ಶ್ರೀಮಂಗಲ, ಆ. 15: ದ.ಕೊಡಗಿನ ಘಟ್ಟಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ತತ್ತರಿಸಿದ ಜನಜೀವನ, ಬುಧವಾರ ತಗ್ಗಿರುವ ಮಳೆಯ ಅಬ್ಬರದಿಂದ ಸ್ವಲ್ಪ ನಿಟ್ಟಿಸಿರು ಬಿಡುವಂತೆ ಆಗಿತ್ತು. ಆದರೂ ಮಳೆಯ ಆತಂಕ ಇನ್ನೂ ಮುಂದುವರೆದಿದೆ.

ಈ ವ್ಯಾಪ್ತಿಯಲ್ಲಿ ಹಲವು ದಿನದಿಂದ ಗೋಚರಿಸದ ಸೂರ್ಯ ಬುಧವಾರ ಗೋಚರಿಸಿತು. ಬಿರುನಾಣಿ- ಪರಕಟಕೇರಿ ಮುಖ್ಯ ರಸ್ತೆ ನಡುವೆ ಭೂಕುಸಿತದಿಂದ ಕಡಿತವಾಗಿದ್ದ ರಸ್ತೆ ಸಂಪರ್ಕವನ್ನು, ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ಕಾನೂರು ಮೂಲಕ ಪೊನ್ನಂಪೇಟೆ-ಕುಟ್ಟ ರಾಜ್ಯ ಹೆದ್ದಾರಿ ಮೂಲಕ ಲಕ್ಷ್ಮಣ ತೀರ್ಥ ನದಿಯ ಸೇತುವೆ (ಕಾನೂರು ಸೇತುವೆ) ಒಂದು ಭಾಗದಲ್ಲಿ ಕುಸಿತವಾಗಿದ್ದು, ಸಂಚಾರಕ್ಕೆ ಅಪಾಯ ಎದುರಾಗಿದೆ. ಈ ಹಿಂದೆಯೂ ಇದೇ ಸೇತುವೆ ಹಾನಿಯಾಗಿತ್ತು. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ನಾಲ್ಕೇರಿ-ಕಾನೂರು-ನಿಟ್ಟೂರು, ಬಲ್ಯಮುಂಡೂರು-ಕೊಟ್ಟಗೇರಿ-ಮಲ್ಲೂರು ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿದೆ. ಇದರಲ್ಲಿ ಬಹಳಷ್ಟು ನಾಟಿ ಮಾಡಿದ ಗದ್ದೆಗಳು ಸೇರಿವೆ.

ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಭತ್ತದ ಗದ್ದೆಗಳ ಎರಡು ಬದಿಯಲ್ಲಿ ಮಳೆಯಿಂದ ಭೂಕುಸಿತದಿಂದ ದೊಡ್ಡ ತೋಡುಗಳು ಮುಚ್ಚಲ್ಪಟ್ಟು ತೋಡಿನ ಏರಿ ಒಡೆದು ತೋಡು ನೀರು ನೂರಾರು ಎಕರೆ ಭತ್ತದ ಗದ್ದೆಗೆ ನುಗ್ಗಿದ್ದು, ನಾಟಿ ಮಾಡಿದ್ದ ಭತ್ತದ ಗದ್ದೆಗಳಿಗೆ ಬಾರೀ ಹಾನಿಯಾಗಿದೆ. ತೋಡಿನ ನೀರು ನಾಟಿ ಮಾಡಿದ್ದ ಗದ್ದೆಯ ಮೇಲೆ ಹರಿಯುತ್ತಿದ್ದು, ನಾಟಿಗಳು ಕೊಚ್ಚಿ ಹೋಗಿದೆ. ಗದ್ದೆಯ ಏರಿಗಳು ಸಹ ಒಡೆದು ಹಾನಿಯಾಗಿದ್ದು, ನಾಟಿ ಮಾಡಬೇಕಾಗಿದ್ದ ಗದ್ದೆಗಳಲ್ಲಿಯೂ ನಾಟಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

-ಹರೀಶ್ ಮಾದಪ್ಪ