ಮಡಿಕೇರಿ, ಆ. 12: ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಮಂಗಳೂರು ರಸ್ತೆಯಲ್ಲಿ ಭೂಕುಸಿತದಿಂದ ಭಾರೀ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗಿರುವದನ್ನು ಮುಂದಿನ 15 ದಿನಗಳ ಒಳಗೆ ಸರಿಪಡಿಸಲಾಗುವದು ಎಂಬದಾಗಿ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯಪಾಲಕ ಅಭಿಯಂತರ ಗಣೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ. ಮಡಿಕೇರಿ ನಗರಸಭಾ ವ್ಯಾಪ್ತಿಯ 16ನೇ ವಾರ್ಡ್ಗೆ ಸಂಬಂಧಿಸಿದ ಪ್ರದೇಶದ ಮಾರ್ಗ ಕುಸಿದಿರುವ ಸ್ಥಳವನ್ನು ನಿನ್ನೆ ಖುದ್ದು ಪರಿಶೀಲಿಸಿದ ಅವರು ‘ಶಕ್ತಿ’ಯೊಂದಿಗೆ ಮೇಲಿನ ಭರವಸೆ ನೀಡಿದರು.ಪ್ರಸಕ್ತ ವರ್ಷದಲ್ಲಿ ಎಲ್ಲೆಡೆ ಈ ತಲೆಮಾರಿನ ಯಾರೊಬ್ಬರೂ ಕಂಡು ಕೇಳರಿಯದ ಮಳೆ ಸುರಿಯುತ್ತಿರುವ ಪರಿಣಾಮ, ಅಲ್ಲಲ್ಲಿ ಕೇಬಲ್ ಇತ್ಯಾದಿ ಅಳವಡಿಕೆ ಸಂದರ್ಭ ಅಗೆದಿರುವ ಹೊಂಡಗಳಲ್ಲಿ ನೀರು ಸೇರಿಕೊಂಡು ಭೂಮಿಯು ಸಡಿಲವಾಗಿ ಇಂತಹ ಅನಾಹುತಗಳು ಸಂಭವಿಸುವಂತಾಗಿದೆ ಎಂದು ಗಣೇಶ್ ಅಭಿಪ್ರಾಯಪಟ್ಟರು.
ಕೆಲಸ ಆರಂಭ : ನಿನ್ನೆ ತಾಂತ್ರಿಕವಾಗಿ ಎಲ್ಲವನ್ನು ಪರಿಶೀಲಿಸುವದರೊಂದಿಗೆ, ಭೂಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಕಾಡು ಕಡಿಯಲಾಗುತ್ತಿದೆ, ಇನ್ನು 15 ದಿನಗಳ ಒಳಗಾಗಿ ಕುಸಿದಿರುವ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಪಾಯ ಆಗದಂತೆ ಮರಳು ಮೂಟೆಗಳನ್ನು ತುಂಬಿಸಿ ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗುವದು ಎಂದು ಅವರು ಮಾಹಿತಿ ನೀಡಿದರು.
ಸುಮಾರು 50 ರಿಂದ 60 ಅಡಿ ಕೆಳಭಾಗದಿಂದ ಮರಳು ಚೀಲಗಳನ್ನು ಹಂತ ಹಂತವಾಗಿ ಅಳವಡಿಸಲಾಗುವದು ಎಂದ ಅವರು, ಪ್ರತಿ ಎರಡರಿಂದ ಮೂರು ಅಡಿಗೆ ಅಲ್ಲಲ್ಲಿ ಭೂಮಿಯೊಳಗೆ ಕಂಬಗಳನ್ನು ಅಳವಡಿಸಿ ಮತ್ತೆ ಭದ್ರಪಡಿಸುವ ಮೂಲಕ ಮರು ಅನಾಹುತ ಸಂಭವಿಸದಂತೆ ಎಚ್ಚರ ವಹಿಸಲು ಕಿರಿಯ ಅಧಿಕಾರಿಗಳಿಗೆ ಸಲಹೆ ನೀಡಿರುವದಾಗಿ ತಿಳಿಸಿದರು.
ಈ ಪ್ರದೇಶದಲ್ಲಿ ಬೃಹತ್ ಬಂಡೆಗಳೆರಡು ಭೂಕುಸಿದ ಸ್ಥಳದ ಕೆಳಹಂತದಲ್ಲಿ ತಡೆಯಾಗಿರುವ ಪರಿಣಾಮ, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಅವರು, ಆದಷ್ಟು ಬೇಗನೆ ಕೆಲಸ ಮುಗಿಸಿ ಹೆದ್ದಾರಿ ಸಂಚಾರಕ್ಕೆ ತೊಂದರೆ
(ಮೊದಲ ಪುಟದಿಂದ) ಆಗದಂತೆ ಕ್ರಮ ವಹಿಸಲಾಗುವದು ಎಂದರು.
