ಕುಶಾಲನಗರ, ಆ. 14: ಸ್ಥಳೀಯ ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ ರು 19.61 ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಶಾಂತಾ ಶ್ರೀಪತಿ ತಿಳಿಸಿದರು. ಕುಶಾಲನಗರ ಎಪಿಸಿಎಂಸ್ ಸುವರ್ಣಮಹೋತ್ಸವ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಸಂಘ 901 ಸದಸ್ಯರನ್ನು ಹೊಂದಿದ್ದು ರೂ. 46 ಲಕ್ಷದ 13 ಸಾವಿರ ಪಾಲು ಬಂಡವಾಳ ಇದೆ. ರೂ. 2 ಕೋಟಿ 17 ಲಕ್ಷದ 17 ಸಾವಿರದ 546 ಠೇವಣಿ ಸಂಗ್ರಹಿಸಲಾಗಿದೆ. ಒಟ್ಟು ರೂ. 5 ಕೋಟಿ 80 ಲಕ್ಷದ 37 ಸಾವಿರದ 576 ರೂಪಾಯಿ ಸಾಲ ನೀಡಲಾಗಿದೆ. ಶೇ.100ರಷ್ಟು ಸಾಲ ವಸೂಲಾತಿ ಆಗಿದೆ ಎಂದು ಮಾಹಿತಿ ನೀಡಿದರು. ಸಂಘದ ಲಾಭದ ಪ್ರಮಾಣ ಈ ಬಾರಿ ರು 19 ಲಕ್ಷದ 61 ಸಾವಿರದ 453 ರೂಪಾಯಿಗಳಾಗಿದ್ದು, ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದರು.
ಸಂಘಕ್ಕೆ ಸ್ವಂತ ನಿವೇಶನ ಖರೀದಿಸಲಾಗಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಚಿಂತನೆ ಹರಿಸಲಾಗಿದೆ ಎಂದರು.
ಚೀಟಿ ವ್ಯವಹಾರ, ಸಾಲಕ್ಕೆ ಡಿವಿಡೆಂಟ್ ಹಣ ಹೊಂದಾಣಿಕೆ, ಸಾಲದ ಭದ್ರತೆ ವಿಷಯ ಸೇರಿ ಪ್ರಮುಖ ವಿಷಯಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿದರು.
ಉಪಾಧ್ಯಕ್ಷೆ ಕವಿತಾ ಜಯಂತ್, ಸಂಘದ ನಿರ್ದೇಶಕರು, ಕಾನೂನು ಸಲಹೆಗಾರ ಟಿ.ಎಸ್. ನೇಮಿರಾಜ್, ವ್ಯವಸ್ಥಾಪಕಿ ಜೆ. ನಳಿನಿ ಇದ್ದರು.