ಸಿದ್ದಾಪುರ: ಸಿದ್ದಾಪುರದಲ್ಲಿ ಕಾವೇರಿ ನದಿಯಲ್ಲಿ ಪ್ರವಾಹದ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕರಡಿಗೋಡು ಗ್ರಾಮದ ನದಿ ದಡದ 22 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು ಅಪಾಯ ದಲ್ಲಿರುವ ಕುಟುಂಬಗಳನ್ನು ಸ್ಥಳೀಯ ಸರಕಾರಿ ಶಾಲೆಯಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.. ಕರಡಿಗೋಡುವಿನ ಬಳಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನಲೆಯಲ್ಲಿ ಇಳಿಜಾರಿನಲ್ಲಿರುವ ಮನೆಗಳು ದ್ವೀಪದಂತಾಗಿವೆ. ನದಿದಡದ ಹಲವು ಮನೆಗಳ ಬಳಿ ಶೇಖರಿಸಿಟ್ಟಿದ್ದ ಸೌದೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ನದಿದಡದ ನಿವಾಸಿಗಳು ಆತಂಕಕ್ಕೆ ಸಿಲುಕಿದ್ದಾರೆ. ಅಪಾಯದಲ್ಲಿದ್ದ ನದಿ ದಡದ 13 ಕುಟುಂಬ ಗಂಜಿಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು ಇವರಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜ್ ಅವರ ಮಾರ್ಗದರ್ಶನದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು, ಗ್ರಾಮಲೆಕ್ಕಿಗರಾದ ಅನಿಲ್ ಕುಮಾರ್, ಮಂಜುನಾಥ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಹೊದಿಕೆ ಹಾಗೂ ಕಂಬಳಿಗಳನ್ನು ವಿತರಣೆ ಮಾಡಿದರು.
ಪ್ರವಾಹದ ನೀರು ಏರಿಕೆಯಾದ ಹಿನ್ನಲೆಯಲ್ಲಿ ಸಿದ್ದಾಪುರ ಕರಡಿಗೋಡು ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಸಂಪರ್ಕ ಕಡಿದುಕೊಂಡಿದೆ. ಕರಡಿಗೊಡುವಿನ ಹೊಸಗದ್ದೆ ಬಳಿ ವಾಸಿಸುತ್ತಿತ್ತಿರುವ ಮನೆಗಳು ಜಲಾವೃತಗೊಂಡಿದ್ದು ಚಿಕ್ಕನಳ್ಳಿ ಭಾಗದ ಕಾಫಿ ತೋಟಗಳು ಕೂಡ ನೀರಿನಲ್ಲಿ ಮುಳುಗಿದೆ. ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಕೆಲವರಿಗೆ ಜ್ವರ ಇದ್ದ ಹಿನ್ನಲೆಯಲ್ಲಿ ಮಾಲ್ದಾರೆಯ ವೈದ್ಯರಾದ ಡಾ. ಶಿವಾರಂಜಿ ಹಾಗೂ ವೈದ್ಯ ನಿರೀಕ್ಷಕ ಸುದರ್ಶನ್ ತಪಾಸಣೆ ನಡೆಸಿದರು. ಸಿದ್ದಾಪುರ ಕೂಡುಗದ್ದೆ ರಸ್ತೆ ಜಲಾವೃತಗೊಂಡಿದ್ದು ಸಂಪರ್ಕ ಕಡಿದುಕೊಂಡಿದೆ. ಸಿದ್ದಾಪುರದ ಸೇತುವೆ ಬಳಿಯಿರುವ ಸಿ.ಕೆ ಪೂವಯ್ಯ ಅವರಿಗೆ ಸೇರಿದ ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಜಲಾವೃತ ಗೊಂಡಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಪ್ರವಾಹಪೀಡಿತ ಪ್ರದೇಶಕ್ಕೆ ತಹಶೀಲ್ದಾರ್ ಗೋವಿಂದರಾಜ್ ಬೇಟಿ ನೀಡಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿರುವದಾಗಿ ತಿಳಿಸಿದರು. ಗಾಳಿ ಮಳೆಗೆ ಸಿಲುಕಿ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಕಕ್ಕಟ್ಟುಕಾಡು ನಿವಾಸಿ ತಂಗಮ್ಮ ಎಂಬುವವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಗುಹ್ಯ ಗ್ರಾಮದ ಸುತ್ತಮುತ್ತಲು ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಜಲಾವೃತ ಗೊಂಡಿದ್ದು ಗ್ರಾಮಸ್ಥರು ಪರದಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಅಪಾಯ ದಲ್ಲಿದ್ದ 3 ಕುಟುಂಬಗಳನ್ನು ಸ್ಥಳೀಯ ಅಂಗನವಾಡಿಯ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳದಲ್ಲಿ ಗ್ರಾಮಲೆಕ್ಕಿಗ ಅನೂಷ, ಪಿಡಿಓ ನಂಜುಂಡ ಸ್ವಾಮಿಯವರು ಹಾಜರಿದ್ದು ಅಗತ್ಯ ಕ್ರಮಕೈಗೊಂಡಿದ್ದಾರೆ.
-ವಾಸು ಸಿದ್ದಾಪುರ