ಮಡಿಕೇರಿ, ಆ. 14: ಕೊಡಗು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ವತಿಯಿಂದ ಮಡಿಕೇರಿಯ ಸಂತಜೋಸೆಫರ ಶಾಲಾ ಸಭಾಂಗಣದಲ್ಲಿ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಅವರು ಕಾರ್ಯಾಗಾರ ಉದ್ಘಾಟಿಸಿದರು.

ಕಾರ್ಯಾಗಾರದಲ್ಲಿ ಹೊಸ ಗ್ರಾಮೀಣ ಕ್ರೀಡಗಳ ಬಗ್ಗೆ ದೈಹಿಕ ಶಿಕ್ಷಕ ದೊಡ್ಡಣ್ಣ ಅವರು ಮಾತನಾಡಿದರು. ಈ ಸಂದರ್ಭ ಇವರು ಬರೆದ ಲಘೋರಿ ಆಟದ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಹಾಕಿ ಆಟದಲ್ಲಿ ಬದಲಾದ ನಿಯಮಗಳ ಬಗ್ಗೆ ಡ್ಯಾನಿ ಈರಪ್ಪ ಮತ್ತು ಪೂರ್ಣೇಶ್ ವಿಷಯ ಮಂಡಿಸಿದರೆ, ಸದಾಶಿವ ಪಲ್ಲೇದ್ ಅಥ್ಲೆಟಿಕ್ಸ್ ನಿಯಮದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿದ್ದು, ನಿವೃತ್ತರಾದ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಪಿ.ಎ. ಪ್ರವೀಣ್, ಉಪಾಧ್ಯಕ್ಷ ಮೊಣ್ಣಪ್ಪ, ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ರತಿ, ಸೋಮವಾರಪೇಟೆಯ ವೆಂಕಟೇಶ್, ಜಿಲ್ಲಾ ಪರಿವೀಕ್ಷಕ ಶ್ರೀನಿವಾಸ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಮಾನಂದ, ಮಡಿಕೇರಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗಯ್ಯಶೆಟ್ಟಿ, ಸೋಮವಾರಪೇಟೆಯ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು. ಡಿಡಿಪಿಐ ಮಂಜುಳಾ ಅವರು ಮಾತನಾಡಿ ಇಲಾಖೆಯ ಯೋಜನೆಗಳ ಬಗ್ಗೆ ತಿಳಿಸಿದರು. ಅಲೀಮ ಪ್ರಾರ್ಥಿಸಿ, ದೊಡ್ಡಣ್ಣ ಸ್ವಾಗತಿಸಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಭುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.