ಕರಿಕೆ, ಆ. 20: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆ ಪಿಲಾವು ಎಂಬಲ್ಲಿ ಹುಲಿಮನೆ ಮಾಧವ ಎಂಬವರ ಮನೆ ಹಿಂಭಾಗದ ಗುಡ್ಡ ಕುಸಿಯುತ್ತಿದ್ದು, ಅಪಾಯದ ಅಂಚಿನಲ್ಲಿದ್ದಾರೆ. ಸುಮಾರು ನೂರೈವತ್ತು ಅಡಿ ಎತ್ತರದ ಗುಡ್ಡದ ಒಂದು ಭಾಗ ಕುಸಿದಿದ್ದು ಎರಡು ಬೃಹತ್ ಬಂಡೆಗಳು ಉರುಳಿ ಬೀಳುವ ಸಾಧ್ಯತೆ ಇದೆ. ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಮನೆ ಬಿಟ್ಟು ತೆರಳುವಂತೆ ಮನವೊಲಿಸಿದ್ದು ಸುರಕ್ಷಿತವಾಗಿದ್ದಾರೆ.
ಇದಲ್ಲದೆ ಸಮೀಪದಲ್ಲಿ ಬರೂಕ ಜಲ ವಿದ್ಯುತ್ ಘಟಕದ ಪ್ರಸರಣ ಲೈನ್ ಹಾದುಹೋಗುತ್ತಿದ್ದು, ಬಂಡೆ ಉರುಳಿ ಬಿದ್ದಲ್ಲಿ ವಿದ್ಯುತ್ ಗೋಪುರ ಬಿದ್ದು ಇನ್ನಷ್ಟು ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಅಕ್ಕ ಪಕ್ಕದ ಮನೆಯವರು ‘ಶಕ್ತಿ’ಯೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ.
-ಸುಧೀರ್