ಮಡಿಕೇರಿ, ಆ. 9: ಇಲ್ಲಿನ ಮಂಗಳೂರು ರಸ್ತೆಯಲ್ಲಿ ಭೂಕುಸಿತದೊಂದಿಗೆ ಹೆಚ್ಚಿನ ಅನಾಹುತ ತಪ್ಪಿಸಲು ಮೂರ್ನಾಡು ರಸ್ತೆಯ ಮೇಕೇರಿ ತಿರುವಿಗಾಗಿ ಕಾಟಕೇರಿ ಬಳಿ ಭಾಗಮಂಡಲ ಮಾರ್ಗವಾಗಿ ಬದಲಿ ವ್ಯವಸ್ಥೆ ಕೈಕೊಟ್ಟು ಕೆಸರು ಹೊಂಡಗಳಾದ ಪರಿಣಾಮ, ಸದ್ಯದ ಪರಿಸ್ಥಿತಿಯಲ್ಲಿ ಭಾರೀ ವಾಹನಗಳ ಹೊರತು ಇತರ ವಾಹನಗಳು ಎಂದಿನಂತೆ ಸಂಚರಿಸಲು ಕ್ರಮ ಕೈಗೊಳ್ಳಲಾಯಿತು. ಅಲ್ಲದೆ 16,200 ಕೆ.ಜಿ.ಗೂ ಅಧಿಕ ಸಾಂದ್ರತೆಯ ಭಾರೀ ವಾಹನಗಳು ಮಂಗಳೂರು ರಸ್ತೆಯಲ್ಲಿ ಸಂಚರಿಸದಂತೆ ನಿರ್ಬಂಧಿಸಲಾಯಿತು.ಇಂದು ಬೆಳಿಗ್ಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆಗಾಗಿ ಕಾಟಕೇರಿ ಬಳಿ ತಾಳತ್ಮನೆಯ ಭಾಗಮಂಡಲ ರಸ್ತೆ ತಿರುವಿನ ತನಕ ಎಲ್ಲಾ ವಾಹನ ಸಂಚಾರ ತಡೆಹಿಡಿಯಲಾಗಿತ್ತು. ಬದಲಾಗಿ ನಗರದ ಮೂರ್ನಾಡು ರಸ್ತೆಗಾಗಿ ಮೇಕೇರಿಯ ಶ್ರೀ ಗೌರಿ ಶಂಕರ ದೇಗುಲ ಪಕ್ಕದ ರಸ್ತೆ ಮೂಲಕ ಭಾಗಮಂಡಲ ಸಂಪರ್ಕ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಯಿತು. ಅಂತೆಯೇ ತಾಳತ್ಮನೆಯ ಬಳಿಯೇ ಮಂಗಳೂರು ಮಾರ್ಗದಿಂದ ಬರುವ ವಾಹನಗಳನ್ನು ತಡೆಹಿಡಿದು ಮೇಕೇರಿ ಮೂರ್ನಾಡು ರಸ್ತೆಗಾಗಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗಿತ್ತು.
ಪರಿಣಾಮ ಉಭಯ ಕಡೆ ವಾಹನಗಳ ದಟ್ಟಣೆಯೊಂದಿಗೆ ಸಾಲು ಸಾಲು ಆಗಮಿಸಿದ ಪರಿಣಾಮ, ಪರ್ಯಾಯ ಮಾರ್ಗದ ಎರಡು ಕಡೆಗಳಲ್ಲಿ
(ಮೊದಲ ಪುಟದಿಂದ) ಖಾಸಗಿ ಮತ್ತು ಸರಕಾರಿ ಬಸ್ಗಳ ಸಹಿತ ಭಾರೀ ಸಾಂದ್ರತೆಯ ಲಾರಿಗಳು ಏಕಕಾಲಕ್ಕೆ ಸಂಚರಿಸಲಾರದೆ ಸಿಲುಕಿಕೊಂಡವು. ವಾಸ್ತವ ತಿಳಿಯಲು ಆ ಮಾರ್ಗವಾಗಿ ತೆರಳಿದ್ದ ‘ಶಕ್ತಿ’ ವಾಹನವೂ ಕೂಡ ಕಿಲೋಮೀಟರ್ಗಟ್ಟಲೆ ನಿಲುಗಡೆಗೊಂಡಿದ್ದ ನೂರಾರು ವಾಹನಗಳ ಸಾಲಿನಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವಂತಾಯಿತು. ಕಿಷ್ಕಿಂಧೆಯಾದ ಈ ರಸ್ತೆಯ ಎರಡೂ ಬದಿ ಕೆಸರು ಕೊಂಪೆಯಿದ್ದು, ವಾಹನಗಳು ಸಾಗುವಾಗ ಅಲ್ಲಲ್ಲಿ ಚಕ್ರಗಳು ಹೂತುಹೋಗುತ್ತಿದ್ದ ದೃಶ್ಯ ಕಂಡುಬಂದಿತು.
ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವಲ್ಲಿ ಹೈರಾಣಾಗಿ ಹೋದರು. ಈ ವೇಳೆಗೆ ಅದೇ ಮಾರ್ಗವಾಗಿ ಪರಿಶೀಲನೆಗೆ ಆಗಮಿಸಿದ ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ಅವರು ಸಹಿತ ಮಾರ್ಗಮಧ್ಯೆ ಸಿಲುಕಿಕೊಂಡರು. ಅನ್ಯ ಮಾರ್ಗವಿಲ್ಲದೆ ಅರ್ಧದಿಂದ ಜಿಲ್ಲಾ ಕೇಂದ್ರಕ್ಕೆ ವಾಪಸ್ಸಾದ ಅವರು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಪರಿಸ್ಥಿತಿ ವಿವರಿಸಿದರು.