ಮಳೆ ಬಳಿಕ ಕೆಲಸ : ಪ್ರಸಕ್ತ ತಾತ್ಕಾಲಿಕ ದುರಸ್ತಿ ಕೈಗೊಳ್ಳಲಾಗುವದು ಎಂದು ‘ಶಕ್ತಿ’ಯೊಂದಿಗೆ ಸ್ಪಷ್ಟಪಡಿಸಿದ ಹೆದ್ದಾರಿ ಅಧಿಕಾರಿ, ಮಳೆಗಾಲ ಮುಗಿಯುತ್ತಿದ್ದಂತೆ ಶಾಶ್ವತ ವ್ಯವಸ್ಥೆಯೊಂದಿಗೆ ಕೆಳ ಹಂತದಿಂದ ತಡೆಗೋಡೆ ಸಹಿತ ಕಾಮಗಾರಿ ನಿರ್ವಹಿಸಲಾಗುವದು ಎಂದು ಭರವಸೆ ನೀಡಿದರು.
ಆ ದಿಸೆಯಲ್ಲಿ ಸಾಕಷ್ಟು ಈ ಬಗ್ಗೆ ಪರಿಣತಿ ಹೊಂದಿರುವ ತಜ್ಞರುಗಳಾದ ಶ್ರೀನಿವಾಸ್ ಹಾಗೂ ದೇವಿಪ್ರಸಾದ್ ಎಂಬವರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದ ಗಣೇಶ್, ತಜ್ಞರುಗಳು ನೀಡುವ ಅಭಿಪ್ರಾಯದಂತೆ ಭವಿಷ್ಯದಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಿರುವದಾಗಿ ಸುಳಿವು ನೀಡಿದರು.
ಈ ಮಳೆ ಕಂಡಿಲ್ಲ: ‘ಶಕ್ತಿ’ಯೊಂದಿಗೆ ಮಂಗಳೂರು ಹೆದ್ದಾರಿ ಸಹಿತ ಕೇರಳದ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ದುರಂತ ಹಾಗೂ ಇತರೆಡೆಯ ಅನಾಹುತಗಳ ಬಗ್ಗೆ ಸ್ಮರಿಸಿಕೊಂಡ ಅಧಿಕಾರಿ, ತಾವು ಎಲ್ಲಿ ಸಮಸ್ಯೆ ಪರಿಶೀಲನೆಗೆ ತೆರಳಿದರೂ ಈ ವರ್ಷದ ಮಳೆ - ಗಾಳಿಯನ್ನು ಎಂದೂ ಕಂಡಿರಲಿಲ್ಲವೆಂದು ಅನೇಕ ಹಿರಿಯರು ಅಭಿಪ್ರಾಯಪಟ್ಟರೆಂದು ನೆನಪಿಸಿದರು.
ಈಗಿನ ಆಧುನಿಕ ತಂತ್ರಜ್ಞಾನದೊಂದಿಗೆ ದೇಶದೆಲ್ಲೆಡೆ ಹೆದ್ದಾರಿಗಳು, ಸೇತುವೆಯಂತಹ ಕಾಮಗಾರಿಗಳು ನಡೆಯುತ್ತಿದ್ದು, ಮುಖ್ಯವಾಗಿ ಆಯಾ ಭೌಗೋಳಿಕ ಹಿನ್ನೆಲೆ ಮತ್ತು ಸ್ಥಳೀಯ ಪ್ರದೇಶಗಳ ಹಿರಿಯರ ಅನುಭವಗಳನ್ನು ಗಣನೆಗೆ ತೆಗೆದುಕೊಂಡು ಕೆಲಸ ಕಾರ್ಯ ಕೈಗೊಳ್ಳಲಾಗುವದು ಎಂದರು. ಅಂತಹ ಕೆಲಸಗಳೂ ಈ ವರ್ಷದ ಮಳೆಯ ನಡುವೆ ವಿಫಲಗೊಂಡು ಹಲವೆಡೆ ಸೇತುವೆ ಮುಳುಗಡೆ ಹಾಗೂ ರಸ್ತೆ ಹಾನಿ ಸಂಭವಿಸುತ್ತಿರುವದಾಗಿ ಬೇಸರ ವ್ಯಕ್ತಪಡಿಸಿದರು. ಇನ್ನೋರ್ವ ಅಧೀಕ್ಷಕ ಅಭಿಯಂತರ ರಾಘವನ್ ಕೂಡ ಕಾರ್ಯಪಾಲಕ ಅಭಿಯಂತರರ ಮಾತಿಗೆ ದನಿಗೂಡಿಸುತ್ತಾ, ಭವಿಷ್ಯದಲ್ಲಿ ಹೊಸ ಸೇತುವೆಗಳ ನಿರ್ಮಾಣ ವೇಳೆ ಸಾಕಷ್ಟು ಎತ್ತರಿಸಲು ಯೋಚಿಸುತ್ತಿರುವದಾಗಿ ಅಭಿಪ್ರಾಯ ಹಂಚಿಕೊಂಡರು.