ಸುಂಟಿಕೊಪ್ಪ, ಆ. 20: ಹೋಬಳಿ ವ್ಯಾಪ್ತಿಯಲ್ಲಿ ಆದ ಜಲಪ್ರಳಯದಿಂದ ತತ್ತರಿಸಿ ಇಲ್ಲಿನ ಪರಿಹಾರ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರನ್ನು ರಾಜ್ಯದ ಗೃಹ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರದ ಭರವಸೆಯನ್ನು ನೀಡಿದರು. ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎ.ವಸಂತ ಮತ್ತು ಸಂತ್ರಸ್ತರ ಮನವಿಯನ್ನು ಆಲಿಸಿದ ನಂತರ ಪ್ರತಿಕ್ರಿಯಿಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಸರರ್ಕಾರವು ಸಂತ್ರಸ್ತರ ಬದುಕಿಗೆ ತಾತ್ಕಾಲಿಕ ಪರಿಹಾರ ನೀಡಲಾಗುವದು. ಮಳೆಯು ನಿಂತ ಕೆಲವೇ ದಿನಗಳಲ್ಲಿ ಸಂತ್ರಸ್ತರು ಗುರುತಿಸಿದ ಮತ್ತು ಸರ್ಕಾರ ಗುರುತಿಸುವ ಜಾಗದಲ್ಲಿ ಮನೆ ಕಟ್ಟಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧಾರಕ್ಕೆ ಬಂದಿದ್ದು, ಆ ನಿಟ್ಟಿನಲ್ಲಿ ಕೆಲದಿನಗಳವರೆಗೆ ತಾವುಗಳು ತಾಳ್ಮೆಯಿಂದ ಇರಬೇಕು ಎಂದರು.
ಸರ್ಕಾರದಿಂದ ಯಾವದೇ ವಸ್ತುಗಳು ಸಂತ್ರಸ್ತರಿಗೆ ತಲುಪಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ, ಈಗಾಗಲೇ ಸರ್ಕಾರವು ಸಂತ್ರಸ್ತರಿಗೆ ಬೇಕಾದ ಎಲ್ಲ ವಸ್ತುಗಳನ್ನು ಕೊಡಗಿಗೆ ಕಳುಹಿಸಿಕೊಡಲಾಗಿದೆ ಎಂದಾಗ ಜನರು ಒಕ್ಕೊರಲಿನಿಂದ ಸರ್ಕಾರದಿಂದ ಯಾವದೇ ಪರಿಹಾರ ಇಲ್ಲಿಗೆ ಸಿಗಲಿಲ್ಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಇದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುವದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಐಜಿ ಭಾಸ್ಕರ ರಾವ್, ಎಸ್.ಪಿ. ಸುಮನ್ ಪಣಿಕ್ಕರ್, ಕಂದಾಯ ಪರಿವೀಕ್ಷಕ ಶಿವಪ್ಪ ಮತ್ತಿತರರು ಇದ್ದರು.
ಸಂತ್ರಸ್ತರಿಂದ ಪ್ರತಿಭಟನೆ
ಇಲ್ಲಿನ ಸಂತ ಮೇರಿ ಆಂಗ್ಲ ಮಾಧÀ್ಯಮ ಶಾಲೆಯಲ್ಲಿರುವ ಪರಿಹಾರ ಕೇಂದ್ರಕ್ಕೆ ಮಾತ್ರ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿ ಮಡಿಕೇರಿಗೆ ತೆರಳುತ್ತಿದ್ದಂತೆ ಮಾದಾಪುರ ರಸ್ತೆಯ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿರುವ ಪರಹಾರ ಕೇಂದ್ರ ಸಂತ್ರಸ್ತರು ಅಸಮಾಧಾನ ವ್ಯಕ್ತ ಪಡಿಸಿ ಪರಮೇಶ್ವರ್ ಅವರಿಗೆ ಧಿಕ್ಕಾರ ಕೂಗಿ ಇಲ್ಲಿಗೆ ಯಾಕೆ ಭೇಟಿ ನೀಡಲಿಲ್ಲ ಎಂದು ರಸ್ತೆ ತಡೆ ಮಾಡಿ ಪ್ರತಿಭಟಿಸಿದರು. ಕೂಡಲೇ ಕುಶಾಲನಗರ ವೃತ್ತ ನಿರೀಕ್ಷಕ ಕ್ಯಾತೇಗೌಡ ಮತ್ತು ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಪ್ರತಿಭಟನಾಕಾರರನ್ನು ಸಮಾಧಾನಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.