ಕುಶಾಲನಗರ, ಆ. 7: ಕುಶಾಲನಗರ ಪಟ್ಟಣ ಪಂಚಾಯಿತಿ ಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರಕಾರವನ್ನು ಒತ್ತಾಯಿಸಲು ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ಸಂಬಂಧ ಸರ್ವ ಪಕ್ಷಗಳು, ವಿವಿಧ ಸಂಘ-ಸಂಸ್ಥೆಗಳ ಸಭೆ ಕುಶಾಲನಗರದಲ್ಲಿ ನಡೆಯಿತು.

ಕುಶಾಲನಗರ ಪಟ್ಟಣ ಪಂಚಾಯಿತಿ ಜನಪ್ರತಿನಿಧಿಗಳು ಮತ್ತು ಚೇಂಬರ್ ಆಫ್ ಕಾಮರ್ಸ್ ನೇತೃತ್ವದಲ್ಲಿ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣೆಯನ್ನು ಬಹಿಷ್ಕರಿಸಿ ಒಮ್ಮತದ ನಿರ್ಣಯ ಕೈಗೊಳ್ಳುವ ಸಂಬಂಧ ಚರ್ಚೆಗಳು ನಡೆದವು. ಕುಶಾಲನಗರ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದಲ್ಲಿ ಉಂಟಾಗುವ ಅನುಕೂಲ, ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಪ್ರಮುಖರು ಸಭೆಗೆ ಮಾಹಿತಿ ಒದಗಿಸಿದರು. ಈ ಹಿಂದೆಯೂ ಕೂಡ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಗೇರಿಸುವ ಸಂದರ್ಭದ ಹೋರಾಟದ ಬಗ್ಗೆ ಪಂಚಾಯಿತಿಯ ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರ ಸಭೆಯ ಗಮನಕ್ಕೆ ತಂದರು. ಪುರಸಭೆಯಾದಲ್ಲಿ ಊರಿನ ಸರ್ವಾಂಗೀಣ ಅಭಿವೃದ್ಧಿಗೆ, ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಪೂರಕವಾದ ವಾತಾವರಣ ನಿರ್ಮಾಣಗೊಳ್ಳುತ್ತದೆ. ಸಮರ್ಪಕ ಅನುದಾನ ಲಭಿಸುವ ಹಿನ್ನೆಲೆ ಎಲ್ಲರೂ ಒಮ್ಮತದ ತೀರ್ಮಾನ ಕೈಗೊಂಡು ಚುನಾವಣೆ ಬಹಿಷ್ಕರಿಸುವಂತೆ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಸದಸ್ಯ ಹೆಚ್.ಜೆ. ಕರಿಯಪ್ಪ ಆಗ್ರಹ ವ್ಯಕ್ತಪಡಿಸಿದರು. ರಾಜಕೀಯ ಪಕ್ಷಗಳ ಮುಖಂಡರು ಈ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರುವಂತೆ ಅವರು ಕೋರಿದರು.

ಈ ಸಂದರ್ಭ ಯಾವದೇ ರಾಜಕೀಯ ಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲರಾದ ಹಿನ್ನೆಲೆ ತಾ. 9 ಕ್ಕೆ ಸಭೆ ಮುಂದೂಡಲಾಯಿತು. ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತ್ ರಾಜ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಜೆಡಿಎಸ್ ನಗರಾಧ್ಯಕ್ಷ ವಿ.ಎಸ್. ಆನಂದಕುಮಾರ್, ವಿವಿಧ ಪಕ್ಷಗಳ ಪ್ರಮುಖರಾದ ಜಿ.ಎಲ್. ನಾಗರಾಜ್, ಎಂ.ವಿ. ನಾರಾಯಣ, ವಿ.ಡಿ. ಪುಂಡರೀಕಾಕ್ಷ, ಎಂ.ಕೆ. ದಿನೇಶ್, ಎಂ.ಎಂ. ಚರಣ್, ಡಿ.ಕೆ. ತಿಮ್ಮಪ್ಪ, ಪ್ರಮೋದ್ ಮುತ್ತಪ್ಪ, ಅಬ್ದುಲ್ ಖಾದರ್ ಮತ್ತಿತರರು ಇದ್ದರು.