ಮಡಿಕೇರಿ, ಆ. 9: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 45ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡ ಸಾಯಿಶಂಕರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕಥೆ ಹೇಳುವದು, ಇಂಗ್ಲೀಷ್ ಕಂಠ ಪಾಠ ಸ್ಪರ್ಧೆ, ಅಭಿನಯಗೀತೆ ಕೋಲಾಟದಲ್ಲಿ ಶೈನಿ ಮುತ್ತಮ್ಮ ಪ್ರಥಮ ಸ್ಥಾನಗಳಿಸಿದ್ದಾರೆ. ವಾಸವಿ ಭಟ್ಟ್, ಆದಿತ್ಯ ಕೆ.ಕೆ, ಧಾರ್ಮಿಕ ಪಟ್ಟಣ ಸಂಸ್ಕøತದಲ್ಲಿ ಪ್ರಥಮ ಸ್ಥಾನ, ಧರ್ಮ ಮತ್ತು ಏಳು ಜನರ ತಂಡ ಜನಪದ ಕಲೋತ್ಸವದಲ್ಲಿ ಪ್ರಥಮ ಹಾಗೂ ಹಲವಾರು ವಿದ್ಯಾರ್ಥಿಗಳು ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ವಿವಿಧ ವಿಭಾಗಗಳಲ್ಲಿ ಪಡೆದಿದ್ದಾರೆ. ಲಯನ್ಸ್ ಶಾಲೆಯಲ್ಲಿ ನಡೆದ ಅಂತರ್ ಶಾಲಾ ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಕಾವೇರಿ ಎಂ. ತೃತೀಯ ಸ್ಥಾನ ಗಳಿಸಿದ್ದಾಳೆ.ಗೋಣಿಕೊಪ್ಪ ವರದಿ: ಕಳತ್ಮಾಡು ಲಯನ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಪದವಿಪೂರ್ವ ಕಾಲೇಜು ತಂಡ ಹಲವು ಬಹುಮಾನ ಪಡೆದುಕೊಂಡಿದೆ.

ಕ್ರಿಯಾತ್ಮಕ ಬರವಣಿಗೆಯೊಂದಿಗೆ ಸೃಜನಶೀಲ ಅಭಿನಯ ಸ್ಪರ್ಧೆಯಲ್ಲಿ ಕೆ.ಸಿ. ಪೊನ್ನಣ್ಣ ಪ್ರಥಮ, ಎಂ.ಪಿ. ಕಾವೇರಮ್ಮ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಮರ್ಥ ಕನ್ನಡಿಗರು ಸಂಸ್ಥೆ ಆಯೋಜಿಸಿದ್ದ ಭಾವಗೀತೆ ಸ್ಪರ್ಧೆಯಲ್ಲಿ ಎನ್. ಚೈತ್ರಾ ವಿವೇಕ್ ಪ್ರಥಮ, ಅಪರ್ಣ ಭಾರಧ್ವಾಜ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮಡಿಕೇರಿ: ಟಿ. ಶೆಟ್ಟಿಗೇರಿ ಕ್ಲಸ್ಟರ್‍ನ ಪ್ರತಿಭಾ ಕಾರಂಜಿಯಲ್ಲಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲಾ ವಿಭಾಗಗಳಲ್ಲೂ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಾಕೂರಿನಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಗ್ಗಜಗ್ಗಾಟದಲ್ಲಿ (ಬಾಲಕರು) ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕೆಸರು ಗದ್ದೆ ಓಟದಲ್ಲಿ ವಿದ್ಯಾರ್ಥಿನಿಯರು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.ಗೋಣಿಕೊಪ್ಪ ವರದಿ: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಶ್ರಮದಾನ ಮಾಡುವ ಮೂಲಕ ಸ್ವಚ್ಛತೆ ನಡೆಸಿದರು.

ಸಮಾಜದ ಆವರಣವನ್ನು ಸ್ವಚ್ಛಗೊಳಿಸಿದರು. ರಸ್ತೆಯ ಇಕ್ಕೆಲಗಳ ಕಾಡುಗಳನ್ನು ಕಡಿದರು. ಹಾಗೂ ಗ್ರಾಮ ಪಂಚಾಯಿತಿ ಆವರಣವನ್ನು ಕೂಡ ಸ್ವಚ್ಛಗೊಳಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಜೇನುಕೃಷಿ ಬಗ್ಗೆ ಅರಣ್ಯ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಕೆಂಚರೆಡ್ಡಿ ಜೇನು ಸಾಕಾಣಿಕೆ, ನಿರ್ವಹಣೆ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದರು. ಕೃಷಿಯಲ್ಲಿ ಅರಣ್ಯ ಅಭಿವೃದ್ಧಿ ಬಗ್ಗೆ ಡಾ. ರಾಮಕೃಷ್ಣ ಹೆಗ್ಗಡೆ ಮಾಹಿತಿ ನೀಡಿದರು.

ಶನಿವಾರಸಂತೆ: ವೈಜ್ಞಾನಿಕ ವಿಷಯಗಳ ಪ್ರಾಯೋಗಿಕ ವೀಕ್ಷಣೆಯಿಂದ ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಅರಿವು ಮೂಡಲು ಸಾಧ್ಯ ಎಂದು ಸ್ಥಳೀಯ ರೋಟರಿ ಸಂಸ್ಥೆ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಅಭಿಪ್ರಾಯಪಟ್ಟರು.

ರೋಟರಿ ಸಂಸ್ಥೆ ವತಿಯಿಂದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಜೈವಿಕ ಇಂಧನ ಘಟಕದ ಕೊಡುಗೆ ಹಾಗೂ ಪ್ರಾತ್ಯಕ್ಷಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಕೃತಿಕ ಹಾಗೂ ಮುಂದಿನ ಪೀಳಿಗೆಯ ದೃಷ್ಟಿಯಿಂದ ಜೈವಿಕ ಇಂಧನ ಉತ್ಪಾದನೆ ಅನುಕೂಲವಾಗಿದ್ದು ಪ್ರಾತ್ಯಕ್ಷಿಕೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ಕೊಡುಗೆಯಾಗಿದೆ ಎಂದು ಪುರುಷೋತ್ತಮ್ ಹೇಳಿದರು.

ಜೈವಿಕ ಇಂಧನ ಪ್ರಾತ್ಯಕ್ಷಿಕೆ ಪ್ರದರ್ಶಿಸಿದ ಆವಿಷ್ಕಾರಿ ಹಾಗೂ ರೋಟರಿ ಸಂಸ್ಥೆ ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್ ಮಾತನಾಡಿ, ಪ್ರಾಕೃತಿಕ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ. ಸಾಮಾಜಿಕ ಕಾಳಜಿ ಉಂಟಾಗುತ್ತದೆ. ಪರಿಸರಕ್ಕೆ ತ್ಯಾಜ್ಯ ಚೆಲ್ಲಿ ಮಾಲಿನ್ಯಗೊಳಿಸುವ ಬದಲು ಗೋಬರ್ ಗ್ಯಾಸ್ ಉತ್ಪಾದನೆ ಮಾಡಿದರೆ ರಾಸಾಯನಿಕ ರಹಿತವಾಗಿ ತೋಟ, ಗದ್ದೆ, ಮನೆ ಬಳಕೆಗೂ ಆಗುತ್ತದೆ. ರೂ. 35 ಸಾವಿರ ವೆಚ್ಚದಲ್ಲಿ ನಿರ್ಮಿಸಬಹುದಾಗಿರುವ ಜೈವಿಕ ಇಂಧನ ಘಟಕ ಅಪಾಯ ರಹಿತವಾಗಿದ್ದು ಸರಕಾರ, ಅರಣ್ಯ ಇಲಾಖೆಯಿಂದ ಸಬ್ಸಿಡಿ ದೊರೆಯುತ್ತದೆ. ಪಶುಪಾಲನೆಯೂ ಅಭಿವೃದ್ಧಿಯಾಗುತ್ತದೆ ಎಂದರು.

ಶಾಲೆಯ 54 ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ವೀಕ್ಷಿಸಿದರು. ವೇದಿಕೆಯಲ್ಲಿ ಶುಭ ಮತ್ತಿತರ ರೋಟರಿ ಸಂಸ್ಥೆ ಸದಸ್ಯರು, ಮುಖ್ಯ ಶಿಕ್ಷಕ ಹೇಮಂತ್, ಸಹ ಶಿಕ್ಷಕರು ಉಪಸ್ಥಿತರಿದ್ದರು.

ಸೋಮವಾರಪೇಟೆ: ಎಲ್ಲಾ ದಾನಗಳಿಗಿಂತ ವಿದ್ಯಾದಾನ ಶ್ರೇಷ್ಠ ಎಂದು ಇಲ್ಲಿನ ವಿರಕ್ತ ಮಠದ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ ಅಭಿಪ್ರಾಯಿಸಿದರು.

