ಮಡಿಕೇರಿ, ಆ. 11: ಸಿ.ಐ.ಟಿ.ಯು. ಸಂಘಟನೆಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರಕಾರಗಳ ನವ ಉದಾರೀಕರಣ ನೀತಿಯಿಂದಾಗಿ ಕಾರ್ಮಿಕರ ಹಾಗೂ ದುಡಿಯುವ ವರ್ಗದ ಜನರ ಬದುಕು ಅತಂತ್ರಗೊಳಗಾಗಿವೆ. ಇಂತಹ ನೀತಿ ಶೇ. 0.1 ರಷ್ಟು ಜನರಿಗೆ ಅದರಲ್ಲೂ ಬಂಡವಾಳ ಶಾಹಿಗಳು ಹಾಗೂ ಶ್ರೀಮಂತರಿಗೆ ಮಾತ್ರ ಉಪಯುಕ್ತವಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎಂ. ಮಹದೇವ್ ಈ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು.
ಬೆಲೆ ಏರಿಕೆ, ನಿರುದ್ಯೋಗ, ಕೃಷಿ ನೀತಿಗಳಿಂದಾಗಿ ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ಹೆಚ್ಚಾಗಿದೆ ಎಂದವರು ಆರೋಪಿಸಿದರು. ಸಂಘಟನೆಯ ಪ್ರಮುಖ ಪಿ.ಆರ್. ಭರತ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದರೂ ದುಡಿಯುವ ವರ್ಗಕ್ಕೆ ನೈಜ ಸ್ವಾತಂತ್ರ್ಯ ದೊರೆತಿಲ್ಲ. ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ತಾ. 14 ರ ಸಂಜೆ 6 ರಿಂದ ರಾತ್ರಿ 12 ಗಂಟೆ ತನಕ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್ ಮಾತನಾಡಿ, ಸೆ. 5 ರಂದು ದೆಹಲಿ ಚಲೋ ಪ್ರತಿಭಟನೆ ನಡೆಯಲಿದ್ದು, ಜಿಲ್ಲೆಯಿಂದ 500 ಮಂದಿ ಪಾಲ್ಗೊಳ್ಳಲಿರುವದಾಗಿ ತಿಳಿಸಿದರು. ಎನ್.ಡಿ. ಕುಟ್ಟಪ್ಪ ಸೇರಿದಂತೆ ಇತರ ಪದಾಧಿಕಾರಿಗಳು ಹಾಜರಿದ್ದರು.