ಸೋಮವಾರಪೇಟೆ : ಪಶ್ಚಿಮಘಟ್ಟ ಶ್ರೇಣಿಯಲ್ಲಿರುವ ಗರ್ವಾಲೆ, ಸೂರ್ಲಬ್ಬಿ, ಹಮ್ಮಿಯಾಲ, ಮುಟ್ಲು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಎಲ್ಲೆಲ್ಲೂ ಜಲದ ಒರತೆ ಕಂಡುಬರುತ್ತಿದೆ. ಬೆಟ್ಟಗುಡ್ಡಗಳಿಂದ ಮಳೆ ನೀರು ಹರಿದುಬರುತ್ತಿದ್ದು, ತಗ್ಗುಪ್ರದೇಶಗಳಿಗೆ ನುಗ್ಗುತ್ತಿದೆ.

ಈ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮಳೆಯಾಗುತ್ತಿದ್ದು, ಗ್ರಾಮಗಳು ಮಳೆಗೆ ತೊಯ್ದು ಹೋಗಿವೆ. ಜನಸಾಮಾನ್ಯರ ಬದುಕು ದುಸ್ತರವಾಗಿದ್ದು, ಕೃಷಿ ಫಸಲು ನಷ್ಟಕ್ಕೊಳಗಾಗಿವೆ. ಕೃಷಿಗೆ ಕೊಳೆರೋಗ ತಗುಲಿರುವದರಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಸೂರ್ಲಬ್ಬಿಗೆ ಇದುವರೆಗೆ 257.4 ಇಂಚು ಮಳೆ ದಾಖಲಾಗಿದೆ. ಶಾಂತಳ್ಳಿಗೆ ಒಟ್ಟು 172 ಇಂಚು ಮಳೆಯಾಗಿದೆ.

ಸೂರ್ಲಬ್ಬಿ-ಗರ್ವಾಲೆ ಮುಖ್ಯರಸ್ತೆಯಲ್ಲಿ ಜಲದ ಸೆಲೆ ಕಂಡುಬಂದಿದೆ. ಡಾಂಬರು ರಸ್ತೆಯ ಮಧ್ಯೆ ತಿಳಿನೀರಿನ ಬುಗ್ಗೆ ಉದ್ಬವವಾಗಿದ್ದು, ಈ ವ್ಯಾಪ್ತಿಯ ಮಳೆಯ ಭೋರ್ಗರೆತಕ್ಕೆ ಸಾಕ್ಷಿಯಾಗಿದೆ.

ಇದರೊಂದಿಗೆ ಮಾದಾಪುರ-ಸೂರ್ಲಬ್ಬಿ ರಸ್ತೆಯ ಇಕ್ಕೆಲಗಳಲ್ಲಿ ಸಣ್ಣಪುಟ್ಟ ಜಲಧಾರೆಗಳು ಮೈದುಂಬಿದ್ದು, ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿವೆ. ಭಾರೀ ಮಳೆಗೆ ಮೇದುರ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಮೇದುರ ಜಲಪಾತ ಭೋರ್ಗರೆಯುತ್ತಿದೆ.

ಬೆಟ್ಟಗುಡ್ಡಗಳಿಂದ ಇಳಿಯುವ ನೀರು ಕಾಫಿ ತೋಟದೊಳಗೆ ಹರಿಯುತ್ತಿದ್ದು, ಸಣ್ಣಪುಟ್ಟ ತೋಡುಗಳೂ ಸಹ ಜಲಪಾತದ ಸೌಂದರ್ಯ ಪಡೆದುಕೊಂಡಿವೆ. ಮಾದಾಪುರ-ಸೂರ್ಲಬ್ಬಿ ರಸ್ತೆಯಲ್ಲಿ ತೆರಳಿದರೆ ಇಂತಹ ಜಲಧಾರೆಗಳು ಕಂಡುಬರುತ್ತಿವೆ.ಕೌಟುಂಬಿಕ ಜೀವನದಲ್ಲಿ ಕುಟುಂಬದ ಹಿರಿಯ ಪಟ್ಟೇದಾರನ ಹೆಸರಿನಲ್ಲಿ ತೋಟದ ಜಾಗಕ್ಕೆ ಸಂಬಂಧಿಸಿದ ಆರ್‍ಟಿಸಿಯಿದ್ದು, ಆಸ್ತಿ ವಿಂಗಡಣೆಯಾಗದಿರುವ ಪರಿಣಾಮ ತಮಗೆ ಉಂಟಾಗಿರುವ ನಷ್ಟಕ್ಕೆ ಪರಿಹಾರ ಲಭಿಸುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ಖುದ್ದು ಪರಿಶೀಲಿಸಲಿ: ಕೊಡಗು ಜಿಲ್ಲಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಗ್ರಾಮೀಣ ಭಾಗದ ಅತಿವೃಷ್ಟಿ ಬಗ್ಗೆ ಖುದ್ದಾಗಿ ಪರಿಶೀಲಿಸಿ ಮಾನವೀಯ ನೆಲೆಯಲ್ಲಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ನೊಂದ ಜನತೆ ‘ಶಕ್ತಿ’ ಮೂಲಕ ಒತ್ತಾಯಿಸಿ ಹೇಳಿಕೆ ನೀಡಿದ್ದಾರೆ.

