ಮಡಿಕೇರಿ, ಆ. 11: ಭಾರತದ ಸಂಸ್ಕøತಿಯೊಂದಿಗೆ ಜೀವನ ಮೌಲ್ಯಗಳನ್ನು ಜನತೆಯಿಂದ ಮಾತ್ರ ಉಳಿಸಿಕೊಳ್ಳುವದು ಸಾಧ್ಯವಿದ್ದು, ಆ ದಿಸೆಯಲ್ಲಿ ಪ್ರಯತ್ನಿಸಬೇಕೆಂದು ಆರೆಸ್ಸೆಸ್ನ ಪ್ರಾಂತ ಪ್ರಚಾರ ಪ್ರಮುಖ್ ಪ್ರದೀಪ್ಜೀ ಕರೆ ನೀಡಿದರು.ನಿನ್ನೆ ಇಲ್ಲಿನ ಕಾವೇರಿ ಹಾಲ್ನಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಅವರು ಮಾತನಾಡುತ್ತಾ, ಭಾರತದ ಏಕತೆ ಹಾಗೂ ಅಖಂಡತೆಗಾಗಿ ಜನತೆ ಸದಾ ಮುನ್ನಡೆಯಬೇಕೆಂದು ಮಾರ್ನುಡಿದರು.
ಭಾರತದ ಸಮೃದ್ಧಿ, ಸ್ವಾಭಿಮಾನ ಹಾಗೂ ಸುರಕ್ಷತೆ ಜನತೆಯಿಂದ ಮಾತ್ರ ಸಾಧ್ಯವಿದ್ದು, ಕೇವಲ ಸರಕಾರಗಳಿಂದ ಅಲ್ಲವೆಂದು ಅವರು ನೆನಪಿಸಿದರು. ದೇಶದ ಜನಸಂಖ್ಯೆಯು ಉತ್ತಮ ರೀತಿ ಸದ್ಬಳಕೆಯಾಗಬೇಕೆಂದು ವ್ಯಾಖ್ಯಾನಿಸಿದ ಅವರು, ಆ ಮೂಲಕ ಭಾರತವನ್ನು ವಿಶ್ವದ ಸದೃಢ ರಾಷ್ಟ್ರವನ್ನಾಗಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.ಭಾರತದ ಅಖಂಡತೆಯೊಂದಿಗೆ ಗತವೈಭವವನ್ನು ಮರಳಿ ಪಡೆಯಲು ಸಮರ್ಥ ನಾಯಕತ್ವದಿಂದ ಮಾತ್ರ ಸಾಧ್ಯವೆಂದು ಪುನರುಚ್ಚರಿಸಿದ ಅವರು, ಅಂತಹ ತ್ಯಾಗ ಮನೋಭಾವವುಳ್ಳವರು ಭವಿಷ್ಯದ ಭಾರತ ನಿರ್ಮಿಸಲು ಅವಕಾಶವಿದೆ ಎಂದು ಸಮರ್ಥಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸೈನ್ಯಾಧಿಕಾರಿ ಎಂ.ಎಂ. ಅಯ್ಯಣ್ಣ ಮಾತನಾಡಿ, ಭಾರತದೊಂದಿಗೆ ನಮ್ಮ ಸಮಾಜದ ರಕ್ಷಣೆ ಆಗಬೇಕೆಂದು ಕರೆ ನೀಡಿದರು. ದೇಶಭಕ್ತ ಸಂಘಟನೆಗಳೊಂದಿಗೆ ಸಮಾಜವೂ ಕೈಜೋಡಿಸಿದರೆ ಮಾತ್ರ ರಾಷ್ಟ್ರ ರಕ್ಷಣೆ ಸಾಧ್ಯವೆಂದು ಅವರು ನೆನಪಿಸಿದರು.(ಮೊದಲ ಪುಟದಿಂದ) ನಗರದ ಚೌಟಿ ಮಾರಿಯಮ್ಮ ದೇವಾಲಯ ದಿಂದ ಕಾವೇರಿ ಹಾಲ್ ತನಕ ಮಳೆ ನಡುವೆ ಪಂಜಿನ ಮರೆವಣಿಗೆ ಜರುಗಿತು. ಕೇಸರಿ ಧ್ವಜಗಳೊಂದಿಗೆ ಯುವಕರು ಪಂಜು ಹಿಡಿದು ಸಾಗುತ್ತಾ ದೇಶದ ಅಖಂಡತೆಗಾಗಿ ಸಂಕಲ್ಪ ಕೈಗೊಂಡರು.
ಆರೆಸ್ಸೆಸ್ ಜಿಲ್ಲಾ ಸಂಘ ಚಾಲಕ್ ಚಕ್ಕೇರ ಮನು ಕಾವೇರಪ್ಪ, ಹಿಂ.ಜಾ.ವೇ. ಪ್ರಮುಖರಾದ ಜೀವನ್, ಪೊನ್ನಪ್ಪ, ಸುಭಾಷ್ ತಿಮ್ಮಯ್ಯ, ಅಯ್ಯಣ್ಣ, ನಂದೀಶ ಮೊದಲಾದವರು ಪಾಲ್ಗೊಂಡಿದ್ದರು. ಚಂದ್ರಉಡೋತ್ ಕಾರ್ಯಕ್ರಮ ನಿರೂಪಿಸಿದರೆ, ಕುಕ್ಕೇರ ಅಜಿತ್ ಸ್ವಾಗತಿಸಿ, ಮಹೇಶ್ ವಂದಿಸಿದರು. ರವಿ ಭೂತನಕಾಡು ವಂದೇ ಮಾತರಂನೊಂದಿಗೆ ಅವರ ತಂಡ ದೇಶ ಭಕ್ತಿಗೀತೆ ಹಾಡಿದರು.