ಗೋಣಿಕೊಪ್ಪಲು, ಆ. 10: ಪಂಚಾಯಿತಿಯ ಅಭಿವೃದ್ಧಿಗೆ ಗ್ರಾಮಸ್ಥರು ಉದ್ಯೋಗಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿ ಕೊಂಡಲ್ಲಿ ಹಲವು ಕಾಮಗಾರಿಗಳನ್ನು ಪೂರೈಸಲು ಅನುಕೂಲವಾಗಲಿದೆ ಎಂದು ಎನ್‍ಆರ್‍ಇಜಿ ತಾಲೂಕು ಸಂಯೋಜಕ ಸತೀಶ್ ಅವರು ಮಾಹಿತಿ ನೀಡಿದರು.

ಒಂಟಿಯಂಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಕಣ್ಣಂಗಾಲ ಗ್ರಾಮ ಪಂಚಾಯ್ತಿಗೆ ಒಳಪಡುವ ಕಣ್ಣಂಗಾಲ, ಹಚ್ಚಿನಾಡು ಮತ್ತು ಯಡೂರು ಗ್ರಾಮಗಳ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿಯ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಗ್ರಾಮಸ್ಥರು ಮನಸ್ಸು ಮಾಡಿದಲ್ಲಿ 1.5 ಕೋಟಿ ಹಣವನ್ನು ಎನ್‍ಆರ್‍ಇಜಿ ಮೂಲಕ ಸದ್ಭಳಕೆ ಮಾಡಿ ಕೊಳ್ಳಬಹುದು ಪಂಚಾಯ್ತಿ ವ್ಯಾಪ್ತಿಯಲ್ಲಿ 318 ಕುಟುಂಬಗಳು ಎನ್‍ಆರ್‍ಇಜಿಯಲ್ಲಿ ನೋಂದಾವಣೆ ಆಗಿದೆ. ಈ ಯೋಜನೆಯಿಂದ ಜಾನುವಾರು ದೊಡ್ಡಿ,ಒಕ್ಕಲು ಕಣ, ಹಂದಿದೊಡ್ಡಿ, ಅಂಗನವಾಡಿ ಸ್ಮಶಾನ ಅಭಿವೃದ್ಧಿ, ಸ್ವಸಹಾಯ ಸಂಘದ ಉತ್ಪನ್ನ ಘಟಕ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಪೂರೈಸಿಕೊಳ್ಳ ಬಹುದು. ಇದರಿಂದ ಪಂಚಾಯಿತಿ ಅಭಿವೃದ್ಧಿ ಆಗಲಿದೆ. ಪಂಚಾಯಿತಿ ಸೀಮಿತ ಅನುದಾನದಲ್ಲಿ ಕಾಮಗಾರಿ ಪೂರೈಸಲು ಸಾಧ್ಯವಾಗುವದಿಲ್ಲ. ಜನತೆ ಈ ಬಗ್ಗೆ ಇಚ್ಚಾ ಶಕ್ತಿ ತೋರಿಸುವ ಮೂಲಕ ಪಂಚಾಯಿತಿಯ ಅಭಿವೃದ್ಧಿಗೆ ಸಹಕರಿಸಬೇಕೆಂದು ತಿಳಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವಿಲೇವಾರಿ ಮಾಡಲು ಜಾಗವಿಲ್ಲ ಆದ್ದರಿಂದ ಗ್ರಾಮಸ್ಥರು ತಮ್ಮ ಮನೆಯ ಕಸಗಳನ್ನು ರಸ್ತೆ ಬದಿಯಲ್ಲಿ ಸುರಿಯದೇ ತಮ್ಮ ತಮ್ಮ ಮನೆಯಲ್ಲಿ ವಿಲೇವಾರಿ ಮಾಡಿಕೊಳ್ಳುವಂತೆ ಪಂಚಾಯಿತಿ ಉಪಾಧ್ಯಕ್ಷ ಮನೋಜ್ ಸಭೆಗೆ ತಿಳಿಸಿದರು. ಈ ಸಂದರ್ಭ ಗ್ರಾಮಸ್ಥರು ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಜಾಗ ಲಭ್ಯವಿದೆ ಈ ಬಗ್ಗೆ ಸಭೆಯಲ್ಲಿ ಹಾಜರಿರುವ ಕಂದಾಯ ಇಲಾಖೆ ಅಧಿಕಾರಿಗಳು ಉತ್ತರ ನೀಡಬೇಕೆಂದು ಮನವಿ ಮಾಡಿದರು. ಇವರ ಮಾತಿಗೆ ಉತ್ತರಿಸಿದ ಕಂದಾಯ ಇಲಾಖಾಧಿಕಾರಿಗಳು ಕೆಲವು ಪ್ರದೇಶದಲ್ಲಿ ಸರ್ಕಾರಿ ಜಾಗ ಇರುವ ಬಗ್ಗೆ ಮಾಹಿತಿ ಲಭ್ಯವಿದೆ. ಈ ಬಗ್ಗೆ ಶಿಫಾರಸ್ಸುಗೊಂಡ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವದೆಂದು ತಿಳಿಸಿದರು. ಮಧ್ಯ ಪ್ರವೇಶಿಸಿದ ಸದಸ್ಯರಾದ ಮಂಡೇಪಂಡ ತನುಜರವರು ಗ್ರಾಮಸ್ಥರು ಕಾಳಜಿ ವಹಿಸಿದ್ದಲ್ಲಿ ಕಸ ವಿಲೇವಾರಿ ಸಮಸ್ಯೆ ಎದುರಾಗುವದಿಲ್ಲ. ಬೇರೆ ಗ್ರಾಮದ ಜನತೆ ರಸ್ತೆ ಬದಿಯಲ್ಲಿ ಕಸ ಹಾಕುವದನ್ನು ಗ್ರಾಮಸ್ಥರು ಪ್ರಶ್ನಿಸಬೇಕು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಹೇಮಾವತಿ ಮಾತನಾಡಿ ಗರ್ಭಿಣಿ ಸ್ತ್ರೀಯರಲ್ಲಿ ತಾಯಿ ಕಾರ್ಡ್ ಕಡ್ಡಾಯವಾಗಿದೆ. ಯಾರೇ ಗರ್ಭಿಣಿ ಸ್ತ್ರೀಯರು ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ತೋರಬೇಕು ಎಂದ ಅವರು ಗರ್ಭಿಣಿ ಸ್ತ್ರೀಯರಿಗೂ ಸ್ಕ್ಯಾನಿಂಗ್ ಹಾಗೂ ರಕ್ತ ಪರೀಕ್ಷೆಗಳು ಉಚಿತವಾಗಿ ಮಾಡಕೊಡಲಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ವಿಪರೀತ ಮಳೆಯಿಂದ ಭತ್ತ, ಕಾಫಿ, ಕರಿಮೆಣಸು, ಅಡಿಕೆ, ಬೆಳೆಗಳು ಹಾನಿಯಾಗಿವೆ ಈ ಬಗ್ಗೆ ಪ್ರತ್ಯೇಕ ಅರ್ಜಿಗಳನ್ನು ಆರ್.ಟಿ.ಸಿ., ಆಧಾರ್, ಪಾಸ್ ಪುಸ್ತಕ, ನಕಲಿನೊಂದಿಗೆ ಕಂದಾಯ ಇಲಾಖೆಗೆ ನೀಡುವಂತೆ ಕಂದಾಯ ಅಧಿಕಾರಿ ಮುತ್ತಪ್ಪ ಗ್ರಾಮಸ್ಥರಿಗೆ ಮಾಹಿತಿ ಒದಗಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಕೇಚಮಾಡ ಸರಿತಾ ಪೂಣಚ್ಚ ಮಾತನಾಡಿ, ಜಿಲ್ಲಾ ಪಂಚಾಯತ್ ಸೀಮಿತ ಅನುದಾನದಲ್ಲಿ ವ್ಯಾಪ್ತಿಯ ಮೂರು ಪಂಚಾಯಿತಿಗಳಿಗೆ ಲಭ್ಯವಿರುವ ಅನುದಾನಗಳನ್ನು ಬಳಕೆ ಮಾಡಲಾಗಿದೆ, ಸಾಕಷ್ಟು ರಸ್ತೆ ಕಾಮಗಾರಿ, ಕೊಳವೆಬಾವಿ, ಪೈಪ್ ಲೈನ್, ಕೆಲಸ ಮಾಡಿದ್ದೇನೆ. ಮುಂದಿನ ಅನುದಾನದಲ್ಲಿ ಗ್ರಾಮಸ್ಥರು ಸಭೆಯಲ್ಲಿ ನೀಡಿರುವ ಕಾಮಗಾರಿಯನ್ನು ಪೂರೈಸುವದಾಗಿ ಭರವಸೆ ನೀಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮೀತ ಪ್ರಕಾಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಯ ಸಮಸ್ಯೆಗಳನ್ನು ಬಗೆ ಹರಿಸುವದಾಗಿ ತಿಳಿಸಿದರು. ಸಭೆಯಲ್ಲಿ ಗ್ರಾಮಸ್ಥರು, ವಿವಿಧ ಸರ್ಕಾರಿ ಯೋಜನೆಗಳ ವಿವರ ಪಡೆದರು. ಪಂಚಾಯಿತಿ ಅಧ್ಯಕ್ಷೆ ವೈ.ಎಸ್. ಈಶ್ವರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ಧರಣಿ ಸ್ವಾಗತಿಸಿ, ವಂದಿಸಿದರು, ಸದಸ್ಯರಾದ ವಿ.ಎಸ್. ವಿನಯ, ವಿ.ಎಸ್.ತುಳಸಿ, ಎಂ.ಟಿ.ರುಕ್ಮಿಣಿ, ಪಿ.ಎಂ.ಸೋಮಯ್ಯ, ಬಿ.ಎನ್. ಜಗದೀಶ್, ಬಿ.ಯು.ನಿತೀನ್, ಜಯ, ಪಂಚಾಯಿತಿ ಸಿಬ್ಬಂದಿಗಳಾದ ಮಹೇಶ್, ಟಿನಿ ಡ್ಯಾನಿಯಲ್, ರವಿಕುಮಾರ್ ಸುರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮದ ಮುಖಂಡರುಗಳು ಭಾಗವಹಿಸಿದ್ದರು