ಇಲ್ಲಿನ ಸಂತ ಜೋಸೆಫರ ಪ್ರೌಢಶಾಲೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳಲ್ಲಿ ವಿನಯದೊಂದಿಗೆ ಕಲಿಕೆ, ನಿರ್ದಿಷ್ಟ ಗುರಿ, ಆತ್ಮ ವಿಶ್ವಾಸ, ಏಕಾಗ್ರತೆ ಇದ್ದರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಸಂಸ್ಥೆಯ ಸಂಚಾಲಕರಾದ ಫಾದರ್ ಎಂ. ರಾಯಪ್ಪ ಮಾತನಾಡಿ, ಪ್ರತಿಭೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು. ಕಾಲೇಜು ಪ್ರಾಂಶುಪಾಲರಾದ ಟೆನ್ನಿ ಕುರಿಯನ್, ಸಂತ ಜೋಸೆಫರ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾರ್ಗರೇಟ್ ನೆವಿಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ನಾಪೋಕ್ಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಾಗಮಂಡಲ ವಲಯ ವತಿಯಿಂದ ಇಲ್ಲಿಗೆ ಸಮೀಪದ ಚೆರಿಯಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡನಾಟಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಪಿ.ಕೆ. ಪಾರ್ವತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುಶೀಲಮ್ಮ, ಶೈಲಾ ಬೋಪಯ್ಯ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಿಫಾನತ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಶಾಲಾ ಆವರಣದಲ್ಲಿ ಗಿಡಗಳ ನಾಟಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಪೋಕ್ಲು ಒಕ್ಕೂಟದ ಪದಾಧಿಕಾರಿಗಳು, ಸಂಘಗಳ ಸದಸ್ಯರು, ವಿಶೇಷ ಪ್ರತಿನಿಧಿಗಳು, ಶಿಕ್ಷಕ ವೃಂದ ಎಸ್.ಡಿ.ಎಂ.ಸಿ. ಸದಸ್ಯರು ಪಾಲ್ಗೊಂಡಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಪೋಕ್ಲು ಒಕ್ಕೂಟದ ಅಧ್ಯಕ್ಷೆ ಮುತ್ತುರಾಣಿ ವಹಿಸಿದ್ದರು. ಪಿ.ಕೆ. ಪಾರ್ವತಿ ಸ್ವಾಗತಿಸಿದರೆ, ಸುಕುಮಾರ್ ವಂದಿಸಿದರು. ವಲಯ ಮೇಲ್ವಿಚಾರಕ ಕೆ. ಚೇತನ್ ಕಾರ್ಯಕ್ರಮ ನಿರೂಪಿಸಿದರು.ಕೂಡಿಗೆ: ಇಲ್ಲಿನ ಕೃಷಿ ಕ್ಷೇತ್ರದ ಆವರಣದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ತಾಲೂಕು ಮಟ್ಟದ ಕನ್ನಡ ಶಿಕ್ಷಕರಿಗೆ ಕನ್ನಡ ವಿಷಯ ಸಂಪದೀಕರಣ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚು ಒತ್ತುಕೊಡುವ ನಿಟ್ಟಿನಲ್ಲಿ ಹಾಗೂ ಕನ್ನಡ ವಿಷಯಕ್ಕೆ ಉತ್ತೇಜನ ನೀಡುವ ವಿಷಯವಾಗಿ ತರಬೇತಿ ನೀಡಿ, ಮುಂದಿನ ಅವಧಿಯಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಫಲಿತಾಂಶ ಬರುವ ವಿಷಯವಾಗಿ ತರಬೇತಿ ನೀಡಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ಸಂಪನ್ಮೂಲ ವ್ಯಕ್ತಿಗಳಾದ ಶೇಖರ್, ಕೂಡಿಗೆ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಪ್ರಕಾಶ್, ಶಿಕ್ಷಕರಾದ ಮಂಜುನಾಥ್, ಹೇಮಂತ್, ವೆಂಕಟನಾಯಕ್, ಹೇಮಲತಾ ಸೇರಿದಂತೆ ತಾಲೂಕಿನ ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗೋಣಿಕೊಪ್ಪ ವರದಿ: ಟಿ. ಶೆಟ್ಟಿಗೇರಿ ಕ್ಲಸ್ಟರಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚೀನಿವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಿಡ ನೆಡುವದರ ಮೂಲಕ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಯುತ್ತನ್ ಚಾಲನೆ ನೀಡಿದರು.

ನಂತರ ಮಾತನಾಡಿ, ಮಕ್ಕಳು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ಸೂಕ್ತ ವೇದಿಕೆಯಾಗಿದೆ. ಪೋಷಕರು ಮತ್ತು ಶಿಕ್ಷಕರು ಇಂತಹ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ ಎಂದರು.

ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್‍ಕುಮಾರ್ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಕ್ಲಸ್ಟರ್ ವ್ಯಾಪ್ತಿಯಲ್ಲಿ ಗುರುತಿಸಿ ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಕ್ಕಳು ಗುರುತಿಸಿಕೊಳ್ಳುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪಿ.ಡಿ. ರತಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಕೀನ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ, ಕಲ್ಲಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್, ದಾನಿ ಕಾಕಮಾಡ ಗಂಗಾ ಚಂಗಪ್ಪ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಮೊಯ್ದು ಉಪಸ್ಥಿತರಿದ್ದರು.

