ಕುಶಾಲನಗರ, ಆ. 14: ಸೋಮವಾರಪೇಟೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ತಾಯಿ ಹಾಲಿನ ಶ್ರೇಷ್ಟತೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು. ಶಿಶುವಿಗೆ ಸ್ತನ್ಯಪಾನ ಮೂಲಕ ಹಲವು ರೋಗಗಳಿಂದ ದೂರವಿಡಬಹುದು. ತಾಯಿ ಎದೆ ಹಾಲು ಸಮರ್ಪಕವಾಗಿ ದೊರೆಯದೆ ಶಿಶುಗಳು ಮರಣ ಹೊಂದುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಆದ್ದರಿಂದ ಯಾವದೇ ರೀತಿಯ ಅಪನಂಬಿಕೆಗಳಿಗೆ ಒಳಗಾಗದೆ ಮಗುವಿನ ಆರೋಗ್ಯ ವೃದ್ಧಿಗೆ ತಾಯಿಯ ಎದೆ ಹಾಲನ್ನು ಕಡ್ಡಾಯವಾಗಿ ಮೊದಲ 6 ತಿಂಗಳ ಕಾಲ ನೀಡಬೇಕಿದೆ ಎಂದರು.

ಆರೋಗ್ಯ ಶಿಕ್ಷಣ ಅಧಿಕಾರಿ ಹೆಚ್.ಕೆ. ಶಾಂತಿ ಪ್ರಾಸ್ತಾವಿಕ ನುಡಿಗಳಾಡಿದರು. ಕೇಂದ್ರದ ವೈದ್ಯೆ ಡಾ. ಪ್ರತಿಭಾ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಸತೀಶ್, ಕೇಂದ್ರದ ಆರೋಗ್ಯ ಅಧೀಕ್ಷಕಿ ಅನಿತಾ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಇದ್ದರು.