ಮಡಿಕೇರಿ, ಆ. 12: ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಕೆಆರ್‍ಎಸ್, ಮೆಟ್ಟೂರು ಅಣೆಕಟ್ಟುಗಳು ಭರ್ತಿಯಾಗಿ ಹೊರ ಜಿಲ್ಲೆಗಳ, ಹೊರ ರಾಜ್ಯದ ರೈತರು ನಾಗರಿಕರಿಗೆ ಭಾರೀ ಅನುಕೂಲ ಕಲ್ಪಿಸಿದೆ. ಆದರೆ ಮಲೆನಾಡು ಜಿಲ್ಲೆ ಕೊಡಗಿನ ಜನರ ಭವಿಷ್ಯವನ್ನೇ ನಾಶಗೊಳಿಸಿದೆ ಎನ್ನುವ ಅತ್ಯಂತ ದುಃಖ ಉದ್ವೇಗದ ಮಾತು ಜನರಿಂದ ಕೇಳಿ ಬಂದಿದೆ. ಅಸಹಾಯಕತೆ ಚಿಂತೆ ಮನೆ ಮಾಡಿದೆ.ಭಾಗಮಂಡಲದ ನಿವಾಸಿ ಕೆ.ಜೆ. ಭರತ್ ಅವರು ಇಂದು ‘ಶಕ್ತಿ’ಯೊಂದಿಗೆ ಮಾತನಾಡಿ, ಭಾಗಮಂಡಲ ಹೋಬಳಿಯ ನಿವಾಸಿಗಳು, ರೈತರು, ಬೆಳೆಗಾರರು ವಾರದ ಸಂತೆಗೂ ಕೂಡ ತೆರಳುತ್ತಿಲ್ಲ, ಪರ್ಸ್‍ನಲ್ಲಿ ಚಿಕ್ಕಾಸು ಕೂಡ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ಈ ವಿಭಾಗದ ಜನರು ತಮ್ಮ ನಿತ್ಯದ ಬದುಕು ಸವೆಸುವದೇ ಕಷ್ಟಸಾಧ್ಯವೆನಿಸಿದೆ. ಮಕ್ಕಳ ಭವಿಷ್ಯದ ಚಿಂತೆ ಆವರಿಸಿದೆ ಎಂದು ನೋವಿನ ನುಡಿಯಾಡಿದರು. ಈಗಾಗಲೇ ಭಾಗಮಂಡಲಕ್ಕೆ 5115 ಮಿ.ಮೀ. ಮಳೆಯಾಗಿದೆ ಕಳೆದ ಸಾಲಿನಲ್ಲಿ 2910 ಮಿ.ಮೀ. ಮಳೆಯಾಗಿದ್ದು, ಇದೀಗ ಶೇ. 50 ರಷ್ಟು ಅಧಿಕ ಮಳೆ ಸುರಿದಿದೆ. ಏಲಕ್ಕಿ ಬೆಳೆಯನ್ನು ಈ ಹಿಂದೆ ನಂಬಿದ್ದ ಜನರು ಇದರ ಬದಲಾವಣೆ ಬಯಸಿ ಕಾಫಿಯನ್ನು ಬೆಳೆಸಲು ಪ್ರಾರಂಭಿಸಿದರು. ಇದೀಗ ಕಾಫಿ ಫಸಲು ಸಂಪೂರ್ಣ ನೆಲಕಚ್ಚಿದ್ದು, ಎಲೆಗಳು ಹಳದಿ ವರ್ಣಕ್ಕೆ ತಿರುಗಿವೆ. ಕಾಫಿ ಗಿಡಗಳನ್ನು ಉಳಿಸಿಕೊಳ್ಳುವದೇ ತ್ರಾಸದಾಯಕವೆನಿಸಿದೆ ಎಂದು ಅಳಲು ತೋಡಿಕೊಂಡರು. ತಾತ ಮುತ್ತಾತಂದಿರ ಕಾಲದ ಹಳ್ಳಿಯಲ್ಲಿನ ಹಳೆಯ ನೆನಪುಗಳು ಮೂಡುತ್ತಿದ್ದು, ಜನರು ದಾರಿಕಾಣದಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾಗಮಂಡಲ ಹೋಬಳಿ ವಿಭಾಗದಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಿದ್ದು, ನಾಟಿ ಕೆಲಸಕ್ಕೆ ಇಳಿಯೋಣವೆಂದು ತೆರಳುವ ರೈತರಿಗೆ ದಿಢೀರಾಗಿ ತಮ್ಮ ಗದ್ದೆಗಳು ಮತ್ತೆ ಮತ್ತೆ ಜಲಾವೃತಗೊಳ್ಳುತ್ತಿರುವದರಿಂದ ನಾಟಿ ಕೆಲಸ ಪ್ರಾರಂಭಿಸಲು ಅಸಾಧ್ಯವೆನಿಸಿದೆ. ಬಹುತೇಕ ಈ ತಿಂಗಳ ಅಂತ್ಯದಲ್ಲಿ ಮಾತ್ರ ಮಳೆ ಕಡಿಮೆಯಾದರೆ ನಾಟಿ ಕೆಲಸವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ನಿನ್ನೆ ರಾತ್ರಿ ಭಾಗಮಂಡಲ ಸನಿಹದ ತಣ್ಣಿಮಾನಿಯಲ್ಲಿ ಕುದುಪಜೆ ಉತ್ತಯ್ಯ ಎಂಬವರಿಗೆ ಸೇರಿದ ದನದ ಕೊಟ್ಟಿಗೆ ಕುಸಿದು ಬಿದ್ದು, ಹಸುವೊಂದು ಸಾವಿಗೀಡಾಗಿದೆ ಇಂತಹ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ.

