ಮಡಿಕೇರಿ, ಆ.11: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯ ಮಹತ್ತರ ಯೋಜನೆಯಾದ ವಿಶ್ವ ದತ್ತಿನಿಧಿ ಮಂಜೂರಾತಿ ಪಡೆದು ಸಾಮಾಜಿಕ ಸೇವೆಗೆ ಸದುಪಯೋಗ ಗೊಳ್ಳುವಂತೆ ಮಾಡಲು ಜಿಲ್ಲಾ ರೋಟರಿ ಸಂಸ್ಥೆಗಳು ವಿಶೇಷ ಪರಿಶ್ರಮ ಪಡಬೇಕು ಎಂದು ರೋಟರಿ ಜಿಲ್ಲಾ 3181 ರ ರಾಜ್ಯಪಾಲ ರೋಹಿತ್‍ನಾಥ್ ಕರೆಯಿತ್ತರು. ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಸುಮಾರು ರೂ. 64 ಲಕ್ಷದ ನೂತನ ವೈದ್ಯಕೀಯ ಉಪಕರಣಗಳನ್ನು ಕುಶಾಲನಗರ ರೋಟರಿ ಸಂಸ್ಥೆಯ ಪ್ರಯತ್ನದಿಂದ ನೀಡಿ ನಿನ್ನೆ ದಿನ ಲೋಕಾರ್ಪಣೆ ಗೊಳಿಸಿದ ಸಂದರ್ಭದ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ಈ ಸಮಾರಂಭಕ್ಕೂ ಮುನ್ನ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಅಳವಡಿಸಲ್ಪಟ್ಟ ನೂತನ ಉಪಕರಣ ಗಳನ್ನು ಗಣ್ಯರು ಉದ್ಘಾಟಿಸಿದರು.ರೋಹಿತ್‍ನಾಥ್ ಅವರು ಮಾತನಾಡುತ್ತ ರೋಟರಿ ವಿಶ್ವ ದತ್ತಿನಿಧಿ ಮಂಜೂರಾತಿಯ ಸದ್ಬಳಕೆಯಾಗಲು ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆ ಅನೇಕ ಅತ್ಯಗತ್ಯ ಮಾನದಂಡವನ್ನು ಪಾಲಿಸಲೇಬೇಕು ಎಂಬದನ್ನು ಕಡ್ಡಾಯ ಮಾಡಿದೆ. ಬಳಕೆಯಲ್ಲಿ ಒಂದು ರೂ. ವ್ಯತ್ಯಾಸ ಬಂದರೂ ಮಂಜೂರಾತಿಯನ್ನು ತಡೆ ಹಿಡಿಯುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ರೋಟರಿ ಸಂಸ್ಥೆಗಳು ಪಾರದರ್ಶಕ ಮಾನದಂಡವನ್ನು ಕ್ರಮಬದ್ಧವಾಗಿ ಅನುಸರಿಸಿದರೆ ಖಂಡಿತವಾಗಿ ಸಾಮಾನ್ಯ ಜನರಿಗೆ ಪ್ರಯೋಜನವಾಗುವ ಉತ್ತಮ ಯೋಜನೆಗಳಿಗೆ ಅನುದಾನ ಲಭ್ಯವಾಗುತ್ತದೆ.

