ಭಾಗಮಂಡಲ, ಆ. 11: ಮಳೆಯ ರೌದ್ರಾವತಾರ ಕಡಿಮೆಯಾಗಿ ಕಾವೇರಿ ನದಿಯು ಶಾಂತಗೊಳ್ಳಲಿ ಎಂಬ ಉದ್ದೇಶದಿಂದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಶನಿವಾರ ಸಾಂಪ್ರದಾಯಿಕ ವಿಧಿವಿಧಾನ ಗಳೊಂದಿಗೆ ಆಚರಿಸಲಾಯಿತು. ತುಂಬಿ ಹರಿದು ಪ್ರವಾಹವಾಗಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಭಗಂಡೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 11.30 ಗಂಟೆಗೆ ವ್ಯವಸ್ಥಾಪನಾ ಸಮಿತಿ ಸದಸ್ಯರು ಮಹಾಪೂಜೆ ಸಲ್ಲಿಸಿದ ಬಳಿಕ
(ಮೊದಲ ಪುಟದಿಂದ) ಬಾಳೆದಿಂಡಿನ ಉತ್ಸವ ಮಂಟಪ ದೊಂದಿಗೆ ಕಾವೇರಿ ಮಾತೆಗೆ ವಸ್ತ್ರಾಭರಣ, ಕರಿಮಣಿ, ಬಿಚ್ಚೋಲೆ, ಸೀರೆ, ಬೆಳ್ಳಿತಟ್ಟೆ, ಬೆಳ್ಳಿತೊಟ್ಟಿಲು, ಬೆಳ್ಳಿಮಗು, ಬೆಳ್ಳಿಯ ತಟ್ಟೆಯಲ್ಲಿಟ್ಟು ಭಕ್ತವೃಂದದ ಸಮ್ಮುಖದಲ್ಲಿ ಪೂಜಿಸ ಲಾಯಿತು. ಚಂಡೆವಾದ್ಯದೊಂದಿಗೆ ಬಾಳೆದಿಂಡುಗಳಿಂದ ರಚಿಸಲಾದ ಪೊಲಿಂಕಾನ ಮಂಟಪವನ್ನು ಭಗಂಡೇಶ್ವರ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬಂದು ಮಂಗಳಾರತಿ ನಡೆಸಿದ ನಂತರ ತ್ರಿವೇಣಿ ಸಂಗಮದ ಬಳಿ ಸಾಂಪ್ರದಾಯಿಕ ಮೆರವಣಿU Éಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ನದಿ ನೀರಿನಲ್ಲಿ ಬಾಳೆದಿಂಡಿನ ಮಂಟಪವನ್ನು ತೇಲಿಬಿಡಲಾಯಿತು. ಬಹಳ ಹಿಂದಿನಿಂದ ಭಾಗಮಂಡಲ ದಲ್ಲಿ ಪೊಲಿಂಕಾನ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಹಿನ್ನೆಲೆಯೊಂದರ ಪ್ರಕಾರ ಮಹಿಳೆಯೊಬ್ಬರಿಗೆ ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಬೇಕಾಗಿ ಬಂದ ಸಂದರ್ಭ ನದಿಯಲ್ಲಿ ಪ್ರವಾಹ ವಿದ್ದು, ಜಲಾವೃತ ನದಿಗೆ ಬಾಗಿನ ಸಲ್ಲಿಸುವದಾಗಿ ಹರಕೆ ಹೊರುತ್ತಾಳೆ. ಬಳಿಕ ಪ್ರವಾಹ ಇಳಿಮುಖಗೊಂಡಿದ್ದು ತವರಿಗೆ ತೆರಳುವಂತಾಯಿತು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನದಿಗೆ ಬಾಗಿನ ಅರ್ಪಿಸುವ ಸಂಪ್ರದಾಯ ನಡೆಸಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ರೌದ್ರವತಾರಗೊಂಡ ನದಿ ಶಾಂತಗೊಂಡು ರೈತರ ಹಿತಕ್ಕಾಗಿ ಕೈಗೊಂಡ ಸಾಂಪ್ರದಾಯಿಕ ಕ್ರಮವನ್ನು ಹಿಂದಿನ ಕಾಲದಿಂದ ಉತ್ಸವವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಮತ್ತೊಂದು ಮೂಲದ ಪ್ರಕಾರ ಬಸುರಿ ಹೆಂಗಸಿಗೆ ಕಿತ್ತಳೆ ಹಣ್ಣು ತಿನ್ನುವ ಬಯಕೆಯಾಗಿ ನದಿಯ ಇನ್ನೊಂದು ದಡದಲ್ಲಿದ್ದ ಮಹಿಳೆ ಕಾವೇರಿ ನದಿಗೆ ಬಾಗಿನ ಅರ್ಪಿಸಿದಳು. ನದಿ ಇಬ್ಭಾಗವಾಗಿ ಮತ್ತೊಂದು ದಡಕ್ಕೆ ತೆರಳಲು ಅವಕಾಶವಾದಂತಹ ಸಂದರ್ಭವನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ವಿವಿಧ ಪೂಜಾ ಕಾರ್ಯಕ್ರಮ ಗಳೊಂದಿಗೆ ಈ ವರ್ಷವೂ ಪೊಲಿಂಕಾನ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಸದಸ್ಯರಾದ ಡಾ.ಎಸ್.ಎಂ. ಕಾವೇರಪ್ಪ, ನಿಡ್ಯಮಲೆ ಮೀನಾಕ್ಷಿ, ಅಣ್ಣಯ್ಯ, ರಮೇಶ್ ಕೆದಂಬಾಡಿ, ಸುಭಾಷ್, ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ, ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್‍ಕುಮಾರ್, ಗ್ರಾಮಸ್ಥರು ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮ ಅರ್ಚಕ ರವಿಭಟ್ ನೇತೃತ್ವದಲ್ಲಿ ನೆರವೇರಿತು.
-ಕುಯ್ಯಮುಡಿ ಸುನಿಲ್