ಸೋಮವಾರಪೇಟೆ, ಆ. 11: ಸರ್ಕಾರದ ವಿವಿಧ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ರೈತರಿಗೆ ತಲುಪುವಂತೆ ಅಧಿಕಾರಿ ವರ್ಗ ನೋಡಿಕೊಳ್ಳಬೇಕು. ಕಾರ್ಯಕ್ರಮ ಗಳನ್ನು ಅನುಷ್ಠಾನಗೊಳಿಸುವ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಹೇಳಿದರು.
ಇಲ್ಲಿನ ಕೃಷಿ ಇಲಾಖೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಲಾಖೆಯ ಮೂಲಕ ವಿತರಣೆ ಮಾಡುತ್ತಿರುವ ಬಿತ್ತನೆ ಬೀಜದ ಬಗ್ಗೆ ಕೆಲವೆಡೆಗಳಲ್ಲಿ ದೂರು ಬಂದಿದ್ದು, ಅಧಿಕಾರಿಗಳು ಬಿತ್ತನೆ ಬೀಜದ ಗುಣಮಟ್ಟವನ್ನು ಪರಿಶೀಲಿಸಿ ರೈತರಿಗೆ ನೀಡಬೇಕು ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಗುರಿ ಇರಿಸಿಕೊಳ್ಳಲಾಗಿದ್ದು, ಇಲಾಖೆ ವತಿಯಿಂದ ಈಗಾಗಲೇ ರೈತರಿಗೆ 64 ಕ್ವಿಂಟಾಲ್ ಭತ್ತದ ಬೀಜ ಹಾಗೂ 70 ಕ್ವಿಂಟಾಲ್ ಹೈ ಬ್ರೀಡ್ ಭತ್ತದ ಬೀಜವನ್ನು ಸಹಾಯಧನದಲ್ಲಿ ವಿತರಿಸಲಾಗಿದೆ. 4100 ಹೆಕ್ಷೇರ್ ಭತ್ತದ ನಾಟಿ ಕಾರ್ಯ ಮುಗಿದಿದ್ದು, ಮಳೆ ಹೆಚ್ಚಾಗಿರುವದರಿಂದ ಭತ್ತದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂದರು.
4100 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯಕ್ಕೆ ಗುರಿ ಇರಿಸಿಕೊಳ್ಳಲಾಗಿದ್ದು, 1170 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ರೈತರಿಗೆ 140 ಕ್ವಿಂಟಾಲ್ ಬಿತ್ತನೆ ಬೀಜವನ್ನು ಸಹಾಯ ಧನದಲ್ಲಿ ನೀಡಲಾಗಿದೆ. ಉಳಿದಂತೆ ಕ್ಯಾನೆಗೆಡ್ಡೆ, ಕೆಸ ಮತ್ತು ಸಿಹಿ ಗೆಣಸಿನ ಕೃಷಿ ಚಟುವಟಿಕೆ ನಡೆಯುತ್ತಿದೆ ಎಂದರು.
ಮುಂಗಾರು ಮಳೆಗೆ ಕೆಲವೆಡೆಗಳಲ್ಲಿ ಭತ್ತದ ಪೈರು ಕೊಚ್ಚಿಹೋಗಿದ್ದು, ನಷ್ಟಕ್ಕೊಳಗಾದ ರೈತರಿಗೆ ಇಲಾಖೆಯಿಂದ ಉಚಿತ ವಾಗಿ ಬಿತ್ತನೆ ಬೀಜ ವಿತರಿಸ ಲಾಗುತ್ತಿದೆ. ತಾಲೂಕಿನ 6 ಹೋಬಳಿ ಗಳಲ್ಲಿ ಮಳೆಯಿಂದ ನಷ್ಟಕ್ಕೊಳಗಾದ 1105 ಭತ್ತದ ಕೃಷಿಕರು ಹಾಗೂ 890 ಮುಸುಕಿನ ಜೋಳ ಬೆಳೆಯುವ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಸ್ಥಳ ಪರಿಶೀಲಿಸುತ್ತಿರುವದಾಗಿ ತಿಳಿಸಿದರು. ಭತ್ತದ ಕೃಷಿಗೆ ಬೆಂಕಿ ರೋಗ ಹಾಗೂ ಕೀಟ ಬಾಧೆಗೊಳಗಾದಲ್ಲಿ ಇಲಾಖೆಯಿಂದ ಸಹಾಯಧನದಲ್ಲಿ ಬೆವಾಸ್ಟಿನ್ ಹಾಗೂ ಕ್ಲೊರೋಫೈರಿ ಪಾಸ್‍ಗಳನ್ನು ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ, ಸಾಮಾಜಿಕ ಆರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ, ಪಶು ಸಂಗೋಪನಾ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ಇಲಾಖೆಯ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಡಾ. ಮುಕುಂದ ಉಪಸ್ಥಿತರಿದ್ದರು. ಇದೇ ಸಂದರ್ಭ ಕೃಷಿ ಇಲಾಖೆಯಿಂದ ರೈತರಿಗೆ ಮಣ್ಣು ಆರೋಗ್ಯ ತಪಾಸಣಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.