ಸೋಮವಾರಪೇಟೆ, ಆ.15: ವರುಣನ ರುದ್ರತಾಂಡವಕ್ಕೆ ರಾಜ್ಯ ಹೆದ್ದಾರಿಗಳೇ ಇಬ್ಭಾಗವಾಗಿವೆ. ಇದುವರೆಗೂ ರಸ್ತೆಯ ಬದಿಯಲ್ಲಿ ಬರೆ ಕುಸಿತಗಳು ಸಾಮಾನ್ಯವಾಗಿದ್ದು, ಇದೀಗ ರಸ್ತೆಗಳೇ ಕುಸಿಯುತ್ತಿವೆ. ಭಾರೀ ಮಳೆಯಿಂದ ಭೂಮಿಯ ತಳಭಾಗದಲ್ಲಿ ಜಲದ ಬುಗ್ಗೆಗಳು ಉಂಟಾಗಿದ್ದು, ರಸ್ತೆಗಳು ಇದ್ದಕ್ಕಿದ್ದಂತೆ ಕುಸಿಯುತ್ತಿವೆ. ಇದು ಭೂಕುಸಿತವೋ.. ಅಥವಾ ಭೂಕಂಪವೋ ಎಂಬಂತ ಸನ್ನಿವೇಶಗಳು ನಿರ್ಮಾಣವಾಗಿವೆ.
ಇದುವರೆಗೂ ಕಂಡರಿಯ ದಂತಹ ಭೂಕುಸಿತಗಳು ಪ್ರಸಕ್ತ ವರ್ಷ ಘಟಿಸುತ್ತಿದ್ದು, ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ ಹಟ್ಟಿಹೊಳೆ ಬಳಿ ಭಾರೀ ಪ್ರಮಾಣ ದಲ್ಲಿ ರಾಜ್ಯ ಹೆದ್ದಾರಿ ಕುಸಿದಿದೆ.
ಹಟ್ಟಿಹೊಳೆ ಸೇತುವೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ರಾಜ್ಯ ಹೆದ್ದಾರಿಯ ಸುಮಾರು 40 ಮೀಟರ್ ಉದ್ದದ ರಸ್ತೆ 1 ಮೀಟರ್ ಆಳದವರೆಗೆ ಹಾಗೆಯೇ ಕುಸಿತಗೊಂಡಿದ್ದು,ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ರಸ್ತೆಯ ತಳಭಾಗದಲ್ಲಿ ಜಲದ ಸೆಲೆಯಿಂದ ನೀರು ಹರಿಯುತ್ತಿದ್ದು, ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ. ಸೋಮವಾರಪೇಟೆ, ಮಾದಾಪುರದಿಂದ ಮಡಿಕೇರಿಗೆ ತೆರಳುವ ವಾಹನಗಳು, ಮಾದಾಪುರ ಸಮೀಪದಿಂದ ಗರಗಂದೂರು, ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ ತಲಪುವಂತಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಉತ್ತರ ಕೊಡಗಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಸೇರಿದಂತೆ ನೆರೆಯ ಸಕಲೇಶಪುರ, ಹಾಸನ ಸಂಪರ್ಕಿಸಲು ಅತೀ ಅವಶ್ಯವಾಗಿದ್ದ ಹೆದ್ದಾರಿ ಕುಸಿತದಿಂದ ಜನರು ತೊಂದರೆಗೆ ಸಿಲುಕುವಂತಾಗಿದೆ.
ಇದರೊಂದಿಗೆ ಉತ್ತರ ಕೊಡಗಿನ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ ದಿನಂಪ್ರತಿ ತೆರಳುವ ಸಾವಿರಾರು ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದು, ಇದೀಗ ರಸ್ತೆ ಇಬ್ಭಾಗವಾಗಿರುವದರಿಂದ ಸೋಮವಾರಪೇಟೆ-ಮಾದಾಪುರ-ಸುಂಟಿಕೊಪ್ಪ, ಅಥವಾ ಸೋಮವಾರಪೇಟೆ-ಕುಶಾಲನಗರ-ಸುಂಟಿಕೊಪ್ಪ ರಸ್ತೆಯನ್ನು ಅವಲಂಬಿಸುವಂತಾಗಿದೆ.