ಸಿದ್ದಾಪುರ: ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಿದ್ದಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ವಹಿಸಿ ಮಾತನಾಡಿ, ಸಿದ್ದಾಪುರ ಎಂಬ ಪುಟ್ಟ ಗ್ರಾಮಕ್ಕೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಶಾಲೆ ಆರಂಭವಾಗಿರುವದು ಸಂತೋಷದ ವಿಷಯವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿದೆ ಎಂದರು. ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಬೇಕು, ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಶಾಲೆಯಲ್ಲಿ ಇದು ಸಾಧ್ಯವಾಗಲಿದೆ ಎಂದರು.

ಸಿದ್ದಾಪುರ ಠಾಣಾ ಎ.ಎಸ್.ಐ. ವಸಂತ್ ಕುಮಾರ್ ಮಾತನಾಡಿ, ಆದಿಚುಂಚನಗಿರಿ ವಿದ್ಯಾಸಂಸ್ಥೆ ಈಗಾಗಲೇ 480 ಕ್ಕೂ ಅಧಿಕ ವಿವಿಧ ಶಾಲೆಗಳನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣ ರಾಜ್ಯದ ವಿವಿಧ ಭಾಗದಲ್ಲಿ ನೀಡಲಾಗುತ್ತಿದೆ. ಸಿದ್ದಾಪುರದ ಭಾಗದ ಜನರಿಗೂ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸುವದರೊಂದಿಗೆ ಕ್ರೀಡೆ, ಕಲೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉತ್ತಮ ಸೌಲಭ್ಯ ಒದಗಿಸಲಾಗಿದ್ದು, ತಮ್ಮ ಪೋಷಕರ ಕನಸನ್ನು ನನಸು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಹೆಚ್.ಡಿ. ಕೋಟೆಯ ಆಡಳಿತಾಧಿಕಾರಿ ಬಸವೇಗೌಡರವರು ಮಾತನಾಡಿ, ಸಂಸ್ಥೆಯ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿರವರ ಧ್ಯೇಯದ ಬಗ್ಗೆ ವಿವರಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಪಿ.ಸಿ. ಕುಶಾಲಪ್ಪ, ನಿರ್ದೇಶಕ ಮಂಡೇಪಂಡ ರಮೇಶ್, ನಿವೃತ್ತ ಪ್ರಾಂಶುಪಾಲ ವೇಣುಗೋಪಾಲ್, ಕೃಷ್ಣವೇಣಿ, ಎ.ಎಸ್.ಐ. ಬೋಜಪ್ಪ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಶಿಕ್ಷಕಿ ರಮ್ಯ ಸ್ವಾಗತಿಸಿ, ಜಸ್ಮಿ ನಿರೂಪಿಸಿ, ವನಿತ ವಂದಿಸಿದರು. ಪ್ರಾಂಶುಪಾಲ ಚೇತನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೋಣಿಕೊಪ್ಪಲು: ಮಂಗಳೂರು ವಿಶ್ವವಿದ್ಯಾನಿಲಯ, ಸೈಂಟ್ ಆನ್ಸ್ ಪದವಿ ಕಾಲೇಜು ವೀರಾಜಪೇಟೆ ಇವರ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಅಂಗವಾಗಿ ಆರೋಗ್ಯ ಜ್ಯೋತಿ ಉದ್ಘಾಟನಾ ಕಾರ್ಯಕ್ರಮ ವೀರಾಜಪೇಟೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಸಸಿಗಳನ್ನು ಸಮಾಜ ಸೇವಕ ಗಾಂಧಿ ನಗರದ ನಿವಾಸಿಯಾದ ಪಿ.ಎ. ಮಂಜುನಾಥ್ ಉಚಿತವಾಗಿ ನೀಡಿದರು.

ಈ ಸಂದರ್ಭ ವಿದ್ಯಾರ್ಥಿಗಳಿಂದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶ್ರಮದಾನ ಹಾಗೂ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಯಿತು. ವೀರಾಜಪೇಟೆ ಗ್ರಾಮೀಣ ಠಾಣೆಯ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಆಸ್ಪತ್ರೆಯ ಸರ್ಜನ್ ಡಾ. ಸಿಂಪಿ, ಸಿಬ್ಬಂದಿಗಳಾದ ಧನಲಕ್ಷ್ಮಿ, ರೋಹಿಣಿ, ಧನುಮತಿ, ಇಂದುಲೇಖ ಸೇರಿದಂತೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯ ಕ್ರಮಾಧಿಕಾರಿಗಳಾದ ಹೆಚ್.ಆರ್. ಅರ್ಜುನ್ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.