ಮಡಿಕೇರಿ, ಆ. 12: ಭಾರತೀಯ ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆಯಂತೆ ತಾ. 13ರಂದು ಕೊಡಗು ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವ ಇರುವದರಿಂದ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ- ಕಾಲೇಜುಗಳಿಗೆ ತಾ. 13ರಂದು (ಇಂದು) ಜಿಲ್ಲಾಡಳಿತ ರಜೆ ಘೋಷಿಸಿದೆ. ಅಲ್ಲದೆ, ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಜಲಾಶಯಗಳು ತುಂಬಿದ್ದು, ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ನದಿ -ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ತಟದಲ್ಲಿ ವಾಸವಿರುವವರು ಸದಾ ಜಾಗೃತರಾಗಿರಬೇಕು.ಸಾರ್ವಜನಿಕರು, ಪ್ರವಾಸಿಗರು ಮರಗಳ ಕೆಳಗೆ ಮತ್ತು ಎತ್ತರವಾದ ಬರೆ ಇರುವ ಪ್ರದೇಶಗಳಲ್ಲಿ ವಾಹನಗಳನ್ನು ನಿಲುಗಡೆಗೊಳಿಸ ಬಾರದು ಮತ್ತು ನಿಲ್ಲಬಾರದು.

ನದಿ- ತೊರೆಗಳು ತುಂಬಿ ಸೇತುವೆ ಅಥವಾ ರಸ್ತೆಯ ಮೇಲೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದಾಗ ಕಾಲ್ನಡಿಗೆ ಅಥವಾ ವಾಹನಗಳ ಮೂಲಕ ದಾಟಲು ಪ್ರಯತ್ನಿಸಬಾರದು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸುರಕ್ಷತೆಯ ದೃಷ್ಟಿಯಿಂದ ನದಿ- ತೊರೆ, ಜಲಪಾತ ಮುಂತಾದವುಗಳ ಸಮೀಪ ತೆರಳದೆ ಸುರಕ್ಷಿತ ಸ್ಥಳದಲ್ಲಿ ನಿಂತು ವೀಕ್ಷಿಸಬೇಕು.

ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದ 24x7 ಕಾರ್ಯನಿರತ ಟೋಲ್ ಫ್ರೀ ಸಹಾಯವಾಣಿ (ಕಂಟ್ರೋಲ್ ರೂಂ) ಸಂಖ್ಯೆ : 08272-221077ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾಡಳಿತ ಕೋರಿದೆ.

35 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ

ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ಇಂದು ರಾತ್ರಿ ಕ್ರಸ್ಟ್ ಗೇಟ್‍ಗಳ ಮೂಲಕ 35000 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದ್ದು, ನದಿ ತಟದ ನಿವಾಸಿಗಳು ಜಾಗೃತರಾಗಿರುವಂತೆ ಹಾರಂಗಿ ಜಲಾಶಯ ಉಪವಿಭಾಗದ ಎಇಇ ಧರ್ಮರಾಜು ತಿಳಿಸಿದ್ದಾರೆ.