ಕುಶಾಲನಗರ, ಆ. 11: ಕೊಡಗು ಜಿಲ್ಲೆಯಲ್ಲಿ ಆನೆ ಧಾಳಿ ಸೇರಿದಂತೆ ಮತ್ತಿತರ ತುರ್ತು ರಕ್ಷಣಾ ಕಾರ್ಯಗಳಿಗೆ ಅರಣ್ಯ ಇಲಾಖೆ ಯಿಂದ ನಿಯೋಜನೆಗೊಂಡ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಮತ್ತು ದಿನಗೂಲಿ ನೌಕರರಿಗೆ ಕಳೆದ 5 ತಿಂಗಳಿನಿಂದ ವೇತನ ಪಾವತಿಸದೆ ನೌಕರರು ಸಂಕಷ್ಟದಲ್ಲಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಾಡಿನಿಂದ ನಾಡಿಗೆ ಆನೆ ಧಾಳಿ ಮಾಡಿದ ಸಂದರ್ಭ ಕ್ಷಿಪ್ರ ಕಾರ್ಯಾಚರಣೆ ಮಾಡುವದು ಸೇರಿದಂತೆ ಅರಣ್ಯ ರಕ್ಷಣೆ, ಅರಣ್ಯ ಇಲಾಖೆಗೆ ಸೇರಿದ ಪ್ರವಾಸಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಅಂದಾಜು 120 ಕ್ಕೂ ಅಧಿಕ ಸಿಬ್ಬಂದಿಗಳು ಕಳೆದ ಕೆಲವು ತಿಂಗಳಿನಿಂದ ತಮ್ಮ ಕುಟುಂಬ ನಿರ್ವಹಣೆಗೆ ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ. ಪ್ರತಿ ತಿಂಗಳು ತಮ್ಮ ಬ್ಯಾಂಕ್ ಖಾತೆಗೆ ವೇತನ ಬರುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇತ್ತೀಚಿನ 5 ತಿಂಗಳಿನಿಂದ ತಮಗೆ ಸಂಬಳ ಸಿಗುತ್ತಿಲ್ಲ ಎನ್ನುತ್ತಾರೆ ದಿನಗೂಲಿ ಮತ್ತು ಆರ್‍ಆರ್‍ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರವಿ.

ಈ ಬಗ್ಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಲ್ಲಿ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ. ದಿನದ 24 ಗಂಟೆಗಳ ಕಾಲ ಕಾಡಿನ ರಕ್ಷಣೆಗೆ ಪಣತೊಟ್ಟು ಕೆಲಸ ಮಾಡುತ್ತಿರುವ ತಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗುತ್ತಿಗೆದಾರ ನೊಬ್ಬ ತಮಗೆ ವೇತನ ನೀಡುವ ಗುತ್ತಿಗೆ ಹೊತ್ತಿದ್ದು ನೀಡಬೇಕಾದ ಹಣದಲ್ಲಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿರುವ ಸಂಘದ ಕಾರ್ಯದರ್ಶಿ ಪ್ರವೀಣ್, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತಮಗೆ ಇತರ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕೂಡಲೆ ವೇತನಕ್ಕೆ ಸಂಬಂಧಿಸಿ ದಂತೆ ರೂ. 2 ಕೋಟಿಗಳನ್ನು ಬಿಡುಗಡೆ ಮಾಡಲಾಗುವದು ಎಂದು ಡಿಎಫ್‍ಓ ಮಂಜುನಾಥ್ ಅವರು ಭರವಸೆ ನೀಡಿದರೂ ಅದು ಕಾರ್ಯಗತವಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕುಶಾಲನಗರ ಕಾವೇರಿ ನಿಸರ್ಗಧಾಮ, ದುಬಾರೆ, ಇರ್ಪು ಫಾಲ್ಸ್ ಮತ್ತಿತರ ಪ್ರವಾಸಿ ಕೇಂದ್ರಗಳಲ್ಲಿ ಸಂಗ್ರಹವಾಗುವ ಕೋಟಿಗಟ್ಟಲೆ ಹಣ ಇಲಾಖೆಯ ಸುಪರ್ದಿಯಲ್ಲಿದ್ದರೂ ದಿನಗೂಲಿ ನೌಕರರು ಪರದಾಡುವ ಸ್ಥಿತಿ ಎದುರಾಗಿರುವದು ದುರಂತ ಎನ್ನಬಹುದು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ ಅಧಿಕಾರಿಯೊಬ್ಬರ ಪ್ರಕಾರ ಇತ್ತೀಚೆಗೆ ಚುನಾವಣೆ ಹಾಗೂ ಬಜೆಟ್ ಹಿನ್ನೆಲೆ ಹಣ ಬಿಡು ಗಡೆ ವಿಳಂಬವಾಗಿದೆ. ಸದÀ್ಯದಲ್ಲಿಯೇ ಬಿಡುಗಡೆಗೊಳ್ಳಲಿದೆ ಎಂದಿದ್ದಾರೆ. ಕೂಡಲೇ ವೇತನ ಪಾವತಿ ಆಗದಿದ್ದಲ್ಲಿ ಸಂಬಂಧಿಸಿದ ಅರಣ್ಯ ವಲಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವದು ಎಂದು ದಿನಗೂಲಿ ನೌಕರರ ಸಂಘದ ಪ್ರಮುಖರು ಎಚ್ಚರಿಸಿದ್ದಾರೆ.

- ಚಂದ್ರಮೋಹನ್