ರಾಜ್ಯಸಭೆ ಉಪಸಭಾಪತಿಯಾಗಿ ಹರಿವಂಶ ಆಯ್ಕೆ
ನವದೆಹಲಿ, ಆ. 9: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಜೆಡಿಯು ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ. ಉಪಸಭಾಪತಿಯಾಗಿದ್ದ ಕುರಿಯನ್ ಅವರ ಅಧಿಕಾರಾವಧಿ ಜುಲೈ 1 ರಂದು ಪೂರ್ಣಗೊಂಡಿದ್ದು, ಆ ಸ್ಥಾನಕ್ಕಾಗಿ ಇಂದು ಮುಂಗಾರು ಅಧಿವೇಶನದಲ್ಲಿ ಚುನಾವಣೆ ನಡೆದಿತ್ತು. ಎನ್ ಡಿಎ ಅಭ್ಯರ್ಥಿ ಹರಿವಂಶ ಸಿಂಗ್ 125 ಮತ ಚಲಾವಣೆಯಾದರೆ, ಯುಪಿಎ ಅಭ್ಯರ್ಥಿ ಹರಿಪ್ರಸಾದ್ ಪರ 105 ಮತಗಳು ಬಂದಿವೆ. ನೂತನ ಉಪಸಭಾಪತಿ ಆಯ್ಕೆಯನ್ನು ಘೋಷಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಹರಿವಂಶ ಸಿಂಗ್ ಅವರನ್ನು ಅಭಿನಂದಿಸಿದರು.
ಇಬ್ಬರು ಶಂಕಿತ ಉಗ್ರರ ಬಂಧನ
ನವದೆಹಲಿ, ಆ. 9: ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ರಾಷ್ಟ್ರ ರಾಜಧಾನಿ ದೆಹಲಿಗೆ ಉಗ್ರರ ಕರಿನೆರಳು ಚಾಚಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಬ್ಬರು ಶಂಕಿತ ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಪಶ್ಚಿಮ ಬಂಗಾಳದ ಮಾಲ್ಡಾ ನಿವಾಸಿ ಮೊಹಮ್ಮದ್ ಅಜಿಮ್ ಹಾಗೂ ಉತ್ತರ ಪ್ರದೇಶ ಶ್ಯಾಮ್ಲಿ ನಿವಾಸಿ ಆಸ್ ಮೊಹಮ್ಮದ್ ಎಂದು ಗುರುತಿಸಲಾಗಿದೆ ಎಂದು ದೆಹಲಿ ಉಪ ಪೆÇಲೀಸ್ ಆಯುಕ್ತ ಸಂಜೀವ್ ಕುಮಾರ್ ಅವರು ತಿಳಿಸಿದ್ದಾರೆ. ಆಸ್ ಮೊಹಮ್ಮದ್ನನ್ನು ನಿನ್ನೆ ಬಂಧಿಸಲಾಗಿದ್ದು, ಅಜಿಮ್ನನ್ನು ಕಳೆದ ವಾರ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಕಾರ್ಬೈನ್ ಹಾಗೂ 50 ಪಿಸ್ತೂಲ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿಗಳು ಕಳೆದ ನಾಲ್ಕು ವರ್ಷಗಳಿಂದ ದೆಹಲಿ ಮೂಲದ ಕ್ರಿಮಿನಲ್ಗಳಿಗೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
26 ವರ್ಷಗಳ ಬಳಿಕ ಇಡುಕ್ಕಿ ಭರ್ತಿ
ತಿರುವನಂತಪುರ, ಆ. 9: ದೇಶದ ಅತೀ ಹೆಚ್ಚು ಪ್ರಮಾಣದ ನೀರನ್ನು ಸಂಗ್ರಹಿಸಬಲ್ಲ ಕೇರಳದ ಇಡುಕ್ಕಿ ಡ್ಯಾಂನ ಗೇಟ್ಗಳನ್ನು ಬರೊಬ್ಬರಿ 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿದೆ. ಮುಂಗಾರು ನಿಮಿತ್ತ ಕೇರಳದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಈಗಾಗಲೇ ಡ್ಯಾಂ ಭರ್ತಿಯಾಗಿ ಅಪಾಯದ ಮಟ್ಟದ ಸನಿಹದಲ್ಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು ಡ್ಯಾಂನ ಗೇಟ್ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನು ಇಂದು ಕೇವಲ ಪ್ರಯೋಗಾರ್ಥವಾಗಿ ಗೇಟ್ನ ಒಂದು ಗೇಟ್ ತೆರೆದು ನೀರು ಬಿಡಲಾಗುತ್ತಿದ್ದು, ಮುಂದಿನ ಪರಿಸ್ಥಿತಿಗಳನ್ನು ನೋಡಿಕೊಂಡು ಇತರ ಗೇಟ್ಗಳ ತೆರೆಯುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಡ್ಯಾಂ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಡ್ಯಾಂ ಗೇಟ್ಗಳನ್ನು ಪ್ರಯೋಗಾರ್ಥವಾಗಿ 50 ಸೆಮೀಗಳವರೆಗೂ ತೆರೆದು ನೀರು ಹೊರ ಬಿಡಲಾಗುತ್ತಿದೆ.
ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಮಸೂದೆ ಅಂಗೀಕಾರ
ನವದೆಹಲಿ, ಆ. 9: ಎಸ್ಸಿ-ಎಸ್ಟಿ ಕಾಯಿದೆಯನ್ನು ದುರ್ಬಲ ಗೊಳಿಸಲಾಗುತ್ತಿದೆ ಎಂಬ ದಲಿತ ಸಂಘಟನೆಗಳ ಆರೋಪದ ಹಿನ್ನೆಲೆ ಅದನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಮಸೂದೆ 2018 ಅನ್ನು ಗುರುವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಯನ್ನು ಈಗಾಗಲೇ ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ ನಂತರ ಕಾನೂನು ಜಾರಿಗೆ ಬರಲಿದೆ. ಇಂದು ರಾಜ್ಯಸಭೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರು, ನರೇಂದ್ರ ಮೋದಿ ಸರ್ಕಾರ ದಲಿತ ಕಲ್ಯಾಣಕ್ಕೆ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದರು. ಅಲ್ಲದೆ ಯಾವದೇ ಒತ್ತಡಕ್ಕೆ ಮಣಿದು ಈ ಮಸೂದೆಯನ್ನು ಮಂಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾಗುವ ಪ್ರಕರಣದಲ್ಲಿ ತನಿಖಾಧಿಕಾರಿ ಯಾರ ಒಪ್ಪಿಗೆಯೂ ಇಲ್ಲದೆಯೇ ಆರೋಪಿಯನ್ನು ಬಂಧಿಸಲು ಮತ್ತು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಪ್ರಾಥಮಿಕ ವಿಚಾರಣೆಯ ಅಗತ್ಯವಿಲ್ಲ ಎಂದು ತಿಳಿಸಿದರು.
ತ್ರಿವಳಿ ತಲಾಖ್ ಮಸೂದೆ ತಿದ್ದುಪಡಿ
ನವದೆಹಲಿ, ಆ. 9: ತ್ರಿವಳಿ ತಲಾಖ್ ಮಸೂದೆ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದ್ದು, ಮ್ಯಾಜಿಸ್ಟ್ರೇಟ್ ರಿಂದ ಜಾಮೀನು ಪಡೆಯಲು ಅವಕಾಶ ನೀಡಲಾಗಿದೆ. ಇನ್ನು ತ್ರಿವಳಿ ತಲಾಖ್ ಅಪರಾಧ ಜಾಮೀನು ರಹಿತವಾಗಿದ್ದರೂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನೀಡಬಹುದಾಗಿದೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದ್ದು, ಅದನ್ನು ಕಾನೂನಾತ್ಮಕವಾಗಿ ಸಂಪೂರ್ಣ ತೆಗೆದು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ಕಳೆದ ಡಿಸೆಂಬರ್ನಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಿದೆ. ಮೂರು ಸಲ ತಲಾಖ್ ಎಂದು ಹೇಳಿ ವಿಚ್ಛೇದನ ನೀಡುವ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷದ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ಲೋಕಸಭೆಯಲ್ಲಿ ಅಂಗೀಕಾರ ಆಗಿರುವ ಈ ಮಸೂದೆ ಇನ್ನೂ ರಾಜ್ಯಸಭೆಯಲ್ಲಿ ಒಪ್ಪಬೇಕಿದೆ.