ಹಟ್ಟಿಹೊಳೆಯಲ್ಲಿ ರಾಜ್ಯ ಹೆದ್ದಾರಿಯೇ ಕುಸಿತಗೊಂಡಿರುವ ಪ್ರದೇಶಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೆ.ಎ. ಇಬ್ರಾಹಿಂ, ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಅಭಿಯಂತರ ಪೀಟರ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ಇನ್ನೂ ಕುಸಿತಗೊಳ್ಳುವ ಸಂಭವವಿದೆ. ನಾಳೆಯವರೆಗೂ ಕಾದು ನೋಡಲಾಗುವದು. ಒಂದು ವೇಳೆ ಇನ್ನಷ್ಟು ಕುಸಿದರೆ ಒಂದೆರಡು ದಿನ ಕಾಯಬೇಕಾಗುತ್ತದೆ. ಒಂದು ವೇಳೆ ಕುಸಿತ ಸಂಭವಿಸದಿದ್ದರೆ ನಾಳೆಯಿಂದಲೇ ಪರಿಹಾರ ಕಾರ್ಯ ಕೈಗೊಳ್ಳಲಾಗುವದು. ಸದ್ಯಕ್ಕೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕಾರ್ಯ ಪಾಲಕ ಅಭಿಯಂತರ ಇಬ್ರಾಹಿಂ ತಿಳಿಸಿದ್ದಾರೆ.
ಮಾದಾಪುರದಲ್ಲಿ ಬರೆ ಕುಸಿತ: ಮಾದಾಪುರ ಪಟ್ಟಣದ ವಿಎಸ್ಎಸ್ಎನ್ ಸಭಾಂಗಣದ ಸಮೀಪದಲ್ಲಿ ಭಾರೀ ಪ್ರಮಾಣದ ಬರೆ ಕುಸಿತ ಉಂಟಾಗಿದ್ದು, ಇಂದು ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ನಂತರ ಯಂತ್ರೋಪ ಕರಣಗಳನ್ನು ಬಳಸಿ ಮಣ್ಣನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸೋಮವಾರಪೇಟೆ-ಮಾಗೇರಿ ರಸ್ತೆ ಕುಸಿತ: ಸೋಮವಾರಪೇಟೆ-ಶಾಂತಳ್ಳಿ-ಕುಂದಳ್ಳಿ-ಮಾಗೇರಿ-ಸಕಲೇಶಪುರ ರಾಜ್ಯ ಹೆದ್ದಾರಿ ಇಂದು ನಸುಕಿನ ವೇಳೆಯಲ್ಲಿ ಕುಸಿಯಲ್ಪಟ್ಟಿದ್ದು, ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದೆ.
ಕೊಡಗು ಜಿಲ್ಲಾ ಗಡಿಯಿಂದ ಕೇವಲ 800ಮೀಟರ್ ದೂರದಲ್ಲಿ ರಸ್ತೆ ಕುಸಿದಿದ್ದು, ಸಕಲೇಶಪುರ ತಾಲೂಕಿನ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ತುರ್ತು ಪರಿಹಾರ ಕಾರ್ಯ ಕೈಗೊಳ್ಳುತ್ತಿದ್ದಾರೆ.
ಕುಂದಳ್ಳಿ-ಹಿಜ್ಜನಳ್ಳಿ-ಮಾಗೇರಿ- ಕೂಡುರಸ್ತೆ -ಸುಬ್ರಹ್ಮಣ್ಯ-ಸಕಲೇಶಪುರ ರಾಜ್ಯ ಹೆದ್ದಾರಿಯ ಕಲ್ಲಳ್ಳಿ ಎಂಬಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ರಸ್ತೆ ಕುಸಿತಗೊಂಡಿದೆ. ಸುಮಾರು 20 ಮೀಟರ್ ದೂರಕ್ಕೆ ಅಲ್ಲಲ್ಲಿ ರಸ್ತೆ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು.
ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ತಲ್ತರೆ ಗ್ರಾಮದ ಮಲ್ಲಿಗೆ ಎಂಬವರು ತಮ್ಮ ಪಿಕಪ್ನಲ್ಲಿ ಕುಂದಳ್ಳಿ ಕಡೆಗೆ ಆಗಮಿಸುತ್ತಿದ್ದ ಸಂದರ್ಭ ರಸ್ತೆ ಕುಸಿತಗೊಂಡು ಪಿಕ್ಅಪ್ ಸಿಲುಕಿಕೊಂಡಿದೆ. ಇಂದು ಬೆಳಿಗ್ಗೆ ಇತರ ವಾಹನಗಳ ಸಹಾಯದಿಂದ ಪಿಕ್ಅಪ್ನ್ನು ಹೊರಗೆಳೆಯಲಾಗಿದೆ.