ಮಡಿಕೇರಿ, ಆ. 11: ಮಳೆ ಇರಲಿ..., ಚಳಿ ಇರಲಿ..., ಕಗ್ಗೋಡ್ಲುವಿನಲ್ಲಿ ಪ್ರತಿವರ್ಷ ನಡೆಯುವ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನೊಮ್ಮೆ ನೋಡಿದರೆ ಎಂತಹ ಚಳಿ ಮಳೆಯಲ್ಲೂ ಕೂಡ ಮೈ ಬಿಸಿ ಏರುತ್ತದೆ. ಬಯಲು ಗದ್ದೆಯಲ್ಲಿ ಕೆಸರಿನಲ್ಲಿ ಮಿಂದೇಳುವ ಕ್ರೀಡಾ ಸ್ಪರ್ಧಿಗಳ ಉತ್ಸಾಹ ಎಂತವರನ್ನು ಕೂಡ ಬೆರಗುಗೊಳಿಸುತ್ತದೆ.ಕೊಡಗು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಇಂದು ಕಗ್ಗೋಡ್ಲುವಿನ ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ನಡೆದ 27ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಪ್ರತಿ ಬಾರಿಯಂತೆ ಈ ಬಾರಿಯೂ ಕ್ರೀಡಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.ಮಳೆಯ ತೀವ್ರತೆ ಎಂದಿನಂತೆ ಇಲ್ಲವಾಗಿತ್ತಾದರೂ, ಕ್ರೀಡಾಪಟುಗಳ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಬಿಡುವು ನೀಡುತ್ತಾ ಬರುತ್ತಿದ್ದ ಮಳೆರಾಯ, ತಂಪಾಗಿ ಬೀಸುತ್ತಿದ್ದ ಗಾಳಿಯ ನಡುವೆ ಕೆಸರುಗದ್ದೆಯಲ್ಲಿ ನಡೆದ ವಿವಿ ಕ್ರೀಡಾಕೂಟಗಳು ನೆರೆದಿದ್ದವರನ್ನು ರಂಜಿಸಿದವು. ಹಗ್ಗ ಜಗ್ಗಾಟ, ವಾಲಿಬಾಲ್, ಸಾರ್ವಜನಿಕರಿಗೆ ಮುಕ್ತ ಓಟ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಓಟ, ಥ್ರೋಬಾಲ್ ಮತ್ತಿತರ ಕ್ರೀಡಾ ಸ್ಪರ್ಧೆಗಳೂ ನಡೆದವು.
ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. ಎಲ್ಲ ತಂಡದವರು ಕೂಡ ಪ್ರಶಸ್ತಿಗಾಗಿ ಶಕ್ತಿ ಮೀರಿ ಪ್ರಯತ್ನಿಸಿದರು. ವಾಲಿಬಾಲ್, ಥ್ರೋಬಾಲ್ ಹಾಗೂ ಓಟದ ಸ್ಪರ್ಧೆಯಲ್ಲೂ ಸ್ಪರ್ಧಿಗಳು ಮಿಂದೆದ್ದರು.
ಸಾರ್ವಜನಿಕ ಮುಕ್ತ ಓಟದ ಪುರುಷರ ವಿಭಾಗದಲ್ಲಿ ಅಯ್ಯಂಗೇರಿಯ ಕಾವೇರಿಮನೆ ಚಂದ್ರಶೇಖರ್ ಪ್ರಥಮ, ದ್ವಿತೀಯ ಬಾಣೆಗದ್ದೆ ಸುಜಿತ್, ತೃತೀಯ ಅಭಿಷೇಕ್, ಮಹಿಳೆಯರ ವಿಭಾಗದಲ್ಲಿ ನೇತ್ರ ಪ್ರಥಮ, ಕುಂಬಳದಾಳು ಲತ ದ್ವಿತೀಯ, ಮೂಡಗದ್ದೆ ದಮಯಂತಿ ತೃತೀಯ ಸ್ಥಾನ ಪಡೆದರು. ಮಹಿಳೆಯ ಹಗ್ಗಜಗ್ಗಾಟದಲ್ಲಿ ಮರಗೋಡು ಪವಿ ಫ್ರೆಂಡ್ಸ್ ಪ್ರಥಮ, ಫ್ರೆಂಡ್ಸ್ ಯುವತಿ ಮಂಡಳಿ ಮಡಿಕೇರಿ ದ್ವಿತೀಯ, ಥ್ರೋಬಾಲ್ನಲ್ಲಿ ಐಕೊಳದ ಐಯ್ಯಪ್ಪ ಯುವತಿ ಮಂಡಳಿ ಪ್ರಥಮ, ಯಂಗ್ ಫೈಸ್ಟಾರ್ ಮಡಿಕೇರಿ ದ್ವಿತೀಯ, ಪ್ರೌಢಶಾಲಾ ವಿಭಾಗದ ಹಗ್ಗಜಗ್ಗಾಟ ಬಾಲಕರ ವಿಭಾಗಲದಲ್ಲಿ ನಾಪೋಕ್ಲು ಅಂಕುರ್ ಪ್ರೌಢಶಾಲೆ ಪ್ರಥಮ, ಭಾಗಮಂಡಲ ಪ್ರೌಢಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಹಾಕತ್ತೂರು ಪ್ರೌಢಶಾಲೆ ಪ್ರಥಮ, ಕೊಡಗು ವಿದ್ಯಾಲಯ ಮಡಿಕೇರಿ ದ್ವಿತೀಯ ಸ್ಥಾನ ಗಳಿಸಿತು. ಕಿರಿಯ ಪ್ರಾಥಮಿಕ ಶಾಲಾ ಬಾಲಕರ ಓಟದಲ್ಲಿ ಪವನ್ ಕೊಡಗು ವಿದ್ಯಾಲಯ ಪ್ರಥಮ, ನಿಯೂಸ್ ಮಾರುತಿ ಶಾಲೆ ಮೂರ್ನಾಡು ದ್ವಿತೀಯ, ಮದನ್ ಸಂತ ಜೋಸೆಫರ ಶಾಲೆ ಮಡಿಕೇರಿ ತೃತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಗಗನ ಕೊಡಗು ವಿದ್ಯಾಲಯ ಪ್ರಥಮ, ವಿನಿತ ನೇತಾಜಿ ಪ್ರೌಢಶಾಲೆ ದ್ವಿತೀಯ, ಭವಿಷ್ಯ ಸಂತ ಮೈಕಲರ ಶಾಲೆ ತೃತೀಯ ಸ್ಥಾನ ಪಡೆದರು.
ಕೆ.ಜಿ.ಬೋಪಯ್ಯ ಚಾಲನೆ
ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡೋತ್ಸವವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿಂದೆ
(ಮೊದಲ ಪುಟದಿಂದ) ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಯಗಳಿಸಿದವರಿಗೆ ಬಾಳೆಗೊನೆ, ತೆಂಗಿನ ಕಾಯಿ ಹಾಗೂ ಎಲೆ ಅಡಿಕೆ ನೀಡಿ ಗೌರವಿಸುತ್ತಿದ್ದರು ಎಂದು ಅವರು ಸ್ಮರಿಸಿದರು. ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವದರಿಂದ ಶಕ್ತಿ, ಯುಕ್ತಿ ಹಾಗೂ ಮನಸ್ಸಿನ ದೃಢತೆ ಹೆಚ್ಚುತ್ತದೆ ಎಂದರು.
ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಹಿಂದೆ ಎತ್ತುಗಳನ್ನು ಬಳಸಿ ನಾಟಿ ಮಾಡುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ಯಾಂತ್ರೀಕೃತ ನಾಟಿ ವ್ಯವಸ್ಥೆ ಬಂದಿದೆ, ಭತ್ತ ಗದ್ದೆ ಮಾಡುವದರಿಂದ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.
ತಾ.ಪಂ. ಸದಸ್ಯೆ ಕುಮುದ ರಶ್ಮಿ ಮಾತನಾಡಿ, ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವದರಿಂದ ಮನಸ್ಸಿನ ದೃಢತೆ ಹೆಚ್ಚಾಗುತ್ತದೆ ಎಂದರು.
ಹಾಕತ್ತೂರು ಗ್ರಾ.ಪಂ.ಅಧ್ಯಕ್ಷೆ ಶಾರದ ರಾಮಕೃಷ್ಣ, ಯೂತ್ ಹಾಸ್ಟೆಲ್ ಮೇಲ್ವಿಚಾರಕ ರಾಜಶೇಖರ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ.ಹರೀಶ್, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಸುಕುಮಾರ್ ಇತರರು ಇದ್ದರು. ಇಂದುಮತಿ ಪ್ರಾರ್ಥಿಸಿದರು.