ಸೋಮವಾರಪೇಟೆ, ಆ.20: ಜಲಪ್ರಳಯದಿಂದ ಮುಕ್ಕೋಡ್ಲು ಗ್ರಾಮ ಮುಳುಗಿದೆ. ಭಾರೀ ಬೆಟ್ಟಗಳು ಕುಸಿದಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಸ್ತಬ್ಧಗೊಂಡಿದೆ. ರಸ್ತೆ ಬದಿಯ ಗುಡ್ಡಗಳು ಕುಸಿದು ಭಾರೀ ಮರಗಳು ನೆಲಕ್ಕುರುಳಿದ್ದರೆ, ಕೆಲವೆಡೆ ರಸ್ತೆಗಳೇ ಕೊಚ್ಚಿ ಹೋಗಿವೆ. ಹಚ್ಚಿನಾಡು ಗ್ರಾಮದ ಸುಭಾಶ್ ಸೋಮಯ್ಯ ಎಂಬವರ ಮನೆ ಕಣ್ಮರೆಯಾಗಿದ್ದರೆ, ಕುಶಾಲಪ್ಪ ಅವರ ಮನೆ, ಕಾರು, ದಾಖಲೆಗಳ ಸಹಿತ ಮಣ್ಣುಪಾಲಾಗಿದೆ.ಭಾರೀ ದುರಂತಕ್ಕೆ ಒಳಗಾಗಿರುವ ಮುಕ್ಕೋಡ್ಲು ಗ್ರಾಮ ಈ ಹಿಂದಿನ ಸ್ಥಿತಿಗೆ ಮರಳಲು ಕೆಲ ವರ್ಷಗಳೇ ಬೇಕಾಗಬಹುದು. ಗ್ರಾಮಕ್ಕೆ ಗ್ರಾಮವೇ ಖಾಲಿಯಾಗಿದ್ದು, ಜಾನುವಾರುಗಳು ಮಾತ್ರ ಮುಕ್ಕೋಡ್ಲಿನಲ್ಲಿ ಉಳಿದಿವೆ.
ಹೇಗಿತ್ತು ಮುಕ್ಕೋಡ್ಲು?: ಕಳೆದ ಐದು ದಿನಗಳಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದ ಮುಕ್ಕೋಡ್ಲು ಗ್ರಾಮಸ್ಥರನ್ನು ತಲಪಿಯೇ ತೀರಬೇಕೆಂಬ ಹಠದಿಂದ ನಿನ್ನೆ ದಿನ ಎರಡೂ ಭಾಗಗಳಿಂದ ಕಾರ್ಯಾ ಚರಣೆ ನಡೆಯಿತು.ಮಾದಾಪುರದ ಇಗ್ಗೋಡ್ಲು ಎಸ್ಟೇಟ್ ನಡುವೆ ಯಂತ್ರಗಳ ಸಹಾಯ ದಿಂದ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಯುವಕರು ಕಾರ್ಯಾಚರಣೆಗೆ ಇಳಿದರು. ಕೋಟೆಬೆಟ್ಟವನ್ನು ಹತ್ತಿ ಇಳಿದು 30 ಯುವಕರು ಮುಕ್ಕೋಡ್ಲು ಮುಟ್ಟಿದರು. ಅಲ್ಲಿನ ರಾಜೇಶ್ ಎಂಬವರ ಕುಟುಂಬ ಜಲಪ್ರಳಯದಿಂದ ಅಕ್ಷರಶಃ ನಲುಗಿಹೋಗಿದ್ದು,
(ಮೊದಲ ಪುಟದಿಂದ) ಹೊಳೆದಾಟಿ ಹೊರಬರಲು ಅಸಾಧ್ಯವಾಗಿತ್ತು.
ಹೊಳೆಯನ್ನು ದಾಟಿದ ಕೆಚ್ಚೆದೆಯ ಯುವಕರು ಭಾರೀ ಸಾಹಸ ಮಾಡಿ ಈರ್ವರು ಪುಟಾಣಿ ಮಕ್ಕಳು, ಈರ್ವರು ವೃದ್ಧರು ಸೇರಿದಂತೆ 6 ಮಂದಿಯನ್ನು ರಕ್ಷಿಸಿದರು. ಇದರೊಂದಿಗೆ ಸಂಪರ್ಕ ಕಡಿದುಕೊಂಡಿದ್ದ 40ಕ್ಕೂ ಅಧಿಕ ಮಂದಿಯನ್ನು ಮಾದಾಪುರ ಮಾರ್ಗವಾಗಿ ಕರೆದುಕೊಂಡು ಬಂದರು.
