ಮಡಿಕೇರಿ, ಆ. 20: ಸೋಮವಾರಪೇಟೆ ತಾಲೂಕಿನ ಗರ್ವಾಲೆ ಹಾಗೂ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ.ಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರಸ್ತೆ, ವಿದ್ಯುತ್, ಸಾರಿಗೆ, ಮೊಬೈಲ್ ಸಂಪರ್ಕ ಕಡಿತಗೊಂಡು, ಅಪಾರ ಆಸ್ತಿ-ಪಾಸ್ತಿ ಮಳೆಯಿಂದ ಹಾನಿಯಾಗಿದೆ. ಬದಲಾಗಿ ದೇವರ ದಯೆಯಿಂದ ಪ್ರಾಣಾಪಾಯ ಸಂಭವಿಸಿಲ್ಲವೆಂದು ಉಭಯ ಪಂಚಾಯಿತಿ ಅಧ್ಯಕ್ಷರುಗಳಾದ ಸುಭಾಷ್ ಸೋಮಯ್ಯ ಹಾಗೂ ಕನ್ನಿಗÀಂಡ ಸುಭಾಷ್ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ನಾಡಿನ ಜನತೆ ಕಿವಿಗೊಡದಂತೆ ಸಲಹೆ ನೀಡಿದ್ದಾರೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ಕನ್ನಿಗಂಡ ಸುಭಾಷ್, ಮಾದಾಪುರದಿಂದ ಗರ್ವಾಲೆ-ಸೂರ್ಲಬ್ಬಿ ಮಾರ್ಗ ಸೇರಿದಂತೆ, ತಾಕೇರಿ, ಹರಗ ಮುಖಾಂತರವೂ ಸಂಪರ್ಕ ಸಾಧ್ಯವಿಲ್ಲದೆ ಗರ್ವಾಲೆ ಜನತೆ ಬಹುತೇಕ ಅಪಪ್ರಚಾರದ ಭಯದಿಂದ ಊರು ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಘ-ಸಂಸ್ಥೆಗಳು ನೇರವಾಗಿ ಗ್ರಾಮಸ್ಥರಿಗೆ ನೆರವು ಪೂರೈಸುವಂತೆಯೂ ಆಗ್ರಹಿಸಿದ್ದಾರೆ.

ಸೀಮೆಎಣ್ಣೆ ಬೇಡಿಕೆ : ಕಳೆದ 2 ತಿಂಗಳಿನಿಂದ ಗ್ರಾಮೀಣ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಸೌಲಭ್ಯವಿಲ್ಲದೆ ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದ್ದು, ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ ವ್ಯಾಪ್ತಿಯ ಜನತೆಗೆ ಹಾಗೂ ಗ್ರಾ. ಪಂ. ವ್ಯಾಪ್ತಿಯ ಇತರೆಡೆಗಳಲ್ಲಿ ವಿದ್ಯುತ್ ಸಂಪರ್ಕ ಕೊರತೆ ನೀಗಿಸಲು ಸೀಮೆಎಣ್ಣೆಯನ್ನು ತುರ್ತಾಗಿ ಪೂರೈಸಲು ಜಿಲ್ಲಾಡಳಿತ ಮತ್ತು ಸರಕಾರ ಮುಂದಾಗುವಂತೆ ಅವರು ಒತ್ತಾಯಿಸಿದ್ದಾರೆ.

ಅಪಪ್ರಚಾರಕ್ಕೆ ಆಕ್ರೋಶ: ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮುಕ್ಕೋಡ್ಲು, ಕಾಲೂರು, ಆವಂಡಿ, ಮುಂತಾದೆಡೆಗಳಲ್ಲಿ ಅಪಾಯಕ್ಕೆ ಸಿಲುಕಿದ ಕುಟುಂಬಗಳ ರಕ್ಷಣೆ ಮಾಡಲಾಗಿದ್ದು, ಕೆಲವರು ಮನೆಬಿಟ್ಟು ಬರಲು ನಿರಾಕರಿಸಿದ್ದಾಗಿ ತಿಳಿಸಿರುವ ಅಧ್ಯಕ್ಷ ಸುಭಾಷ್ ಸೋಮಯ್ಯ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದುವರೆಗೆ ಸೇನೆ, ಪೊಲೀಸ್ ಸಹಿತ ಇತರ ಯಾರೂ ತಲಪಲು ಆಗದಿರುವ ಕುಗ್ರಾಮಗಳಲ್ಲಿ ಸಿಲುಕಿಕೊಂಡಿದ್ದ ಕುಟುಂಬಗಳನ್ನು ಶಾಸಕ ಕೆ.ಜಿ. ಬೋಪಯ್ಯ ಹಾಗೂ ಇತರ ಪ್ರಮುಖರೊಡಗೂಡಿ ಗ್ರಾಮಸ್ಥರೇ ರಕ್ಷಿಸಿ ಮಡಿಕೇರಿಗೆ ಕರೆತರಲಾಗಿದೆ ಎಂದು ಗಾಳಿಬೀಡು ಗ್ರಾ.ಪಂ. ಅಧ್ಯಕ್ಷರು ವಿವರಿಸಿದ್ದಾರೆ.

ಸೀಮೆಎಣ್ಣೆ ಅಗತ್ಯ: ಕಳೆದ ಎರಡೂವರೆ ತಿಂಗಳ ಅವಧಿಯಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, ಗ್ರಾಮೀಣ ಜನತೆ ಕತ್ತಲೆಯಲ್ಲಿ ರಾತ್ರಿ ಕಳೆಯುತ್ತಿದ್ದು, ಸೀಮೆಎಣ್ಣೆಯೊಂದಿಗೆ ಅಗತ್ಯ ವಸ್ತುಗಳನ್ನು ಸಂಬಂಧಿಸಿದವರಿಗೆ ತಲಪಿಸಲು ಕ್ರಮಕೈಗೊಳ್ಳುವಂತೆಯೂ ಅವರು ಒತ್ತಾಯಿಸಿದ್ದಾರೆ.