ಸೋಮವಾರಪೇಟೆ, ಆ.7: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಸೆ. 6 ರಂದು ವಚನ ದಿನ ಕಾರ್ಯಕ್ರಮ ಹಾಗು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಪಟ್ಟಣ ಪತ್ರಿಕಾ ಭವನದಲ್ಲಿ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಎಸ್.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಚರ್ಚೆ ನಡೆಸಲಾಯಿತು. ಪ್ರತೀ ವರ್ಷ ಆಗಸ್ಟ್ 29ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದ್ದು ಈ ಬಾರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ಕ್ಕೆ ನಡೆಸಲು ನಿರ್ಧರಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ವಚನ ದಿನ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲು ಪರಿಷತ್ತಿನ ಗೌರವಾಧ್ಯಕ್ಷ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿಗಳ ಸಲಹೆಯಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಪರಿಷತ್ತಿನ ಕಾರ್ಯ ಚಟುವಟಿಕೆ ಹಾಗೂ ಅದರ ಧ್ಯೇಯೋದ್ದೇಶಗಳನ್ನು ಜನ ಸಾಮಾನ್ಯರಿಗೆ ತಲಪಿಸುವಂತಾಗಬೇಕು. ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ತಾಲೂಕು ಮಟ್ಟದಲ್ಲಿ ವಚನ ಗಾಯನ (ಕಂಠಪಾಠ) ಸ್ಪರ್ಧೆ ಆಯೋಜಿಸ ಲಾಗುವದು ಎಂದು ಎಸ್.ಮಹೇಶ್ ತಿಳಿಸಿದರು.

ವಚನ ದಿನ ಕಾರ್ಯಕ್ರಮದಲ್ಲಿ ಸಾಧಕರು ಹಾಗೂ 2017-18ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲು ತೀರ್ಮಾನಿಸ ಲಾಯಿತು.

ಸೆಪ್ಟೆಂಬರ್ 6ರಂದು ಹೆಬ್ಬಾಲೆಯಲ್ಲಿ ವಚನ ದಿನ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ವಚನ ಗಾಯನ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ, ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪರಿಷತ್‍ನ ಜಿಲ್ಲಾ ಖಜಾಂಜಿ ಡಿ.ಬಿ.ಸೋಮಪ್ಪ, ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಮಹದೇವಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಎಸ್.ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.