ಇತ್ತ ಸೂರ್ಲಬ್ಬಿ, ಹಮ್ಮಿಯಾಲ ಮಾರ್ಗವಾಗಿ ಹಚ್ಚಿನಾಡು ತಲಪಿದ ‘ಶಕ್ತಿ’ ಪ್ರತಿನಿಧಿಯನ್ನೊಳಗೊಂಡ ಯುವಕರ ತಂಡ, ಮುಕ್ಕೋಡ್ಲುವಿನಲ್ಲಿ ಯಾರ ಸಂಪರ್ಕಕ್ಕೂ ಸಿಗದೇ ಉಳಿದುಕೊಂಡಿದ್ದ ಪೊನ್ನಚೆಟ್ಟಿರ ಮಾದಪ್ಪ ಅವರ ಮನೆ ತಲಪಿತು. ವಯಸ್ಸಾದ ಪೋಷಕರೊಂದಿಗೆ ಬದುಕಿನ ಆಸೆಯನ್ನೇ ಕಳೆದುಕೊಂಡಿದ್ದ ವಿಕಲಚೇತನ ರತೀಶ್ ಅವರನ್ನು ಮನೆಯೊಳಗೆ ಇಟ್ಟುಕೊಂಡಿದ್ದ ಪೋಷಕರು ಆಸೆಗಣ್ಣಿನಿಂದ ನೋಡುತ್ತಿದ್ದರು.
ಕಳೆದ 5 ದಿನಗಳ ಹಿಂದೆ ಹೆಲಿಕಾಪ್ಟರ್ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೆ ಎಂದು ಕೆಲವರು ತಿಳಿಸಿದ್ದರಿಂದ ಹೆಲಿಕಾಪ್ಟರ್‍ಗಾಗಿ ಮನೆಮಂದಿ ಕಾದು ಕುಳಿತಿದ್ದರು. ಮನೆಯಲ್ಲಿದ್ದ ದಿನಸಿ ಸಾಮಾಗ್ರಿಗಳೂ ಮುಗಿದು ಖಾಲಿಹೊಟ್ಟೆಯಲ್ಲಿ ಯಾರಾದರೂ ಬರುತ್ತಾರೆ ಎಂದು ಕಾದುಕುಳಿತಿದ್ದ ಕುಟುಂಬಕ್ಕೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಧು, ಕಾರ್ಯಾಚರಣೆಗೆ ಇಳಿದಿದ್ದ ತಂಡದ ಗಣಪತಿ, ಮಹೇಶ್, ಸಂಪತ್ ಶಂಭು, ಕೊಮಾರಿ ಸತೀಶ್, ಚಂದನ್, ನಿತಿನ್, ಅಂಕಿತ್, ಚಂದ್ರ ಸೇರಿದಂತೆ ಇತರರನ್ನು ಕಂಡಾಕ್ಷಣ ಹೋದಜೀವ ಬಂದಂತಾಯಿತು.
ಮನೆಯೊಳಗಿದ್ದ ವಿಕಲಚೇತನ ರತೀಶ್ ಅವರನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ, ಎರಡು ಬಡಿಗೆಗಳನ್ನು ಕಟ್ಟಿ ಸುಮಾರು 6 ಕಿ.ಮೀ. ಹೆಗಲ ಮೇಲೆ ಹೊತ್ತುಕೊಂಡು ಬರಲಾಯಿತು. ರಸ್ತೆಯ ಮೇಲೆ ಕುಸಿದಿದ್ದ ಬರೆ, ಮಂಡಿಯವರೆಗೆ ಹೂತುಕೊಳ್ಳುವ ಕೆಸರಿನ ನಡುವೆ ಭಾರೀ ಸಾಹಸಪಟ್ಟು ಹಚ್ಚಿನಾಡುವರೆಗೆ ಕರೆತರಲಾಯಿತು.
ಈ ಸಂದರ್ಭ ಮಾತನಾಡಿದ ಪೊನ್ನಚೆಟ್ಟಿರ ಚೋಂದಮ್ಮ ಅವರು, ಕಳೆದ ಐದು ದಿನಗಳಿಂದ ನಾವು ಮೂವರೇ ಮನೆಯಲ್ಲಿದ್ದು, ಆಹಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಹೊರ ಪ್ರಪಂಚವನ್ನು ಕಾಣುತ್ತಿದ್ದೇವೆ ಎಂದರು. ಈ ಕುಟುಂಬವನ್ನು ರಕ್ಷಿಸಿ ಸೋಮವಾರಪೇಟೆಯ ಕೊಡವ ಸಮಾಜಕ್ಕೆ ಕರೆತಂದು ಉಪಚರಿಸಲಾಯಿತು.