ಸೂರ್ಯ ಕಾಣಲಿಲ್ಲ...!: ಶುಕ್ರವಾರದ ಸಂತೆಗೆ ಆಗಮಿಸಿದ್ದ ಗ್ರಾಮೀಣ ರೈತರು ಮಳೆಯ ತೀವ್ರತೆ ನಡುವೆ ತಮ್ಮ ಸಂಕಷ್ಟ ತೋಡಿಕೊಂಡರು. ಕಳೆದ ಒಂದೂವರೆ ತಿಂಗಳಿನಿಂದ ಸೂರ್ಯನನ್ನು ಕಾಣದಷ್ಟು ನಿರಂತರ ಮೋಡ ಮುಸುಕಿದ ವಾತಾವರಣದಿಂದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ನಾಟಿ ಸಂಪೂರ್ಣ ಕೊಳೆತು ಹೋಗಿ ಗದ್ದೆಗಳು ಕೇವಲ ಹಸಿರು ಸಿರಿ ಮಾಯವಾಗಿ ಕೆಸರಿನ ಬಯಲಿನಂತೆ ಗೋಚರಿಸುತ್ತಿದೆ ಎಂದು ನೋವು ತೋಡಿಕೊಂಡರು.

ಆಶ್ಲೇಷ ಆರ್ಭಟಕ್ಕೆ ಮುಳುಗಿದ ದೇವಾಲಯ

ಬುಧವಾರ ರಾತ್ರಿ ಸುರಿದ ಭಾರೀ ಮಳೆ ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದಲ್ಲಿ ದಶಕಗಳ ಹಿಂದಿನ ದಾಖಲೆಯನ್ನು ಮೀರಿದ್ದು, 24 ಗಂಟೆಗಳಲ್ಲಿ 9.5 ಇಂಚು ಮಳೆಯಾಗಿದೆ. ಮದ್ಯರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ಗ್ರಾಮದ ಶ್ರೀ ಭಧ್ರಕಾಳೇಶ್ವರಿ ದೇವಾಲಯವು ಮುಳುಗಡೆಗೊಂಡಿದೆ. ದೇವಾಲಯದ ಒಳಾಂಗಣದಲ್ಲಿ ಸುಮಾರು ಹತ್ತು ಅಡಿಗಳಷ್ಟು ನೀರು ತುಂಬಿದೆ. ಇಲ್ಲಿನ ಈಶ್ವರ ಹಾಗೂ ಗಣಪತಿ ಗುಡಿಗಳು ಸಂಪೂರ್ಣ ಮುಳುಗಿದ್ದು ವಿಗ್ರಹಗಳಿಗೆ ನದಿ ನೀರಿನ ಅಭಿಷೇಕವಾಗಿದೆ. ಮುಂಜಾನೆಯಿಂದ ಮಳೆ ಸ್ವಲ್ಪ ಕಡಿಮೆಯಾದ್ದರಿಂದ ನೀರಿನ ಪ್ರಮಾಣ ಸ್ವಲ್ಪ ಇಳಿಮುಖವಾಗಿದೆ. ರಸ್ತೆ, ಸೇತುವೆ ಹಾಗೂ ಭತ್ತದ ಗದ್ದೆಗಳು ನದಿ ನೀರಿನಿಂದ ಮುಳುಗಿದ್ದು ದಶಕಗಳ ಹಿಂದಿನ ದಾಖಲೆಯನ್ನೂ ಮೀರಿಸಿದೆ. ಈ ವರ್ಷದಲ್ಲಿ ಸರಾಸರಿ 165 ಇಂಚು ಮಳೆ ದಾಖಲಾಗಿದೆ.

ಹಲವೆಡೆ ಬರೆ ಕುಸಿದಿದ್ದು ಕೆಲವು ಮನೆಗಳಿಗೆ ಹಾನಿಯಾಗಿದೆ. ನದಿ ತೀರದಲ್ಲಿನ ಕಾಫಿ ತೋಟ, ಭತ್ತದ ಗದ್ದೆಗಳು ತೊಯ್ದು ಹೋಗಿವೆ. ತಾ.9ರ ರಾತ್ರಿ ಸುರಿದ ದಾಖಲೆ ಮಳೆ ಮುಂಜಾನೆ ವೇಳೆಗೆ ಗ್ರಾಮದಲ್ಲಿ ಅವಾಂತರ ಸೃಷ್ಟಿಸಿತ್ತು ಎಂದು ಗ್ರಾಮಸ್ಥ ಮಧು ಮಾನಡ್ಕ ‘ಶಕ್ತಿ’ಗೆ ತಿಳಿಸಿದ್ದಾರೆ.

ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಚಂಗೇಟಿರ ಶೃತಿ ಮತ್ತು ಪಲ್ಲವಿ ಅವರ ಮನೆಯ ಗೋಡೆ ಕುಸಿದಿದ್ದು, ಮನೆಯ ಒಂದು ಭಾಗ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಲೆಕ್ಕಿಗರು ತೆರಳಿ ಪರಿಶೀಲನೆ ನಡೆಸಿದರು.