ವೀರಾಜಪೇಟೆ, ಆ. 12: ಬಿಲ್ಲವ ಸೇವಾ ಸಂಘ ಸಮುದಾಯದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ ಬೆಳವಣಿಗೆ ಹೊಂದಲು ಸಾಧ್ಯ. ಇದಕ್ಕಾಗಿ ಬಿಲ್ಲವ ಸಮಾಜ ವರ್ಷಂಪ್ರತಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್‍ರಾಜ ಹೇಳಿದರು.
ವೀರಾಜಪೇಟೆ ಬಿಲ್ಲವ ಸಮಾಜದಿಂದ ಇಂದು ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಸಂಘದ ಸದಸ್ಯರುಗಳ ಪರಸ್ಪರ ಸಹಕಾರ, ಉತ್ತೇಜನ ಸಂಘದ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 80ಕ್ಕಿಂತಲೂ ಅಧಿಕ ಅಂಕ ಗಳಿಸಿದ 13 ಮಂದಿ ಹಾಗೂ ಪಿಯುಸಿಯಲ್ಲಿ 4 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಮೂರು ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ವಾರ್ಷಿಕ ಮಹಾಸಭೆಯಲ್ಲಿ ಬಿಲ್ಲವ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ. ಗಣೇಶ್ ಆಯ್ಕೆಯಾದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಖಜಾಂಚಿ ಬಿ.ಕೆ. ರಾಮಣ್ಣ, ಪದಾಧಿಕಾರಿಗಳಾದ ಪುರುಷೊತ್ತಮ, ಹರೀಶ್, ಭರತ್, ನಾರಾಯಣ, ಬಿ.ಎಸ್. ಸೋಮಪ್ಪ
ರೂಪಾ, ಕಿರಣ್, ಡಿ.ಕೆ. ರಮೇಶ್, ರಾಜಾ, ಅನಿತಾ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸಹ ಕಾರ್ಯದರ್ಶಿ ಬಿ.ಎಂ. ಸತೀಶ್ ಸ್ವಾಗತಿಸಿ ನಿರೂಪಿಸಿದರು. ಪವಿತ್ರಾ ಸುಂದರಿ ವಂದಿಸಿದರು.