ಸೋಮವಾರಪೇಟೆ, ಆ.15: ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಭಾರೀ ಮಳೆ ಇಂದು ತನ್ನ ಬಿರುಸು ಕಡಿಮೆ ಮಾಡಿಕೊಂಡಿದ್ದರೂ ಸಹ ತಾಲೂಕಿನಾದ್ಯಂತ ಹಾನಿ ಪ್ರಕರಣಗಳು ನಡೆದಿವೆ.
ಅಲ್ಲಲ್ಲಿ ಬರೆ, ರಸ್ತೆ, ಮನೆಗಳ ಕುಸಿತ, ಸೇತುವೆ ಮುಳುಗಡೆ ಘಟನೆಗಳು ವರದಿಯಾಗುತ್ತಲೇ ಇವೆ. ಪುಷ್ಪಗಿರಿ ತಪ್ಪಲಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಸೂರ್ಲಬ್ಬಿ ವ್ಯಾಪ್ತಿಯ ಶಿರಂಗಳ್ಳಿಯಲ್ಲಿ ಭಾರೀ ಭೂ ಕುಸಿತ ಉಂಟಾಗಿ ಸಂಪರ್ಕ ರಸ್ತೆ ಹಾನಿಗೀಡಾಗಿದೆ. ಲೋಕೋಪಯೋಗಿ ಇಲಾಖಾ ವ್ಯಾಪ್ತಿಗೆ ಒಳಪಡುವ ರಸ್ತೆಗಳು ಹೆಚ್ಚಿನ ಹಾನಿ ಸಂಭವಿಸಿದ್ದರೂ, ಪರಿಹಾರ ಕಾರ್ಯ ಸ್ಥಗಿತಗೊಂಡಿದೆ.
ವಿಶೇಷ ಪ್ಯಾಕೇಜ್ನ ಹಣ ಬಿಡುಗಡೆಗೆ ಆಗ್ರಹಿಸಿ ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರು ಕಾಮಗಾರಿ ಸ್ಥಗಿತ ಗೊಳಿಸಿ ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆ ಪರಿಹಾರ ಕಾರ್ಯ ವಿಳಂಬ ವಾಗುತ್ತಿದೆ. ಇಲಾಖೆಯ ಅಭಿಯಂತರರೇ ಸ್ವತಃ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಕೆಲಸ ಕಾರ್ಯಗಳು ಸೂಕ್ತ ಸಮಯಕ್ಕೆ ನಡೆಯದೇ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.
ಹರಗ ಗ್ರಾಮದಲ್ಲಿ ನಿನ್ನೆ ರಾತ್ರಿ 2 ಗಂಟೆಯ ಅವಧಿಯಲ್ಲಿ 4 ಇಂಚಿನಷ್ಟು ಮಳೆ ಸುರಿದಿದ್ದು, ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಶಿವಶೇಖರ್ ಅವರಿಗೆ ಸೇರಿದ ವಾಸದ ಮನೆ ಸಂಪೂರ್ಣ ನೆಲಕಚ್ಚಿದೆ. ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ.
ರಾತ್ರಿ ವೇಳೆ ಮನೆ ಬಿದ್ದಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ನೆರವಿಗೆ ಧಾವಿಸಿದ್ದು, ನೆಲಕಚ್ಚಿದ ಮನೆಗೆ ಟಾರ್ಪಲ್ ಹೊದಿಸಿ, ಶಿವಶೇಖರ್ ಅವರಿಗೆ ಪಕ್ಕದ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ತ್ರಿಶೂಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹರಗ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಮಳೆ ಹೀಗೇ ಮುಂದುವರೆದರೆ ಗಂಜಿ ಕೇಂದ್ರಗಳನ್ನು ತೆರೆಯಬೇಕಾಗುತ್ತದೆ ಎಂದು ಗ್ರಾಮಸ್ಥ ತ್ರಿಶೂಲ್ ಅಭಿಪ್ರಾಯಿಸಿದ್ದಾರೆ. ಈ ಭಾಗದಲ್ಲಿ ಅತೀವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದರೂ ತಾಲೂಕು ತಹಶೀಲ್ದಾರ್ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಇದುವರೆಗೆ ಭೇಟಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಕುಡಿಗಾಣ ಗ್ರಾಮ ಕಳೆದ ಒಂದು ವಾರದಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದು, ಸೇತುವೆಯ ಮೇಲೆ ನೀರಿನ ಹರಿವು ಇಂದೂ ಸಹ ಕಡಿಮೆಯಾಗಿಲ್ಲ. ಶಾಂತಳ್ಳಿ ಹೋಬಳಿಯ ಅಭಿಮಠ ಬಾಚಳ್ಳಿ ಗ್ರಾಮದಲ್ಲಿ ನಾಟಿ ಮಾಡಿದ್ದ ಗದ್ದೆಗಳು ಹೊಳೆಯಂತಾಗಿದ್ದು, ಪೈರು ಸಂಪೂರ್ಣ ಹಾನಿಗೀಡಾಗಿದೆ.
ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಕಮಲ ಮತ್ತು ದೇವಕಿ ಅವರುಗಳ ಮನೆ ಸನಿಹ ಬರೆ ಕುಸಿತ ಉಂಟಾಗಿದೆ. ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ರಮಣಿ ಅವರ ಮನೆಯ ಸಮೀಪ ಬರೆ ಕುಸಿತ ಉಂಟಾಗಿದ್ದು, ಮನೆ ಅಪಾಯದ ಅಂಚಿನಲ್ಲಿದೆ. ಇದರೊಂದಿಗೆ ಆಂಜನೇಯ ದೇವಾಲಯದ ಬಳಿಯಿರುವ ಮಲ್ಲಮ್ಮ ವೀರಭದ್ರಪ್ಪ ಅವರ ಮನೆಗೆ ನಿರ್ಮಿಸಿದ್ದ ತಡೆಗೋಡೆ ಅಂದಾಜು 50 ಅಡಿಗಳಷ್ಟು ಕುಸಿತಗೊಂಡಿದ್ದು, ಆರ್ಸಿಸಿ ಮನೆ ಅಪಾಯದ ಅಂಚಿನಲ್ಲಿದೆ. ತಡೆಗೋಡೆ ಕುಸಿತದಿಂದ ಸನಿಹದ ಮನೆಗಳಿಗೂ ಹಾನಿಯಾಗಿದೆ. ತಾಲೂಕಿನ ಹರದೂರು ಗ್ರಾ.ಪಂ. ವ್ಯಾಪ್ತಿಯ ಗರಗಂದೂರು ಹೊಳೆ ತುಂಬಿ ಹರಿಯುತ್ತಿದೆ. ಹೊಳೆಗೆ ಈ ಹಿಂದೆ ನಿರ್ಮಿಸಿದ್ದ ಹಳೆ ಸೇತುವೆ ಸಂಪೂರ್ಣ ಮುಚ್ಚಿಹೋಗಿದ್ದು, ಅಕ್ಕಪಕ್ಕದ ಮನೆ, ಕೃಷಿ ಜಮೀನಿಗೆ ನೀರು ನುಗ್ಗಿದೆ.
ವಿದ್ಯುತ್ ಇಲಾಖಾ ಸಿಬ್ಬಂದಿಗಳು ಬಿಡುವಿಲ್ಲದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನಿನ್ನೆ ಬೆಳಗ್ಗೆ ಐಗೂರಿನಲ್ಲಿ ಬಿದ್ದ ಬೃಹತ್ ಗಾತ್ರದ ಮರದಿಂದಾಗಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್ಫಾರ್ಮರ್ಗೆ ಹಾನಿಯಾಗಿತ್ತು. ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿದ ವಿದ್ಯುತ್ ಇಲಾಖಾ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಸಂಜೆಯ ವೇಳೆಗೆ ಬದಲಿ ಕಂಡ, ತಂತಿಗಳನ್ನು ಅಳವಡಿಸಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಭಾರೀ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ದುಸ್ಥಿತಿಗೆ ತಲಪಿವೆ. ಸೂಕ್ತ ಚರಂಡಿ ನಿರ್ವಹಣೆಯಿಲ್ಲದೇ ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದ್ದು, ವಾಹನಗಳಿರಲಿ ಜನಸಂಚಾರಕ್ಕೂ ಅಯೋಗ್ಯವಾಗಿ ಪರಿಣಮಿಸಿವೆ.
ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ನಡ್ಲಕೊಪ್ಪ ಗ್ರಾಮದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಭಾರೀ ಮಳೆ ನೀರು ರಸ್ತೆ, ಕೃಷಿ ಜಮೀನಿನಲ್ಲಿಯೇ ಹರಿಯುತ್ತಿರುವದರಿಂದ ಈ ಭಾಗದ ಕೃಷಿಕರು ಭಾರೀ ನಷ್ಟಕ್ಕೊಳಗಾಗಿದ್ದಾರೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸೇತುವೆ ಇಲ್ಲದ್ದರಿಂದ ಜನತೆ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸೇತುವೆ ನಿರ್ಮಿಸಲು ಕ್ರಮ ವಹಿಸಬೇಕೆಂದು ರಾಜಪ್ಪ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.
ಕುಮಾರಳ್ಳಿ ಗ್ರಾಮದ ಹೆಚ್.ಬಿ. ಪೊನ್ನಪ್ಪ ಹಾಗೂ ತೋಳೂರುಶೆಟ್ಟಳ್ಳಿ ಗ್ರಾಮದ ವೆಂಕಟೇಶ್ ಅವರುಗಳಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿತಗೊಂಡಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.