾದ ವಿದ್ಯಾದಾಯಿನಿ, ಕೆಎಸ್‍ಆರ್‍ಪಿ ಹಾಸನ ಘಟಕದ ಕಮಾಂಡೆಂಟ್ ಕೃಷ್ಣಪ್ಪ, ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಕುಶಾಲನಗರ ಪಪಂ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.