ಮಡಿಕೇರಿಯ ಸ್ಥಿತಿ ಯಾರಿಗೂ ಬೇಡ!

ಮಡಿಕೇರಿ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆ - ಗಾಳಿ ನಡುವೆ ಅತೀವ ಶೀತ ವಾತಾವರಣವಿದ್ದು, ವಯೋವೃದ್ಧರೂ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಮಡಿಕೇರಿ ನಗರದ ಮಹದೇವಪೇಟೆಯ ವರ್ತಕ ಹರೀಶ್‍ಕುಮಾರ್ ಅವರ ಅನಿಸಿಕೆಯಂತೆ ನಾವು ಎಂದಿನಂತೆ ಅಂಗಡಿಗೆ ಬರುತ್ತೇವೆ ಏಕೆಂದರೆ ಒಳಗಿನÀ ವಸ್ತುಗಳು ಬೂಷಣ ಹಿಡಿಯದಿರಲಿ

(ಮೊದಲ ಪುಟದಿಂದ) ಎನ್ನುವ ಉದ್ದೇಶ ಒಂದೆಡೆ, ಮತ್ತೊಂದೆಡೆ ಮನೆಯಲ್ಲಿ ಕುಳಿತು ಸಮಯ ವ್ಯರ್ಥಮಾಡುವದಕ್ಕಿಂತ ಅಂಗಡಿಗೆ ಬರುತ್ತಿದ್ದೇವೆ. ಕಳೆದೆರಡು ತಿಂಗಳಿನಿಂದ ಬೆರಳೆಣಿಕೆಯ ಗ್ರಾಹಕರು ಬಿಟ್ಟರೆ ಯಾವದೇ ವಹಿವಾಟು ನಡೆಯುತ್ತಿಲ್ಲವೆಂದು ಆತಂಕ ವ್ಯಕ್ತಪಡಿಸಿದರು. ಚೌಕ್‍ನ ವಸ್ತ್ರ ವ್ಯಾಪಾರಿ ಫಯಾಜ್ ಅವರು ನಾವು ಅಂಗಡಿಯೊಳಗಿರುವದಕ್ಕಿಂತ ಹೊರಗೆ ನಿಂತು ವಾಹನಗಳ ಸಂಚಾರ, ಜನಸಂಚಾರವನ್ನು ನೋಡುತ್ತಾ ಕಾಲ ಕಳೆಯುವಂತಾಗಿದೆ. ಏಕೆಂದರೆ ಒಳಗೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ ಎಂದು ತಮ್ಮ ಅನುಭವ ಹಂಚಿ ಕೊಂಡರು. ಮಡಿಕೇರಿಯ ಬೆಳೆಗಾರ ರಾದ ಮಂಡೀರ ದೇವಿಪೂಣಚ್ಚ ಅವರ ಅನಿಸಿಕೆಯಂತೆ ಈ ಬಾರಿ ಮಳೆ - ಗಾಳಿ ನಡುವೆ ತೋಟಕ್ಕೆ ತೆರಳುವದು ನಿಷ್ಪ್ರಯೋಜಕವೆನಿಸಿದೆ. ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ ತೋಟದಲ್ಲಿ ಯಾವ ಕೆಲಸವೂ ಸಾಗುತ್ತಿಲ್ಲ. ಅಲ್ಲಿಗೆ ತೆರಳಿದರೆ ನೆಲಕ್ಕೆ ಬಿದ್ದ ಕಾಫಿ, ಕೊಳೆತ ಕರಿಮೆಣಸು ದೃಶ್ಯವನ್ನಷ್ಟೇ ವೀಕ್ಷಿಸಬಹುದಾಗಿದೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಭಾರೀ ಮಳೆಯಿಂದಾಗಿ ಮಡಿಕೇರಿ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ವಿಭಾಗದಲ್ಲಿರುವ ಬಿ.ಪಿ. ವಸಂತ್ ಹಾಗೂ ಮೋಹನ್ ಎಂಬವರ ಮನೆ ಇಂದು ಕುಸಿದು ಬಿದ್ದಿದೆ. ಇಂತಹ ಪ್ರಕರಣಗಳು ನಗರದ ಅನೇಕ ಭಾಗಗಳಲ್ಲಿ ಸಂಭವಿಸಿದೆ.