ಇತ್ತ ‘ಶಕ್ತಿ’ ಕೂಡ ಪರ್ಯಾಯ ಮಾರ್ಗವು ಕಿರಿದಾಗಿ ಕೇವಲ ಒಂದು ಬಸ್ ಏಕಮುಖ ಸಂಚರಿಸುವಷ್ಟು ಮಾತ್ರ ಅವಕಾಶವಿರುವ ರಸ್ತೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಿತು. ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಸಂದಿಗ್ಧ ಸ್ಥಿತಿ ಅರ್ಥೈಸಿಕೊಂಡು ಪೊಲೀಸರ ಕಣ್ಗಾವಲಿನಲ್ಲಿ ಮಂಗಳೂರು ರಸ್ತೆಗಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತುರ್ತು ಸಮಾಲೋಚನೆ: ಅಲ್ಲದೆ ತಮ್ಮ ಕಚೇರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಸುಬ್ರಮಣ್ಯ ಹೊಳ್ಳ ಹಾಗೂ ಸಹಾಯಕ ಅಭಿಯಂತರ ರಮೇಶ್ ಅವರುಗಳನ್ನು ಕರೆಸಿ, ಪರಿಸ್ಥಿತಿಯ ಒತ್ತಡ ಅರ್ಥೈಸಿಕೊಂಡು, ಕೂಡಲೇ ಕುಸಿದಿರುವ ಮಂಗಳೂರು ರಸ್ತೆಗೆ ಒಂದು ವಾರದೊಳಗೆ ಕಾಯಕಲ್ಪ ಕಲ್ಪಿಸುವಂತೆ ನಿರ್ದೇಶಿಸಿದರು. ಇಂಜಿನಿಯರ್ ಸುಬ್ರಮಣ್ಯ ಹೊಳ್ಳ ಅವರ ಪ್ರಕಾರ ಈ ಮಳೆಯಲ್ಲಿ ಏನೂ ಮಾಡುವಂತಿಲ್ಲ ಎನ್ನುವ ನಕಾರಾತ್ಮಕ ಉತ್ತರ ದೊರಕಿತು. ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿದ ಅವರು ಮಳೆಗಾಲದಲ್ಲಿ ಕೆಲಸ ಮಾಡುವದು ಕಷ್ಟಸಾಧ್ಯ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸ್ಪಷ್ಟ ಸೂಚನೆ ನೀಡಿ ಕನಿಷ್ಟ ಪಕ್ಷ ತಾತ್ಕಾಲಿಕವಾಗಿ ರಸ್ತೆ ಮತ್ತೆ ಕುಸಿಯದಂತೆ ತಾಂತ್ರಿಕ ವಿಧಾನದಿಂದ ಆಧಾರ ಕಲ್ಪಿಸಿ ರಸ್ತೆ ಸಂಚಾರಕ್ಕೆ ಆಸ್ಪದ ನೀಡುವಂತೆ ನಿರ್ದೇಶಿಸಿದರು. ಶುಕ್ರವಾರ ದಿನ ಹಿರಿಯ ಇಂಜಿನಿಯರ್ಗಳು ಜಿಲ್ಲೆಗೆ ಆಗಮಿಸುತ್ತಿದ್ದು, ಅವರುಗಳೊಂದಿಗೆ ಸಂಪರ್ಕಿಸಿ ಬಳಿಕ ಸೂಕ್ತ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸುವದಾಗಿ ಇಂಜಿನಿಯರ್ ನುಡಿದರು.
ಖುದ್ದು ಪರಿಶೀಲನೆ : ಸಂಬಂಧಿಸಿದ ಅಧಿಕಾರಿಗಳ ತಂಡ ಸಹಿತ ಪರ್ಯಾಯ ಮಾರ್ಗದಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಖುದ್ದು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಮೇಕೇರಿ- ಕಾಟಕೇರಿ ನಡುವೆ ಕಾವೇರಿ ಬಡಾವಣೆ ಎಂಬಲ್ಲಿನ ತಿರುವೊಂದರಲ್ಲಿ ಖಾಸಗಿ ಬಸ್ ಹಾಗೂ ಲಾರಿಯೊಂದು ಉಭಯ ಕಡೆ ಕಿಷ್ಕಿಂಧೆಯಲ್ಲಿ ಸಿಲುಕಿದ ಪರಿಣಾಮ ಆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತು. ಸನ್ನಿವೇಶ ಅರ್ಥೈಸಿಕೊಂಡ ಜಿಲ್ಲಾಧಿಕಾರಿ ಕೂಡಲೇ ಮಡಿಕೇರಿಯಿಂದ ಮಂಗಳೂರು ರಸ್ತೆಯ ಭೂಕುಸಿತದ ಮಾರ್ಗವಾಗಿ ವಾಹನಗಳ ಓಡಾಟಕ್ಕೆ ಮೌಖಿಕ ಸೂಚನೆ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು.
ಹೀಗಾಗಿ ತಾಸುಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಮಧ್ಯಾಹ್ನದ ಬಳಿಕ ಯಥಾಸ್ಥಿತಿಯಲ್ಲಿ ಎಂದಿನಂತೆ ಸುಗಮ ಓಡಾಟ ಗೋಚರಿಸಿತು. ಭೂಕುಸಿತ ಉಂಟಾಗಿರುವ ಸ್ಥಳದಲ್ಲಿ 24 ಗಂಟೆಯೂ ಹಗಲು - ರಾತ್ರಿ ಪೊಲೀಸ್ ನಿಯೋಜನೆ ಕಲ್ಪಿಸಲಾಯಿತು. -ಶ್ರೀಸುತ, ಚಿತ್ರ: ಟಿ.ಜಿ. ಸತೀಶ್.