ಭಾರೀ ದುರಂತಗಳಿಗೆ ಒಳಗಾಗಿರುವ ಹಚ್ಚಿನಾಡು, ಕಬ್ಬಣಿ, ಮುಕ್ಕೋಡ್ಲು ಗ್ರಾಮದ ಸುಮಾರು 43 ಮಂದಿ ಅಲ್ಲಿನ ವ್ಯಾಲಿ ಡ್ಯೂ ಹೋಂ ಸ್ಟೇನಲ್ಲಿ ತಂಗಿದ್ದರು. ಗ್ರಾಮದ ಸುತ್ತಲೂ ಬೆಟ್ಟಗಳು ಕುಸಿದಿದ್ದರಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದರು. ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಮೊಬೈಲ್‍ಗಳೂ ಸ್ವಿಚ್ ಆಫ್ ಆಗಿದ್ದವು. ಇಲ್ಲಿಗೆ ತಲಪಿದ ಮೂವತ್ತಕ್ಕೂ ಅಧಿಕ ಯುವಕರ ತಂಡ, ಅವರೆಲ್ಲರನ್ನೂ ಸೂರ್ಲಬ್ಬಿ ಮಾರ್ಗವಾಗಿ ಸುರಕ್ಷಿತವಾಗಿ ಕರೆತಂದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಮಾಜೀ ಅಧ್ಯಕ್ಷ ರವಿಕುಶಾಲಪ್ಪ, ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ ಅವರುಗಳು ಹಚ್ಚಿನಾಡುವರೆಗೆ ತೆರಳಿ ಕಾರ್ಯಾಚರಣೆಗೆ ಸಹಕರಿಸಿದರು.
ಮುಕ್ಕೋಡ್ಲು ಗ್ರಾಮ ಇದೀಗ ಜನರಿಲ್ಲದೇ ಬಣಗುಡುತ್ತಿದೆ. ಭಾರೀ ಗಾಳಿ ಮಳೆಗೆ ಸಿಲುಕಿ ಲಕ್ಷಾಂತರ ಹಾನಿ ಸಂಭವಿಸಿದೆ. ನಾಟಿ ಮಾಡಿದ್ದ ಗದ್ದೆಗಳು ಮುಚ್ಚಿಹೋಗಿದ್ದು, ಎರಡೂ ಬದಿಯ ಬೆಟ್ಟಗುಡ್ಡ ಕುಸಿಯುತ್ತಿದೆ. ಹೊಳೆಯಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮನೆಗಳು ಉಳಿಯುವದೇ ಸಂಶಯ ಎಂಬಂತಾಗಿದೆ. ರಸ್ತೆಗಳು ಮೊದಲಿನ ಸ್ಥಿತಿಗೆ ಬರಲಾರದಷ್ಟು ಹದಗೆಟ್ಟಿದೆ. ಕೆಲವೆಡೆ ರಸ್ತೆಗಳೇ ಕೊಚ್ಚಿಕೊಂಡು ಹೊಳೆಪಾಲಾಗಿದೆ.
ತೋಟಗಳಲ್ಲಿ ಕಾಫಿ, ಕರಿಮೆಣಸು ಉದುರಿವೆ. ಗ್ರಾಮದಲ್ಲೀಗ ಕೋಳಿ, ನಾಯಿ, ಜಾನುವಾರುಗಳು ಮಾತ್ರ ಉಳಿದಿವೆ. ಮನೆಬಿಟ್ಟು ಹೊರಬಂದಿರುವ ಮಂದಿ ಸೋಮವಾರಪೇಟೆಯ ಕೊಡವ ಸಮಾಜ ಮತ್ತು ಮಡಿಕೇರಿಯಲ್ಲಿ ಸದ್ಯಕ್ಕೆ ನೆಲೆಕಂಡುಕೊಂಡಿದ್ದಾರೆ. ಮುಕ್ಕೋಡ್ಲು ಗ್ರಾಮ ಮೊದಲಿನಂತಾಗಲು ಹಲವು ತಿಂಗಳುಗಳೇ ಬೇಕಾಗಬಹುದು ಎಂಬಂತಹ ಭೀಭತ್ಸ ದೃಶ್ಯ ಗೋಚರವಾಗಿದೆ.
-ಪ್ರತ್ಯಕ್ಷ ವರದಿ-ವಿಜಯ್ ಹಾನಗಲ್