(ಮೊದಲ ಪುಟದಿಂದ) ಅಶ್ವಿನಿ ಆಸ್ಪತ್ರೆಗೆ ಈ ಯೋಜನೆ ಲಭ್ಯವಾಗಬೇಕಾದರೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೊಡಗಿನವರೇ ಆದ ಬಲ್ಲಚಂಡ ಅಪ್ಪಯ್ಯ ಅವರ ಪ್ರಯತ್ನ ನೆನಪಿಸಿಕೊಳ್ಳ್ಳುವಂತಹುದ್ದಾಗಿದೆ. ಅವರು 24 ರೋಟರಿ ಕ್ಲಬ್‍ಗಳು ಹಾಗೂ 9 ಮಂದಿ ಪ್ರಮುಖ ದಾನಿಗಳಿಂದಲೂ ಅನುದಾನ ಪಡೆದು ರೋಟರಿ ವಿಶ್ವದತ್ತಿ ನಿಧಿಯ ಅನುದಾನದ ಮೂಲಕ ಯಶಸ್ಸು ಸಾಧಿಸಿದ್ದಾರೆ ಎಂದು ನುಡಿದರು. ರೋಟರಿ ಸಂಸ್ಥೆಯ ಮುಖ್ಯ ಯೋಜನೆಯಾದ ಪೋಲಿಯೋ ನಿರ್ಮೂಲನೆ ಇನ್ನೂ ಪೂರ್ಣವಾಗಿ ನೆರವೇರಿಲ್ಲ. ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನಗಳಲ್ಲಿ ಇನ್ನೂ 12 ಪ್ರಕರಣಗಳಿವೆ. ಪೂರ್ಣ ನಿರ್ಮೂಲನೆವರೆಗೂ ಪ್ರಯತ್ನ ನಡೆಯುತ್ತದೆ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಮಾಜಿ ಜಿಲ್ಲ್ಲಾ ರಾಜ್ಯಪಾಲ ಸುರೇಶ್ ಚಂಗಪ್ಪ ಅವರು ಮಾತನಾಡಿ ಅಶ್ವಿನಿ ಆಸ್ಪತ್ರೆಗೆ ಉಪಕರಣಗಳ ಅಳವಡಿಕೆಯ ಕುಶಾಲನಗರ ರೋಟರಿಯ ಕನಸು ಇದೀಗ 3 ವರ್ಷಗಳ ಬಳಿಕ ನನಸಾಗಿದೆ. ಇದಕ್ಕೆಲ್ಲ ಪ್ರಯತ್ನದೊಂದಿಗೆ ದೇವರ ಅನುಗ್ರಹ ಅತ್ಯಗತ್ಯ ಎಂದು ವೈದ್ಯರೊಬ್ಬರ ಅನುಭವವನ್ನು ಹಂಚಿಕೊಂಡರು. ವೈದ್ಯರೊಬ್ಬರು ಬಾಲಕಿಯೊಬ್ಬಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ಆಕೆಯ ಮುಗ್ಧ ಮಾತನ್ನು ಆಕೆಯ ದೈವತ್ವದ ಕಲ್ಪನೆಯನ್ನು ಆಕೆಯ ಬಾಯಿಯಿಂದಲೇ ಕೇಳಿ ತಾವೂ ಗ್ರಹಿಸಿ ಆಕೆಗೆ ಶಸ್ತ್ರ ಚಿಕಿತ್ಸೆ ಸಂದರ್ಭ ಸಂದಿಗ್ಧತೆ ತಲೆದೋರಿ ಆಕೆ ಬದುಕುವದಿಲ್ಲ ಎನ್ನು ಸನ್ನಿವೇಶ ಒದಗಿದಾಗ ಬಾಲಕಿಯ ಮಾತನ್ನು ನೆನೆದು ತಾವೇ ದೇವರಿಗೆ ಮೊರೆ ಹೋಗಿ ಆಕೆಯ ಶಸ್ತ್ರಕ್ರಿಯೆ ಯಶಸ್ವಿಯಾಗಿ ಬಾಲಕಿ ಪ್ರಾಣಾಪಾಯದಿಂದ ಪಾರಾದ ಘಟನೆಯನ್ನು ವಿವರಿಸಿದರು.

ರೋಟರಿ ಮಾಜಿ ರಾಜ್ಯಪಾಲ ನಾಗಾರ್ಜುನ, ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್ ಮಾತನಾಡಿದರು. ಅಶ್ವಿನಿ ಸಂಸ್ಥೆ ಪರವಾಗಿ ಟ್ರಸ್ಟ್ ಸಮನ್ವಯ ಸಮಿತಿ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಮಾತನಾಡಿ ಕುಶಾಲನಗರ ರೋಟರಿ ಸಂಸ್ಥೆಯ ಅನುದಾನದ ಉತ್ತಮ ಆಶೋತ್ತರಗಳಿಗೆ ಸ್ಪÀಂದಿಸಿ ಅಶ್ವಿನಿ ಆಸ್ಪತ್ರೆ ಆಡಳಿತ ಮಂಡಳಿಯು ತನ್ನ ಸೇವಾ ಧೋರಣೆಯನ್ನು ಇನ್ನೂ ಹೆಚ್ಚು ವಿಸ್ತgಣೆಗೊಳಿಸುತ್ತದೆ ಎನ್ನುವ ವಿಶ್ವಾಸ ವ್ಯಕ್ತÀಪಡಿಸಿದರು. ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಜೇಕಬ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಟರಿ ಅನುದಾನಕ್ಕೆ ಪ್ರಯತ್ನಿಸಿದ ಎಲ್ಲ ಮಹನೀಯರುಗಳ ಸೇವೆಯನ್ನು ನೆನಪಿಸಿಕೊಂಡರು.

ರೋಟರಿ ಅನುದಾನಕ್ಕೆ ವಿಶೇಷ ಪ್ರಯತ್ನ ನಡೆಸಿದ ಕುಶಾಲನಗರ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎ. ಚಂಗಪ್ಪ ಅವರ ಸೇವೆಯನ್ನು ಪರಿಗಣಿಸಿ ಅತಿಥಿಗಳು ಸನ್ಮಾನಿಸಿದರು. ಕುಶಾಲನಗರ ರೋಟರಿ ಸಂಸ್ಥೆ ಪ್ರಮುಖರುಗಳಾದ ರಿಚರ್ಡ್ ದಿಸೋಜ, ಪ್ರೇಂ ಚಂದ್ರನ್, ಕ್ರೆಝ್‍ವೆಲ್ ಕೋಟ್ಸ್ ಉಪಸ್ಥಿತರಿದ್ದರು. ಡಾ. ಧರಣೀಂದ್ರ ಕಾರ್ಯಕ್ರಮ ನಿರೂಪಿಸಿದರು. ಗೀತಾ ಸಂಪತ್‍ಕುಮಾರ್ ಪ್ರಾರ್ಥಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ಎಸ್.ಎಸ್. ಸಂಪತ್‍ಕುಮಾರ್ ವಂದಿಸಿದರು.