ಈ ನಡುವೆಯೂ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಗೇನೂ ಕೊರತೆಯಿಲ್ಲ. ಮಳೆಯ ಆನಂದವನ್ನು ಅನುಭವಿಸಲೆಂದೇ ಬರುವವರಿದ್ದಾರೆ. ಬೆಂಗಳೂರಿನ ಯೋಗಾಸನದ ಶಿಕ್ಷಕಿ ಮಮತಾ ಎನ್ನುವವರು ಇಂದು ‘ಶಕ್ತಿ’ಯೊಂದಿಗೆ ಮಾತನಾಡಿ, ಮಳೆಗಾಲದ ಪ್ರವಾಸ ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು. ತಲಕಾವೇರಿ, ಚಿಕ್ಲಿಹೊಳೆ, ಹಾರಂಗಿ ಮೊದಲಾದೆಡೆ ಭೇಟಿ ಮಾಡಿ ತಮಗೆ ಹರ್ಷವುಂಟಾಗಿದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಪ್ರವಾಸಿಗರು ರಾಜಾಸೀಟು ಮೊದಲಾದೆಡೆ ಮಳೆಯಲ್ಲಿಯೇ ನೆನೆÀಯುತ್ತಾ ಆನಂದ ಅನುಭವಿಸುವದು ಮತ್ತೊಂದೆಡೆಯ ದೃಶ್ಯವಾಗಿದೆ.

ನಾಪೋಕ್ಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉದಯಶಂಕರ್ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟವನ್ನು ನೋಡಿದಾಗ ತಾನೂ ಒಬ್ಬ ಬೆಳೆಗಾರನಾಗಿ ಸಾಲ ವಸೂಲಾತಿ ಮಾಡುವ ಕ್ರಮಕ್ಕೆ ಮುಂದಾಗುವದು ಕೂಡ ಕಷ್ಟ ಸಾಧ್ಯವೆನಿಸಿದೆ. ಈ ಹಿಂದಿನ ವರ್ಷಗಳಲ್ಲಿ ಬೆಳೆಗಾರರು ಸಮರ್ಪಕವಾಗಿಯೇ ಸಾಲ ಮರು ಪಾವತಿ ಮಾಡಿದ್ದಾರೆ ಎಂಬದನ್ನು ಜ್ಞಾಪಿಸಿದರು.

‘ಶಕ್ತಿ’ಯೊಂದಿಗೆ ನೂರಾರು ಮಂದಿ ಇಂತಹದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಸಾಂಕೇತಿಕವಾಗಿ ಮಾತ್ರ ಕೆಲವರ ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

- ಚಿತ್ರಗಳು : ಸುನಿಲ್, ಗಾಯತ್ರಿ, ಲಕ್ಷ್ಮೀಶ್