ಮಡಿಕೇರಿ, ಆ. 7: ಮನೆ ನಿವೇಶನ ಮಾರಿ ಮೂಲಭೂತ ಸೌಕರ್ಯ ಒದಗಿಸದ ಮಾರಾಟಗಾರರಿಗೆ 1 ಲಕ್ಷ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.

ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಡಿ.ಕೆ. ದೀಪಕ್‍ರವರು 34.7.2015ರಲ್ಲಿ ಎಂ.ಎಂ. ಶಹೀರ್‍ರವರಿಂದ ಮನೆ ನಿವೇಶನವನ್ನು ಖರೀದಿಸಿದ್ದರು. ಶಹೀರ್‍ರವರು ಗುಮ್ಮನಕೊಲ್ಲಿ ಗ್ರಾಮದ ಸರ್ವೆ ನಂ. 83/1ರಲ್ಲಿ 0.85 ಎಕರೆ ವ್ಯವಸಾಯದ ಜಮೀನನ್ನು ವ್ಯವಸಾಯೇತರ ವಾಸದ ಉದ್ದೇಶಕ್ಕಾಗಿ ಕೊಡಗು ಜಿಲ್ಲಾಧಿಕಾರಿಯವರಿಂದ ಆದೇಶ ಪಡೆದು ಭೂ ಪರಿವರ್ತನೆ ಮಾಡಿ ಸುಮಾರು 12 ಮನೆ ನಿವೇಶನಗಳ ಬಡಾವಣೆ ನಿರ್ಮಿಸಿದ್ದರು. ಬಡಾವಣೆಯಲ್ಲಿನ ಮನೆ ನಿವೇಶನ ಮಾರಾಟ ಮಾಡಲು ಕುಶಾಲನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆಯನ್ನು ಸಹ ಪಡೆದಿದ್ದರು.

ದೀಪಕ್ ಅವರು 2 ಮನೆ ನಿವೇಶನವನ್ನು ಖರೀದಿಸಿದ ಸಂದರ್ಭ ಮಾರಾಟಗಾರರು ಮೂಲಭೂತ ಸೌಕರ್ಯಗಳಾದ ವಿದ್ಯುತ್, ನೀರು, ಸೂಕ್ತವಾದ ರಸ್ತೆ ಮತ್ತು ಒಳಚರಂಡಿ ಸೌಲಭ್ಯಗಳನ್ನು ಒದಗಿಸುವದಾಗಿ ಭರವಸೆಯನ್ನು ನೀಡಿದ್ದರಾದರೂ ಯಾವದನ್ನೂ ಪೂರೈಸಿರಲಿಲ್ಲ.

ಈ ಬಗ್ಗೆ ಡಿ.ಕೆ. ದೀಪಕ್‍ರವರು ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಎಂ.ಎಂ. ಶಹೀರ್‍ರವರ ಮೇಲೆ ದೂರು ಸಲ್ಲಿಸಿದ್ದರು. ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಶಹೀರ್‍ರವರಿಗೆ 3 ತಿಂಗಳ ಒಳಗಾಗಿ ಸದರಿ ಬಡಾವಣೆಯಲ್ಲಿ ಟ್ರಾನ್ಸ್‍ಫಾರ್ಮರ್ ಸಹಿತ ವಿದ್ಯುತ್ ಸಂಪರ್ಕ, ನೀರು, ಸೂಕ್ತವಾದ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಒದಗಿಸಲು ಮತ್ತು 5 ಸಾವಿರ ಅರ್ಜಿ ಶುಲ್ಕ ಸೇರಿದಂತೆ ಒಂದು ಲಕ್ಷ ಪರಿಹಾರವಾಗಿ ಅರ್ಜಿದಾರರಿಗೆ ಪಾವತಿಸುವಂತೆಯೂ ಹಾಗೂ ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯದ ಕಾರಣ ಸಂಬಂಧಿಸಿದ ಅಧಿಕಾರಿಯವರ ಮೇಲೆ ಸೂಕ್ತ ಶಿಸ್ತು ಕ್ರಮಕೈಗೊಂಡು 9 ತಿಂಗಳ ಒಳಗಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಆದೇಶ ಹೊರಡಿಸಿದೆ.

ದೀಪಕ್ ಅವರ ಪರವಾಗಿ ಕುಶಾಲನಗರದ ವಕೀಲರುಗಳಾದ ಚಂದನ್ ಕುಮಾರ್ ಸಿ.ಬಿ. ಮತ್ತು ಮಡಿಕೇರಿಯ ಸುಧೀಶ್ ಹೆಚ್.ಯು. ಇವರು ವಾದಿಸಿದ್ದರು.