ಗೋಣಿಕೊಪ್ಪ ವರದಿ, ಆ. 11: ತಾ. 15 ರಂದು ಗೋಣಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಸೈಕ್ಲೋತಾನ್ ಹೆಸರಿನಲ್ಲಿ ರಾಷ್ಟ್ರಮಟ್ಟದ ಸೈಕಲ್ ರೇಸ್ ನಡೆಸಲಾಗುವದು ಎಂದು ಗೋಣಿಕೊಪ್ಪ ವಾಹನ ಚಾಲಕರ ಸಂಘದ ಅಧ್ಯಕ್ಷ ಚಿಯಕ್‍ಪೂವಂಡ ಬೋಪಣ್ಣ ತಿಳಿಸಿದ್ದಾರೆ.

5ನೇ ವರ್ಷದ ಸೈಕ್ಲೋತಾನ್ ರೇಸ್ 6 ವಿಭಾಗದಲ್ಲಿ ನಡೆಯಲಿದೆ. 10 ವರ್ಷದ ಒಳಗಿನ ಸ್ಪರ್ಧಿಗಳಿಗೆ 10 ಕಿ.ಮೀ., 14 ವಯೋಮಿತಿಯ ಒಳಗಿನವರಿಗೆ 20, 16 ವಯೋಮಿತಿ ಒಳಗಿನವರಿಗೆ 30, ಮುಕ್ತ ವಿಭಾಗಕ್ಕೆ 40, ಲೇಡೀಸ್ ಓಪನ್ ವಿಭಾಗಕ್ಕೆ 30 ಕಿ.ಮೀ. ದೂರದ ಸೈಕಲ್ ರೇಸ್ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಣಿಕೊಪ್ಪ ಕಾರು ನಿಲ್ದಾಣದಿಂದ ಅಂದು ಬೆಳಿಗ್ಗೆ 10 ಗಂಟೆಗೆ ರೇಸ್ ಆರಂಭಗೊಳ್ಳಲಿದೆ. ನಂತರ ಜ್ಯೂಸ್ ಫ್ಯಾಕ್ಟರಿ ರಸ್ತೆ ಮೂಲಕ ಪಡಿಕಲ್ ಜಂಕ್ಷನ್, ಕಳತ್ಮಾಡ್ ಸರ್ಕಾರಿ ಶಾಲೆ, ಹೊಸಕೋಟೆ ಜಂಕ್ಷನ್, ಬಿಳುಗುಂದ, ಹಾತೂರು, ಕುಂದ, ಕೈಮುಡ್ಕೆ, ಪೊನ್ನಂಪೇಟೆ ಮಾರ್ಗದಲ್ಲಿ ವಯೋಮಿತಿಗೆ ಅನುಗುಣವಾಗಿ ರೇಸ್ ನಡೆಯಲಿದೆ. ರಾಷ್ಟ್ರಮಟ್ಟದ ಸೈಕಲ್ ಪಟುಗಳು ಪಾಲ್ಗೊಳ್ಳಲಿದ್ದಾರೆ.

ಪಾಲ್ಗೊಳ್ಳುವವರು ವಯಸ್ಸಿನ ದೃಢೀಕರಣ ಪತ್ರ ಅಥವಾ ಆಧಾರ್ ಪ್ರತಿ ತರಬೇಕಾಗಿದೆ. ಸ್ಪರ್ಧೆಯ 2 ದಿನಕ್ಕೂ ಮುನ್ನ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9448158224, 9449476425 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಶರತ್‍ಕಾಂತ್, ಕಾರ್ಯದರ್ಶಿ ಕೃಷ್ಣೇಗೌಡ, ಸಹ ಕಾರ್ಯದರ್ಶಿ ರೇಣುಕುಮಾರ್, ಕಾರ್ಯಕ್ರಮ ಸಂಚಾಲಕ ಕೆ.ಎ. ಕಿರಣ್ ಉಪಸ್ಥಿತರಿದ್ದರು.